ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಅಕ್ಕಿ, ಗೋಧಿ, ಬೇಳೆ ಸೇರಿದಂತೆ ದ್ವಿದಳ ಧಾನ್ಯಗಳ ಬೆಲೆಗಳನ್ನು ಮಾರುಕಟ್ಟೆಯಲ್ಲಿ ನಿಯಂತ್ರಣದಲ್ಲಿಡುವ ದೃಷ್ಟಿಯಿಂದ ಭಾರತ್ ಬ್ರಾಂಡ್ ಅಡಿಯಲ್ಲಿ ಎರಡನೇ ಹಂತದಲ್ಲಿ ಅಕ್ಕಿ ಮತ್ತು ಗೋಧಿ ಹಿಟ್ಟು ಮಾರಾಟಕ್ಕೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದ್ದಾರೆ.
ದೆಹಲಿಯ ಕೃಷಿ ಭವನದಲ್ಲಿ NCCF, NAFED ಮತ್ತು ಕೇಂದ್ರೀಯ ಭಂಡಾರ್‌ನ ಮೊಬೈಲ್ ವ್ಯಾನ್‌ಗಳಿಗೆ ಚಾಲನೆ ನೀಡುವ ಮೂಲಕ ಭಾರತ್ ಗೋಧಿ ಹಿಟ್ಟು ಮತ್ತು ಭಾರತ್ ಅಕ್ಕಿ ಚಿಲ್ಲರೆ ಮಾರಾಟದ 2ನೇ ಹಂತಕ್ಕೆ ಜೋಶಿ ಚಾಲನೆ ನೀಡಿದರು.
ಮೊದಲ ಹಂತದ ಸಮಯದಲ್ಲಿ ಸುಮಾರು 15.20 ಲಕ್ಷ ಮೆಟ್ರಿಕ್ ಟನ್ ಭಾರತ್ ಗೋಧಿ ಹಿಟ್ಟು ಮತ್ತು 14.58 ಲಕ್ಷ ಮೆಟ್ರಿಕ್ ಟನ್ ಭಾರತ್ ರೈಸ್ ಅನ್ನು ಸಾಮಾನ್ಯ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಲಭ್ಯಗೊಳಿಸಲಾಗಿತ್ತು.
ಎರಡನೇ ಹಂತದ ಆರಂಭಿಕ ಹಂತದಲ್ಲಿ 3.69 ಲಕ್ಷ ಮೆಟ್ರಿಕ್ ಟನ್ ಗೋಧಿ ಮತ್ತು 2.91 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಚಿಲ್ಲರೆ ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲಾಗಿದೆ. ಅಕ್ಕಿ ಮತ್ತು ಗೋಧಿ ಹಿಟ್ಟನ್ನು NCCF, NAFED ಮತ್ತು ಇ-ಕಾಮರ್ಸ್/ ಬಿಗ್ ಚೈನ್ ರಿಟೇಲರ್‌ಗಳ ಅಂಗಡಿಗಳು ಮತ್ತು ಮೊಬೈಲ್ ವ್ಯಾನ್‌ಗಳಲ್ಲಿ ಲಭ್ಯವಿರುತ್ತದೆ.
5 ಕೆಜಿ ಮತ್ತು 10 ಕೆಜಿ ಚೀಲಗಳಲ್ಲಿ ಮಾರಾಟ ಮಾಡಲಾಗುತ್ತದೆ. ಅಕ್ಕಿಯ ಬೆಲೆ ಪ್ರತಿ ಕೆಜಿಗೆ 34 ರೂ. ಮತ್ತು ಗೋಧಿ ಹಿಟ್ಟಿನ ಬೆಲೆಯನ್ನು ಪ್ರತಿ ಕೆಜಿಗೆ 29 ರೂ. ನಿಗದಿ ಮಾಡಿದೆ.
ಮಾರಾಟಕ್ಕೆ ಚಾಲನೆ ನೀಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೋಶಿ, ಭಾರತ ಗೋಧಿ ಹಿಟ್ಟು, ಅಕ್ಕಿಯನ್ನು ಎರಡನೇ ಹಂತದಲ್ಲಿ ಕೊಡುವ ತಿರ್ಮಾನ ಮಾಡಿದೆ. ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸಲು ಇದನ್ನು ಪರಿಚಯಿಸಿದೆ. ಬೆಲೆ ನಿಯಂತ್ರಣ ಫಂಡ್ ಮೂಲಕ ಇದನ್ನು ಮಾಡಲಾಗುತ್ತಿದೆ ಎಂದರು.
ಅಗತ್ಯ ವಸ್ತುಗಳ ಬೆಲೆ 9 ವರ್ಷದಲ್ಲಿ ಬಹುತೇಕ ಸ್ಥಿರವಾಗಿದೆ. ಆದರೆ ಈ ವರ್ಷ ಬೇರೆ ಬೇರೆ ಕಾರಣಗಳಿಂದ ಬೆಲೆ ಏರಿಕೆಯಾಗುತ್ತಿದೆ. ಈಗಾಗಲೇ ಬೇಳೆ ಕಾಳುಗಳನ್ನು ಭಾರತ್ ಬ್ರ್ಯಾಂಡ್ ಮೂಲಕ ಮಾರಾಟ ಮಾಡುತ್ತಿದ್ದೇವೆ.
ಅಕ್ಕಿಗೆ 34 ರೂ, ಗೋಧಿ ಹಿಟ್ಟಿಗೆ 29 ಬೆಲೆ ನಿಗದಿ ಮಾಡಿದೆ. ರೈತರಿಗೆ ತೊಂದರೆಯಾಗಬಾರದು ಎಂದು ರೈತರಿಂದ ಸರ್ಕಾರ ಖರೀದಿ ಮಾಡುತ್ತಿದೆ. ಗ್ರಾಹಕರಿಗೆ ಬೆಲೆ ಏರಿಕೆ ಸಮಸ್ಯೆ ಆಗಬಾರದು ಎಂದು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.