ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ : ರೈತರ ಜಮೀನುಗಳನ್ನು ಕಬಳಿಸಲು ಹೊರಟಿರುವ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯನ್ನು ಮುಚ್ಚುವಂತೆ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು
ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ನಾಡಿನಾದ್ಯಂತ ರೈತರ ಜಮೀನುಗಳಿಗೆ ಈಗಾಗಲೆ ನೋಟಿಸ್ ನೀಡಿರುವ ವಕ್ಫ್ ಮಠ ಮಾನ್ಯ, ಚರ್ಚ್, ದೇವಸ್ಥಾನ, ದರ್ಗಾಗಳ ಜಾಗವನ್ನು ಕಬಳಿಸುವ ಹುನ್ನಾರ ನಡೆಸುತ್ತಿದೆ.
ಇದರಿಂದ ತಲ ತಲಾಂತರದಿಂದ ಭೂಮಿಯನ್ನು ಉಳುಮೆ ಮಾಡಿಕೊಂಡು ಬದುಕುತ್ತಿರುವವರು ಬೀದಿಗೆ ಬಿದ್ದಂತಾಗುತ್ತದೆ.
ವಸತಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಅಧಿಕಾರಿಗಳನ್ನು ಬೆದರಿಸಿ ಪಹಣಿಯಲ್ಲಿ ವಕ್ಫ್ ಎಂದು ದಾಖಲಿಸುವಂತೆ ತಾಕೀತು ಮಾಡುತ್ತಿರುವುದರಿಂದ ಕೂಡಲೆ ವಕ್ಫ್ ಸಚಿವ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಎಂ. ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್, ಉಪಾಧ್ಯಕ್ಷ ಶರೀಫ್, ಕಾರ್ಮಿಕ ಘಟಕದ ಅಧ್ಯಕ್ಷ ಫೈಜುಲ್ಲಾ
ನಗರಾಧ್ಯಕ್ಷ ರಾಮು ಎನ್. ಯುವ ಘಟಕದ ಅಧ್ಯಕ್ಷ ಅನಿಲ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಎಂ.ಮಂಜುನಾಥ್, ಶಿವರಾಜ್, ನಂದಕುಮಾರ್ ಮಲ್ಲಿಕಾರ್ಜುನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.