ಕಾಲುವೆಹಳ್ಳಿಯಲ್ಲಿ ಎಸ್ಸಿ-ಎಸ್ಟಿ ಸಮುದಾಯ ಸೌಹಾರ್ದತೆಯಿಂದ ಇದ್ದೇವೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಲುವೆಹಳ್ಳಿ ಗ್ರಾಮದಲ್ಲಿ ಯಾವುದೇ ರೀತಿಯ ಗೊಂದಗಳಿಗೆ ಅವಕಾಶ ಇಲ್ಲದೆ ಶಾಂತಿ ನಲೆಸಿದೆ, ಗ್ರಾಮದಲ್ಲಿ ನಡೆದ ಕಹಿ ಘಟನೆಯನ್ನು ಬೇರೆ ಬೇರೆ ಅರ್ಥ ಬರುವಂತೆ ಬಿಂಬಿಸಲಾಗುತ್ತಿರುವುದು ಬೇಸರ ಸಂಗತಿ ಎಂದು ಕಾಲುವೆಹಳ್ಳಿ ಗ್ರಾಮದ ಮುಖಂಡ ಮಹಂತೇಶ್ ನಾಯಕ ತಿಳಿಸಿದ್ದಾರೆ.

ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಚಳ್ಳಕೆರೆ ತಾಲೂಕು ಕಾಲುವೆಹಳ್ಳಿ ಗ್ರಾಮದಲ್ಲಿ ಅಸ್ಪೃಶ್ಯ ಆಚರಣೆಯ ಪ್ರಕರಣದ ಕುರಿತು ಕಾಲುವೆಹಳ್ಳಿ ಗ್ರಾಮಸ್ಥರ ಪರವಾಗಿ ಅವರು ಮಾತನಾಡಿದರು.
ಕಳೆದ ಒಂದು ವಾರದ ಹಿಂದೆ ಚಳ್ಳಕೆರೆ ತಾಲ್ಲೂಕು ಕಾಲುವೆಹಳ್ಳಿ ಗ್ರಾಮದಲ್ಲಿ ದಲಿತ ಸಮಾಜದ ಯುವಕರಿಗೆ ಕಟಿಂಗ್ ಮಾಡದೆ ಅಸ್ಪೃಶ್ಯತೆ ಆಚರಣೆ ನಡೆಸುತ್ತಿರುವ ಬಗ್ಗೆ ಗ್ರಾಮದ ಕೆಲ ಯುವಕರಿಂದ ಚಳಕೆರೆ ತಹಶೀಲ್ದಾರ್ ಅವರಿಗೆ ದೂರು ನೀಡಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ, ಚಳ್ಳಕೆರೆ ತಹಶೀಲ್ದಾರ್ ಸೇರಿದಂತೆ ಅನೇಕ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿದ್ದರು.

ಈ ಪ್ರಕರಣಕ್ಕೆ ಸಂಬಂಧಪಟ್ಟ ಕಟಿಂಗ್ ಶಾಪ್ ಮಾಲೀಕ ಸೇರಿದಂತೆ ನಾಲ್ಕು ಜನರ ಮೇಲೆ ಜಾತಿ ನಿಂದನೆ ಅಸ್ಪೃಶ್ಯತಾ ಆಚರಣೆ, ಕಾಯ್ದೆಯ ಅಡಿ ಪ್ರಕರಣವು ದಾಖಲಾಗಿದ್ದು ಆರೋಪಿ ಓರ್ವನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ ಎಂದು ಅವರು ತಿಳಿಸಿದರು.

ಕಾಲುವೆಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಮಾಜದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದು ಎಲ್ಲರೂ ಅನನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ವಿದ್ಯಾಭ್ಯಾಸ ಪಡೆಯದ ಕಾನೂನಿನ ಜ್ಞಾನವಿಲ್ಲದ ಕೆಲ ಯುವಕರಿಂದ ನಡೆದ ಫೋನ್ ಸಂಭಾಷಣೆಯಿಂದ ಈ ಗೊಂದಲ ಸೃಷ್ಟಿಯಾಗಿದೆ. ಕಾಲುವೆಹಳ್ಳಿ ಗ್ರಾಮದ ಎಲ್ಲ ಹಿರಿಯರು ಮುಖಂಡರಿಗೂ ಈ ಅಸ್ಪೃಶ್ಯತೆ ಆಚರಣೆಯ ವಿಚಾರವಾಗಿ ಮನಸ್ಸಿಗೆ ನೋವಾಗಿದೆ. ಹಾಗಾಗಿ ಗೊಂದಲಮಯವಾದ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಅಸ್ಪೃಶ್ಯ ಆಚರಣೆ ಎಂಬುದು ಸಾಮಾಜಿಕ ಒಂದು ದೊಡ್ಡ ಪಿಡುಗಾಗಿ ಇವತ್ತು ನಮ್ಮನ್ನು ಕಾಡುತ್ತಿರುವುದು ದುರಾದೃಷ್ಟಕರ ಸಂಗತಿ. ಇಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ನಾವೆಲ್ಲರೂ ಕೂಡ ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಸಮಾಜದ ಯುವಕರಿಗೆ ವೃದ್ಧರಿಗೆ ಗ್ರಾಮದಲ್ಲಿ ಸಮಾನತೆಯ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲರ ಸಹಮತವೂ ಇದೆ. ಇದಕ್ಕೆ ಯಾರ ವಿರೋಧವೂ ಇಲ್ಲ ಆದರೂ ಈ ಗೊಂದಲ ಸೃಷ್ಟಿ ಆಗಿರುವುದಕ್ಕೆ ನಮಗೆಲ್ಲ ಬೇಸರವಿದೆ ಎಂದು ಅವರು ವಿಷಾದ ವ್ಯಕ್ತ ಪಡಿಸಿದ್ದಾರೆ.

ಎಂದಿನಂತೆ ಕಾಲವೇಹಳ್ಳಿ ಗ್ರಾಮದಲ್ಲಿ ಸಾಮರಸ್ಯದಿಂದ ಬದುಕಲು ಗ್ರಾಮದ ಹಿರಿಯರ ಆಶಯವಾಗಿದ್ದು ಇದಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸುತ್ತೇವೆ ಎಂದು ಅವರು ಗ್ರಾಮಸ್ಥರ ಪರವಾಗಿ ಮಹಂತೇಶ್ ನಾಯಕ ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ಆರ್.ಪಾಲಯ್ಯ, ಪಟೇಲ್ ಶ್ರೀನಿವಾಸ್, ಕೆ ಜಿ ರಾಮಣ್ಣ , ರಂಗಸ್ವಾಮಿ, ಹೇಮಣ್ಣ, ಕೆ ಪಿ ಗಾದ್ರುಪಾಲಯ್ಯ, ದ್ರಾಕ್ಷಾಯಿಣಿ ಪಾಲಯ್ಯ, ಗಾದ್ರಪಾಲಯ್ಯ, ಡಿಆರ್ ತಿಮ್ಮಣ್ಣ, ಸೊಪ್ಪಿನ ಮಂಜಣ್ಣ ಸೇರಿದಂತೆ ಕಾಲುವೆಹಳ್ಳಿ ಗ್ರಾಮಸ್ಥರು ಇದ್ದರು.

- Advertisement -  - Advertisement -  - Advertisement - 
Share This Article
error: Content is protected !!
";