ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಲ್ಯಾಂಡ್ ಜಿಹಾದ್ ನೆಪದಲ್ಲಿ ರಾಜ್ಯ ಸರ್ಕಾರ ವಕ್ಫ್ ಅಕ್ರಮ ನಡೆಸುತ್ತಿರುವುದನ್ನು ವಿರೋಧಿಸಿ ಬಿಜೆಪಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಮಂಗಳವಾರ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕಾರ್ಯದರ್ಶಿ ಜಿಂಕಲ್ ಬಸವರಾಜ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರ ಜಮೀನುಗಳನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಬಿ.ಝಡ್.ಜಮೀರ್ ಇವರುಗಳು ವಶಪಡಿಸಿಕೊಳ್ಳಲು ಹೊರಟಿದ್ದಾರೆ. ಎಸ್ಸಿ.ಎಸ್ಟಿ. ಹಾಗೂ ಸ್ಮಾರಕಗಳಿರುವ ಸಾವಿರಾರು ಎಕರೆ ಜಮೀನುಗಳನ್ನು ಕಬಳಿಸಿ ವಕ್ಫ್ ಎಂದು ನಮೂದಿಸಲು ಹೊರಟಿದೆ. ಸುಲಭವಾಗಿ ಪಹಣಿ ಬದಲಾಗುವುದಿಲ್ಲ. ಮುಟೇಷನ್ ಆಗಬೇಕು. ಮಠ ಮಾನ್ಯ, ಸ್ಕೂಲ್, ಚರ್ಚ್‌ಗೆ ಸೇರಿದ ಜಮೀನನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಹುನ್ನಾರವಿದು. ೧೯೭೪ ರ ವಕ್ಫ್ ಕಾಯಿದೆಯನ್ನು ಕೂಡಲೆ ರದ್ದುಪಡಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು.
ಎಂ.ಶಿವಮೂರ್ತಿ ಚಳ್ಳಕೆರೆ ಮಾತನಾಡಿ ಚಳ್ಳಕೆರೆ ತಾಲ್ಲೂಕಿನಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಭೂಮಿಯನ್ನು ವಕ್ಫ್ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಹೊರಟಿದೆ. ವಕ್ಫ್ ಬಂದಿದ್ದು, ೧೯೯೫ ರಲ್ಲಿ. ನಮಗೆ ಜಮೀನು ನೀಡಿರುವುದು ೧೯೫೯ ರಲ್ಲಿ ಒಂದಕ್ಕೊಂದು ತಾಳೆಯಿಲ್ಲವಾದರೂ ರಾಜ್ಯ ಸರ್ಕಾರ ಜಮೀನುಗಳನ್ನು ಕಬಳಿಸಲು ಹೊರಟಿದೆ. ವಸತಿ ಸಚಿವ ಜಮೀರ್ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ಗಳನ್ನು ಬೆದರಿಸುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ರೈತರ ಜಮೀನುಗಳು ಉಳಿಯಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೊಂದು ಕಡೆ ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಶೋಭೆಯಲ್ಲ. ರಕ್ತಕ್ರಾಂತಿಯಾಗಲಿ ಒಂದಿಚು ಜಮೀನು ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೀಮಸಮುದ್ರದ ಜಿ.ಎಸ್.ಅನಿತ್‌ಕುಮಾರ್ ಮಾತನಾಡುತ್ತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿಯ ಹಗರಣದಲ್ಲೆ ಮುಳುಗಿರುವುದು ಸಾಕಾಗದೆ ಈಗ ವಕ್ಫ್ ಖ್ಯಾತೆ ಶುರು ಮಾಡಿದೆ. ಮುಡಾ, ವಾಲ್ಮೀಕಿ ಹಗರಣ ಮುಚ್ಚಿ ಹಾಕಲು ಲ್ಯಾಂಡ್ ಜಿಹಾದ್ ಕೈಗೆತ್ತಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಜಮೀರ್ ಅಹಮದ್‌ಖಾನ್ ಇವರುಗಳನ್ನು ಅಧಿಕಾರದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ ದೇಶದಲ್ಲಿ ಎಲ್ಲೆಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆಯೋ ಅಲ್ಲೆಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಹಾಗೂ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಪಂಡಿತರುಗಳ ಹತ್ಯೆಯಾಗುತ್ತಿದೆ. ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಇಷ್ಟು ಸಾಲದೆಂಬಂತೆ ಈಗ ಲ್ಯಾಂಡ್ ಜಿಹಾದ್ ತಗಾದೆ ತೆಗೆದಿದೆ. ರೈತರು ತಮ್ಮ ತಮ್ಮ ಪಹಣಿಗಳನ್ನು ಮೊದಲು ಚೆಕ್ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ಗುಡ್ಡದರಂಗವ್ವನಹಳ್ಳಿ ಬಳಿಯಿರುವ ವಿಶ್ವವಿದ್ಯಾಲಯದ ಜಾಗವನ್ನು ವಕ್ಫ್‌ಗೆ ಸೇರಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಜಮೀನನ್ನು ವಶಪಡಿಸಿಕೊಳ್ಳುವುದಿಲ್ಲವೆಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು. ರಾತ್ರೋ ರಾತ್ರಿ ಜಮೀನಿನ ಖಾತೆಗಳು ಬದಲಾವಣೆಯಾಗುತ್ತಿರುವುದರಿಂದ ಸಿ.ಎಂ. ಮತ್ತು ವಸತಿ ಸಚಿವ ಇಬ್ಬರು ರಾಜಿನಾಮೆ ನೀಡಬೇಕು. ಇಲ್ಲವಾದಲ್ಲಿ ಬೃಹತ್ ಹೋರಾಟ ನಡೆಸಲಾಗುವುದೆಂದರು.
ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‌ಕುಮಾರ್, ರಾಂದಾಸ್, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‌ಬೇದ್ರೆ, ಮೊಳಕಾಲ್ಮುರು ಮಂಡಲ ಅಧ್ಯಕ್ಷ ಡಾ.ಮಂಜುನಾಥ್, ಭರಮಸಾಗರ ಮಂಡಲ ಅಧ್ಯಕ್ಷ ಶೈಲೇಶ್, ಶಾಂತಮ್ಮ, ಯರ್ರಿಸ್ವಾಮಿ, ಲೋಕೇಶ್, ರಾಮು, ಚಂದ್ರು, ಸಿಂಧುತನಯ, ಪರಶುರಾಮ್, ಕಲ್ಲಂಸೀತಾರಾಮರೆಡ್ಡಿ, ಕಾರ್ಯದರ್ಶಿ ಮೋಹನ್, ನರೇಂದ್ರ ಹೊನ್ನಾಳಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.