ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ದೊಡ್ಡಬಳ್ಳಾಪುರ ದಲ್ಲಿ ಪೊಲೀಸ್ ಇಲಾಖೆಯ ವಸತಿ ಗೃಹವಿದ್ದ,ಭೂಮಿಯ ಪಹಣಿಯಲ್ಲಿ ಖಾಸಗಿಯವರ ಸ್ವತ್ತು ಎಂದು ನಮೂದಾಗಿದ್ದು, ಈ ಭೂಮಿಯನ್ನು ಮಾರಾಟಕ್ಕಿಟ್ಟರುವ ಆರೋಪಗಳು ಕೇಳಿಬಂದಿವೆ.
ಪೊಲೀಸ್ ವಸತಿ ಗೃಹವಿದ್ದ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ಖಾಸಗಿ ವ್ಯಕ್ತಿಗಳು ಮಾರಾಟಕ್ಕೆ ಇಟ್ಟಿದ್ದು ಈ ಭೂಮಿಯನ್ನು ರಕ್ಷಣೆ ಮಾಡುವಂತೆ ಕರ್ನಾಟಕ ರಕ್ಷಣ ವೇದಿಕೆ ( ಕನ್ನಡಿಗರ ಬಣ ) ಒತ್ತಾಯಿಸಿದೆ.
ಈ ಬಗ್ಗೆ ಪೊಲೀಸ್ ವೇಷ ಧರಿಸಿ ತಾಲ್ಲೂಕು ಕಚೇರಿಗೆ ತೆರಳಿದ ವೇದಿಕೆಯ ರಾಜ್ಯಾಧ್ಯಕ್ಷ ಚಂದ್ರಶೇಖರ್ ಅವರು ಪೊಲೀಸ್ ವಸತಿಗೃಹವಿದ್ದ ಭೂಮಿಯನ್ನು ಭೂಗಳ್ಳರಿಂದ ರಕ್ಷಿಸುವಂತೆ ತಾಲ್ಲೂಕು ತಹಶಿಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಡಾ.ಶಿವಶಂಕರ್ ಅವರಿಗೆ ಪರಿಸ್ಥಿತಿಯನ್ನು ವಿವರಿಸಿ, ಪೊಲೀಸ್ ಇಲಾಖೆಯ ಸ್ವತ್ತನ್ನು ರಕ್ಷಣೆ ಮಾಡುವಂತೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಹೋಬಳಿ, ಗಂಗಾಧರಪುರ ಗ್ರಾಮದ ಸ.ನಂ. 111 ರಲ್ಲಿ ( ಕಚೇರಿ ಪಾಳ್ಯದ ಬಳಿ ) ಇದ್ದ ಪೊಲೀಸ್ ವಸತಿ ಗೃಹದ ಭೂಮಿಯನ್ನು ಪೊಲೀಸ್ ಇಲಾಖೆ ಎಂದು ಖಾತೆ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಕಚೇರಿ ಪಾಳ್ಯದ ಬಳಿ ಸುಮಾರು 70-80 ವರ್ಷಗಳಿಂದ ಪೊಲೀಸ್ ವಸತಿ ಗೃಹಗಳ ಸಂಕೀರ್ಣವಿತ್ತು. ಇದೇ ಸ್ಥಳದಲ್ಲಿ ಶಿಥಿಲಗೊಂಡಿದ್ದ ಬೃಹತ್ ಓವರ್ ಹೆಡ್ ವಾಟರ್ ಟ್ಯಾಂಕ್ ಮತ್ತು ಒಂದು ಬೃಹತ್ ಕಲ್ಯಾಣಿ ಇದ್ದವು, ವಸತಿ ಗೃಹ ಹಾಳಾಗಿದ್ದರಿಂದ ಅಲ್ಲಿ ನೂತನ ವಸತಿ ಗೃಹ ನಿರ್ಮಿಸಲು, ದುಸ್ಥಿತಿಯಲ್ಲಿದ್ದ ವಸತಿ ಗೃಹಗಳನ್ನು ತೆರವುಗೊಳಿಸಲಾಗಿದೆ. ಆದರೆ, ಸದರಿ ಭೂಮಿ ಸುಮಾರು ವರ್ಷಗಳಿಂದ ಬೇರೆಯವರ ಹೆಸರಿನಲ್ಲಿ ಖಾತೆ ಇದ್ದು ಇದುವರೆಗೂ ಪೊಲೀಸ್ ಇಲಾಖೆಯವರ ಹೆಸರಿಗೆ ಖಾತೆಯಾಗಿರುವುದಿಲ್ಲ ಎಂದರು.
ಪೊಲೀಸ್ ವಸತಿ ಗೃಹ ಇದ್ದ ಭೂಮಿಯನ್ನು ಪೊಲೀಸ್ ಇಲಾಖೆ ಎಂದು ಖಾತೆ ಮಾಡಿಕೊಡಬೇಕು ಎಂದು ತಾಲ್ಲೂಕು ತಹಶಿಲ್ದಾರ್, ಉಪ ವಿಭಾಗಾಧಿಕಾಧಿಕಾರಿಗಳು ಸೇರಿದಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದೇವೆ ಎಂದು ತಿಳಿಸಿದರು.
ವಸತಿ ಗೃಹವಿದ್ದ ಭೂಮಿಯನ್ನು ಪೊಲೀಸ್ ಇಲಾಖೆ ಎಂದು ಖಾತೆ ಮಾಡಲು ನಮ್ಮ ಸಂಘಟನೆಯಿಂದ ಅರ್ಜಿಯನ್ನು ಸಲ್ಲಿಸಿದ್ದು, ಭೂಗಳ್ಳರ ಹಸ್ತಕ್ಷೇಪ ಇರುವುದರಿಂದ ಇದುವರೆಗೂ ಖಾತೆ ಆಗಿರುವುದಿಲ್ಲ. ಹೀಗಾಗಲೇ ಈ ಭೂಮಿಯನ್ನು ಬೇರೆಯವರಿಗೆ ಮಾರಾಟಕ್ಕಿಟ್ಟಿರುವುದು ಕಂಡುಬಂದಿದೆ. ಆದ್ದರಿಂದ ಅತಿ ಜರೂರಾಗಿ ಪೊಲೀಸ್ ವಸತಿ ಗೃಹದ ಭೂಮಿಯನ್ನು ಪೊಲೀಸ್ ಇಲಾಖೆಯ ಹೆಸರಿಗೆ ಖಾತೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್, ಸಂಘಟನಾ ಕಾರ್ಯದರ್ಶಿ ಅರವಿಂದಪ್ಪ, ತಾಲ್ಲೂಕು ಅಧ್ಯಕ್ಷ ಶಿವಕುಮಾರ್, ಆರಾಧ್ಯ, ಭುವನ್, ಪುನೀತ್, ಪಿ.ವಾಸು,ಅಶ್ವತ್ಥನಾರಾಯಣ್, ನರೇಂದ್ರ ಉಪಸ್ಥಿತರಿದ್ದರು