ಎಡಬಲಗಳ ಅತಿರೇಕಿಗಳ ನಡುವೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಡಬಲಗಳ ಅತಿರೇಕಿಗಳ ನಡುವೆ………..ಪ್ರೀತಿ ಮತ್ತು ಮಾನವೀಯತೆ ಇಲ್ಲದ ಅತಿರೇಕಿಗಳ ನಡುವೆ ಪರಿವರ್ತನೆ ಸಾಧ್ಯವಾಗದೇ ಇನ್ನೂ ಸಮಸ್ಯೆಗಳು ಜೀವಂತವಾಗಿವೆ ಮತ್ತು ಉಲ್ಬಣಗೊಳ್ಳುತ್ತಿವೆ……..

 ಬುದ್ಧಿಜೀವಿಗಳು, ಪ್ರಗತಿಪರರು, ಎಡಪಂಥೀಯರು ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಒಂದು ವರ್ಗದ ಜನರಿಗೆ ಆಳದಲ್ಲಿ ಪ್ರೀತಿಸುವ ಮನಸ್ಥಿತಿ ಕಡಿಮೆಯಾಗಿದೆ.

 ಸಂಘ ಪರಿವಾರದವರು, ಹಿಂದುತ್ವ ವಾದಿಗಳು, ಮನು ವಾದಿಗಳು, ಸಂಪ್ರದಾಯವಾದಿಗಳು, ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮದ ಮೂಲಭೂತ ಅಂಶಗಳ ಪ್ರತಿಪಾದಕರು ಎಂದು ಕರೆಯಲ್ಪಡುವವರಿವಿಗೆ ಮಾನವೀಯ ಸ್ಪಂದನೆ ತುಂಬಾ ಕಡಿಮೆಯಾಗಿದೆ.

 ಸಾಮಾನ್ಯ ಜನರೆಂದು ಕರೆಯಲ್ಪಡುವವರಿಗೆ ನಿರ್ಲಕ್ಷ್ಯ, ಅಜ್ಞಾನ, ದುರಾಸೆ, ಸ್ವಾರ್ಥದ ಕಾರಣದಿಂದ ಬೇಜವಾಬ್ದಾರಿ ಮನೋಭಾವ ಬೆಳವಣಿಗೆ ಹೊಂದಿ ಪ್ರೀತಿ ಮತ್ತು ಮಾನವೀಯ ಸ್ಪಂದನೆ ಮಾಯವಾಗಿದೆ.

 ಯುವಕ – ಯುವತಿಯರು ಎಂದು ಕರೆಯಲ್ಪಡುವ ಒಂದು ಸಮುದಾಯ ಸಮೂಹ ಸಂಪರ್ಕ ಕ್ರಾಂತಿಯ ಹೊರತಾಗಿಯೂ ಆರ್ಥಿಕ ಗುಲಾಮಿತನದ ಮನಸ್ಥಿತಿಗೆ ಶರಣಾಗಿದೆ….

 ಸಾಮಾಜಿಕ ಕ್ರಾಂತಿಯ ಕನಸು ಕಾಣುವ, ಬದಲಾವಣೆಗಾಗಿ ಹೋರಾಟ ರೂಪಿಸುವ ವರ್ಗಗಳು ಅತಿಯಾದ ವಿಮರ್ಶೆ, ನಾಯಕತ್ವ ಮತ್ತು ಅಧಿಕಾರದ ಹಂಬಲ, ಅಸೂಯೆ ಮತ್ತು ತನ್ನತನದ ಸಣ್ಣತನಕ್ಕೆ ಸಿಲುಕಿ ಸಮಗ್ರ ಚಿಂತನೆಯ ಕೊರತೆಯಿಂದ ನರಳುತ್ತಾ ವಾಸ್ತವ ಗ್ರಹಿಸದೆ ಕೂಪಮಂಡೂಕಗಳ ಮನಸ್ಥಿತಿಲ್ಲಿದ್ದಾರೆ…..

 ಸೈದ್ದಾಂತಿಕ ಅತಿರೇಕದ ಈ ದುಷ್ಪರಿಣಾಮಗಳ ಕಾರಣದಿಂದಾಗಿ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ದುಷ್ಟ ಶಕ್ತಿಗಳು ಮುಖ್ಯವಾಹಿನಿಯನ್ನು ನಿಯಂತ್ರಿಸುತ್ತಿವೆ…

 ಹಿರಿಯರಿಗೆ ಕಿರಿಯರನ್ನು ಪ್ರೀತಿಸುವ, ಪ್ರೋತ್ಸಾಹಿಸುವ ಅವರು ತಪ್ಪುಗಳನ್ನು ಸ್ವೀಕರಿಸುವ, ಅವರೊಂದಿಗೆ ಪ್ರೀತಿಯಿಂದ ಒಡನಾಡುವ ಸಮಯ, ಆಸಕ್ತಿ ಮತ್ತು ಮನೋಭಾವ ಇಲ್ಲವಾಗುತ್ತಿದೆ.

