ಚಂದ್ರವಳ್ಳಿ ನ್ಯೂಸ್, ವಾಷಿಂಗ್ಟನ್:
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅಭೂತ ಪೂರ್ವ ಜಯ ಸಾಧಿಸಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದ್ದು ಭಾರೀ ಗೆಲವು ಸಾಧಿಸಿದ ಟ್ರಂಪ್, ಅಮೆರಿಕಕ್ಕೆ ಮತ್ತೆ ಸುವರ್ಣಯುಗ ತರುವುದಾಗಿ ವಾಗ್ದಾನ ಮಾಡಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ನೀಡಿದ್ದೀರಿ. ಈ ಜನಾದೇಶದೊಂದಿಗೆ ಅಮೆರಿಕವನ್ನು ಮತ್ತೆ ಸುವರ್ಣಯುಗದ ಹಳಿಗೆ ತರುವೆ. ದೇಶವನ್ನು ಮತ್ತೊಮ್ಮೆ ಶ್ರೇಷ್ಠವಾಗಿಸಲು ಪ್ರತಿಕ್ಷಣವೂ ಪ್ರಯತ್ನಿಸುವೆ ಎಂದು ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ ಪಾಮ್ ಬೀಚ್ ಕನ್ವೆನ್ಷನ್ ಸೆಂಟರ್‌ನಲ್ಲಿ ತಮ್ಮ ಬೆಂಬಲಿಗರನ್ನುದ್ದೇಶಿಸಿ ಟ್ರಂಪ್ ಮಾತನಾಡಿದರು.
“ಇದು ಹಿಂದೆಂದೂ ನೋಡಿರದಂತಹ ರಾಜಕೀಯ ಹೋರಾಟವಾಗಿದೆ. ನಾನು ಕಂಡ ಅತಿ ಕಠಿಣ ಚುನಾವಣೆಯಾಗಿದೆ. ಬಹುಶಃ ಇದು ದೇಶದ ಇತಿಹಾಸದಲ್ಲೂ ಮೊದಲಿದ್ದರೂ ಅಚ್ಚರಿಯೇನಲ್ಲ. ನೀವು ನೀಡಿದ ಜಯದಿಂದ ದೇಶ ಕಟ್ಟಲು ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.
ಬಲಿಷ್ಠ ದೇಶ ಕಟ್ಟುವೆ: ನನ್ನ ಜೀವನದ ಅತ್ಯಂತ ಪ್ರಮುಖ ಗಳಿಗೆಯಾಗಿದೆ. ನನ್ನ ಸರ್ವಸ್ವವನ್ನು ಅಮೆರಿಕಕ್ಕೆ ಸಮರ್ಪಿಸುವೆ. ದೇಶದ ಪ್ರತಿ ನಾಗರಿಕ, ಕುಟುಂಬಕ್ಕಾಗಿ ಮತ್ತು ನಮ್ಮ ಭವಿಷ್ಯಕ್ಕಾಗಿ ಹೋರಾಟ ಮಾಡುತ್ತೇವೆ. ಪ್ರತಿದಿನ, ನಾನು ಉಸಿರಾಡುವವರೆಗೆ ನಿಮಗಾಗಿ ಹೋರಾಡುವೆ. ಮುಂದಿನ ಪೀಳಿಗೆಗೆ ಅರ್ಹವಾದ, ಸುರಕ್ಷಿತ ಮತ್ತು ಸಮೃದ್ಧ ದೇಶ ಕಟ್ಟಿಕೊಡಲು ಶ್ರಮಿಸುವೆ ಎಂದು ಭರವಸೆ ನೀಡಿದ್ದಾರೆ.
ಅಕ್ರಮ ವಲಸೆ ಸ್ಥಗಿತ-ಟ್ರಂಪ್
ಟ್ರಂಪ್ ಅವರು ಮುಂದುವರೆದು ಮಾತನಾಡಿ ಅಕ್ರಮ ವಲಸೆ ನಿಲ್ಲಿಸುವುದಾಗಿ ಭರವಸೆ ನೀಡಿದರು. ನಾವು ಸೆನೆಟ್‌ನಲ್ಲಿ ಬಹುಮತ ಪಡೆದಿದ್ದೇವೆ. ನನಗಾಗಿ ಉದ್ಯಮಿ ಎಲಾನ್ ಮಸ್ಕ್ ಅವರು ಬಹುವಾಗಿ ಶ್ರಮಿಸಿದರು. ಅವರ ಉತ್ಸಾಹ ಮತ್ತು ಪಾಲ್ಗೊಳ್ಳುವಿಕೆಯು ನನಗೆ ದೊಡ್ಡ ಜಯ ತಂದು ಕೊಟ್ಟಿದೆ. ಅದೇ ರೀತಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಕೂಡ ನನ್ನ ಗೆಲುವಿಗಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.
ಟ್ರಂಪ್ ಅವರು ಏಳು ‘ಬ್ಯಾಟಲ್ ಗ್ರೌಂಡ್‘ ರಾಜ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪೆನ್ಸಿಲ್ವೇನಿಯಾ, ಅರಿಜೋನಾ, ಜಾರ್ಜಿಯಾ, ಮಿಷಿಗನ್, ವಿಸ್ಕಾನ್‌ಸ್ಕಿನ್‌ಮತ್ತು ನೆವಾಡದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ರಾಜ್ಯಗಳು ಅಭ್ಯರ್ಥಿಗಳ ಪಾಲಿಗೆ ನಿರ್ಣಾಯಕವಾಗಿವೆ. ಅಮೆರಿಕದ 50 ರಾಜ್ಯಗಳಲ್ಲಿ ಈ ಏಳು ರಾಜ್ಯಗಳ ಮತದಾರರನ್ನು ಹೊರತುಪಡಿಸಿ ಹೆಚ್ಚಿನ ರಾಜ್ಯಗಳ ಮತದಾರರು ಒಂದೇ ಪಕ್ಷಕ್ಕೆ ಮತ ಹಾಕುತ್ತಾ ಬಂದಿದ್ದಾರೆ.