ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ಗ್ರಾಮ ಪಂಚಾಯಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ–2024ರ ಸಂಬಂಧ ಚಿತ್ರದುರ್ಗ ನಗರಸಭೆ, ಚಳ್ಳಕೆರೆ ನಗರಸಭೆ ಹಾಗೂ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಂದೂಕು ಪರವಾನಗಿ ಪಡೆದಿರುವ ನಾಗರೀಕರ ಬಳಿಯಲ್ಲಿರುವ ಗನ್ ಪಿಸ್ತೂಲ್ ಇತ್ಯಾದಿ ಶಸ್ತ್ರಾಸ್ತ್ರಗಳನ್ನು ಪೊಳೀಸ್ ಠಾಣೆಗೆ ಒಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ.
ರಾಜಕೀಯ ಚಟುವಟಿಕೆಗಳು ಆರಂಭವಾಗುವ ಹಿನ್ನಲೆಯಲ್ಲಿ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಮತ್ತು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಬಂದೂಕು ಪರವಾನಗಿ ಪಡೆದಿರುವ ನಾಗರೀಕರು ತಮ್ಮ ಬಳಿ ಇರುವ ಎಸ್ಬಿಎಂಎಲ್, ಎಸ್ಬಿಬಿಎಲ್, ಡಿಬಿಬಿಎಲ್, ಡಿಬಿಎಂಎಲ್, ರಿವಾಲ್ವಾರ್ ಹಾಗೂ ಪಿಸ್ತೂಲ್ ಎಲ್ಲಾ ಇತ್ಯಾದಿ ಶಸ್ತ್ರಾಸ್ತ್ರಗಳನ್ನು ಆಮ್ರ್ಸ್ ಕಾಯ್ದೆ–1959ರ ಕಲಂ 24ಎ ಮತ್ತು 24ಬಿ ರಡಿಯಲ್ಲಿರುವಂತೆ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿರುವ ಅಧಿಕಾರಿಗಳ ವಶಕ್ಕೆ ಕೂಡಲೇ ಒಪ್ಪಿಸಬೇಕು.
ಈ ಆದೇಶವು ಬ್ಯಾಂಕ್, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಒಡೆತನದ ಸಂಸ್ಥೆಗಳ ಶಸ್ತ್ರಾಸ್ತ್ರಗಳಿಗೆ ಅನ್ವಯಿಸುವುದಿಲ್ಲ. ವಿನಾಯಿತಿಗೆ ಸ್ವೀಕೃತವಾಗುವ ಪ್ರಸ್ತಾವನೆಗಳನ್ನು ಸ್ಕ್ರೀನಿಂಗ್ ಕಮಿಟಿಯಲ್ಲಿ ಪರಿಶೀಲಿಸಿ, ನಿಯಮಾನುಸಾರ ವಿನಾಯಿತಿ ನೀಡಲು ಕ್ರಮವಹಿಸಲಾಗುವುದು.
ಶಸ್ತ್ರಾಸ್ತ್ರಗಳನ್ನು ತಂದಿರಿಸಿದ ಪರವಾನಗಿದಾರರಿಗೆ ಸೂಕ್ತ ರಶೀದಿ ನೀಡಬೇಕು. ಈ ಆದೇಶವು ನೀತಿ ಸಂಹಿತೆ ಮುಕ್ತಾಯವಾಗುವವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.