 ಹಾಗೆಯೇ ಕಿರಿಯರಿಗೆ ತಾಳ್ಮೆ ಮತ್ತು ವಿನಯದ ಕೊರತೆಯಿಂದ ಹಿರಿಯರೊಂದಿಗೆ ತಮ್ಮ ಅರಿವಿನ ಮಿತಿಯ ಸಂವಹನ ಸಾಧ್ಯವಾಗುತ್ತಿಲ್ಲ.

 ಅರಿವೇ ಗುರು ಎಂಬುದು ಕಾಲಕ್ರಮೇಣ ಅರಿವೇ ಅಹಂ ಆಗಿ ಪರಿವರ್ತನೆ ಹೊಂದಿ ಆರ್ಥಿಕ ಸುರಕ್ಷಿತ ವಲಯದಲ್ಲಿ ಸೇರಿಕೊಳ್ಳುವ ಆತುರದಲ್ಲಿ ಅನೇಕರು ತಮ್ಮ ಶ್ರಮವನ್ನು ವ್ಯಯಿಸುತ್ತಿದ್ದಾರೆ.

 ಈ ಅತಿರೇಕಿಗಳು ಮನುಷ್ಯ ಪ್ರೀತಿಗಿಂತ, ಮಾನವೀಯ ಸ್ಪಂದನೆಗಿಂತ ತಮ್ಮ ಸಿದ್ದಾಂತಗಳ ಪ್ರಚಾರ ಪ್ರದರ್ಶನಕ್ಕೇ ಮಹತ್ವ ನೀಡುತ್ತಾರೆ.

 ನಾವು ಸದಾ ಜಾಗೃತವಾಗಿರಾಗಿರಬೇಕಿರುವುದು ಮತ್ತು ಹೋರಾಟ ಮಾಡಬೇಕಿರುವುದು ಶೋಷಿತರ ಪರವಾಗಿಯೇ ಹೊರತು ಯಾವುದೇ ಸಿದ್ದಾಂತ, ಧರ್ಮ, ಜಾತಿ, ಭಾಷೆ, ಲಿಂಗದ ಪರವಾಗಿಯಲ್ಲ.

 ಭಾರತ ಒಂದು ಸಂಕೀರ್ಣ ಸಮಾಜವನ್ನು ಹೊಂದಿದೆ. ಶೋಷಣೆ ಎಂಬುದು ಮುಖ್ಯವಾಗಬೇಕೆ ಹೊರತು ವೈಯಕ್ತಿಕ ನಂಬಿಕೆ ಅಥವಾ ಸೈದ್ದಾಂತಿಕ ನಿಲುವುಗಳಲ್ಲ. ಸೈದ್ಧಾಂತಿಕತೆ ಎಂಬುದೇ  ಶೋಷಿತರ ಪರವಾದ ನಿಲುವುಗಳು ಎಂದು ಭಾವಿಸಬಹುದು. ಏಕೆಂದರೆ ಬಲಿಷ್ಠರಿಗೆ ಯಾವುದೇ ಹೆಚ್ಚಿನ ಸಹಾಯ ಬೇಕಾಗಿರುವುದಿಲ್ಲ. ದುರ್ಬಲರು ಯಾವಾಗಲೂ ಸಹಾಯದ ನಿರೀಕ್ಷೆಯಲ್ಲಿರುತ್ತಾರೆ ಮತ್ತು ವ್ಯವಸ್ಥೆ ಸಹ ಅವರನ್ನು ಸುಲಭವಾಗಿ ದುರುಪಯೋಗ ಪಡಿಸಿಕೊಳ್ಳುತ್ತದೆ‌‌.

 ನಾವು ಯಾವುದೋ ಒಂದು ಸಿದ್ದಾಂತದ ಬೆಂಬಲಿಗರು ಅಥವಾ ಅದರ ಪರವಾದ ವಿಚಾರಗಳನ್ನು ಇಷ್ಟ ಪಡುವವರಾಗಿದ್ದರೆ ಇನ್ನೊಂದು ಭಿನ್ನ ನಿಲುವಿನ ಸಿದ್ದಾಂತವನ್ನು ಅನವಶ್ಯಕವಾಗಿ ವಿರೋಧಿಸುತ್ತಾ, ತನ್ನ ವಿಚಾರ ಸರಣಿಗಳ ಅನುಯಾಯಿಗಳು ಮಾಡುವ ತಪ್ಪುಗಳನ್ನು ಗುರುತಿಸಲಾರದಷ್ಟು ಮೋಹಕ್ಕೆ ಒಳಗಾಗುವ‌ ಸಾಧ್ಯತೆಯೇ ಹೆಚ್ಚು.

 ಬೇಕಾದರೆ ಗಮನಿಸಿ ನೋಡಿ, ಒಂದು ಧರ್ಮದ ಅಥವಾ ಪಕ್ಷದ ಜನರು ತಮ್ಮ ಪಕ್ಷದ ಅಥವಾ ಧರ್ಮದ ನೇರ ತಪ್ಪುಗಳನ್ನು ಸಹ ಗುರುತಿಸಲಾರದಷ್ಟು ಮೂರ್ಖರಾಗಿರುತ್ತಾರೆ ಮತ್ತು ‌‌ಅದನ್ನು ಅಸಹ್ಯವಾಗಿ ಸಮರ್ಥಿಸುತ್ತಾರೆ.

 ತೀವ್ರ ಬಲಪಂಥ ಮತ್ತು ಎಡಪಂಥದ ಜನರಲ್ಲಿ ಇದನ್ನು ಗುರುತಿಸಬಹುದು. ಆದ್ದರಿಂದಲೇ ನಮ್ಮ ಸೈದ್ದಾಂತಿಕ ನಿಲುವುಗಳು ನ್ಯಾಯದ ಪರ, ಸತ್ಯದ ಪರ,‌ ಜನರ ಪರ, ದೇಶದ ಪರ ಇರಬೇಕು. ಇಲ್ಲದಿದ್ದರೆ ಸೈದ್ದಾಂತಿಕತೆ ನಮ್ಮನ್ನೇ ಆಪೋಷಣೆ ತೆಗೆದುಕೊಳ್ಳುತ್ತದೆ.

 ಮಹಿಳಾ ಪರ ನಿಲುವುಗಳನ್ನು ತೆಗೆದುಕೊಳ್ಳವಾಗ ಅವರು ಪರಿಸ್ಥಿತಿಯ ದುರುಪಯೋಗ ಪಡಿಸಿಕೊಳ್ಳುವ ಬಗ್ಗೆಯೂ ಮಾತನಾಡಬೇಕು, ಧರ್ಮದ ಪರ ಮಾತನಾಡುವಾಗ ಅದರಿಂದಾಗುವ ಅನಾಹುತಗಳ ಬಗ್ಗೆಯೂ ಜಾಗೃತೆ ವಹಿಸಬೇಕು.

 ಯಾವುದೇ ಸೈದ್ದಾಂತಿಕ ನಿಲುವುಗಳ ಮೂಲ ಆಶಯಗಳು ಪ್ರಾಯೋಗಿಕವಾಗಿ ಮತ್ತು ವಾಸ್ತವದ ನೆಲೆಯಲ್ಲಿ ಜಾರಿಯಾಗುವಾಗ ಅದು ಅಪಾಯಕಾರಿಯಾಗಬಹುದು. ಆಗ ಅದನ್ನು ಗುರುತಿಸಿ ಖಂಡಿಸುವ ನೇರ ಮತ್ತು ದಿಟ್ಟ ಸ್ವಭಾವ ನಮ್ಮದಾಗಿರಬೇಕು. ಗುಲಾಮಿತನ, ಭಕ್ತಗಣದ ರೀತಿ ಎಲ್ಲವೂ ಸರಿ ಎಂದು ಮೂಡರಾಗಬಾರದು.

 ನಮ್ಮ ಧ್ವನಿ ಸಿದ್ದಾಂತಗಳ ಆಚೆ ಶೋಷಿತರ ಪರವಾಗಿರಲಿ, ನೋಂದವರ ಪರವಾಗಿರಲಿ, ಅವರು ಯಾವುದೇ ಜಾತಿ ಧರ್ಮ ಪಕ್ಷಗಳವರಾಗಿರಲಿ ಎಂದು ಆಶಿಸುತ್ತಾ,…..

 ಜೊತೆಗೆ ಇದೇ ನಿಲುವುಗಳು ಅವಕಾಶವಾದಿತನವಾಗಿ, ಎಡಬಿಡಂಗಿಯಾಗಿ ರೂಪಾಂತರವಾಗದಂತೆ ಎಚ್ಚರಿಕೆಯೂ ಇರಲಿ, ನಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ತಿರುಗಿಸಿಕೊಳ್ಳುವ ಡೋಂಗಿ ಸೈದ್ಧಾಂತಿಕವಾದಿಯೂ ಆಗದಿರಲಿ ಎಂದು ನೆನಪಿಸುತ್ತಾ…….
ಲೇಖನ-ವಿವೇಕಾನಂದ. ಎಚ್. ಕೆ.9844013068……..

 

- Advertisement -  - Advertisement - 
Share This Article
error: Content is protected !!
";