ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಮಠಗಳ ಆದ್ಯ ಕರ್ತವ್ಯ- ಸಿರಿಗೆರೆಶ್ರೀ

News Desk

ಚಂದ್ರವಳ್ಳಿ ನ್ಯೂಸ್, ಸಿರಿಗೆರೆ:
ಸಮಲತದಲ್ಲಿ ಹರಿಯುವ ನದಿ ಗದ್ಯವಾದರೆ
, ಬೆಟ್ಟದ ಮೇಲಿಂದ ಭೋರ್ಗರೆತವಾಗಿ ಧುಮ್ಮಿಕ್ಕುವ ಜಲಪಾತವೇ ಪದ್ಯ. ಸೀಮಿತವಾಗಿ ಸತ್ವಯುತವಾಗಿ ಹೇಳುವುದೇ ಪದ್ಯ. ನಾವು ಕವಿಗಳಿಂದ ಪ್ರಭಾವಿತರಾಗಿ ಕೆಲವು ಸ್ವರಚಿತ ಕವನಗಳನ್ನು ರಚಿಸಿದ್ದೇವೆ ಎಂದು ಸಿರಿಗೆರೆಯ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದರು.

ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶನಿವಾರ ಜರುಗಿದ ತರಳಬಾಳು ನುಡಿಹಬ್ಬ ೨೦೨೪ರ ಎರಡನೆಯ ದಿನದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

ನಮ್ಮ ಮಠದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಸ್ಕಾರಕ್ಕೂ, ನಗರಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಸ್ಕಾರಕ್ಕೂ ತುಂಬಾ ವ್ಯತ್ಯಾಸವಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ ಸಂಸ್ಕಾರಯುತರನ್ನಾಗಿ ಮಾಡಬೇಕಾಗಿರುವುದು ಮಠಗಳ ಆದ್ಯ ಕರ್ತವ್ಯವಾಗಿದೆ ಎಂದರು.

ತುಮಕೂರು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಸಿರಿಗರ ಬಡಿದವರನ್ನು ಸರಿದಾರಿಗೆ ತಂದು ನಿಲ್ಲಿಸಿದ ಮಠ ಸಿರಿಗೆರೆಮಠ. ಶ್ರೀಮಠವು ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ವೈಚಾರಿಕ ಸಾಕ್ಷಿಯ ಪ್ರಜ್ಞೆಯಿಂದ ಶತಶತಮಾನಗಳಿಂದ ತನ್ನದೇ ಆದ ಭೂಮಿಕೆಯಲ್ಲಿದೆ.

ಸರ್ಕಾರದ ವತಿಯಿಂದ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಗಳಾಗಿರುವ ನಾಡಿನ ಪ್ರಸಿದ್ಧ ಸ್ವಾಮೀಜಿಯವರಿಗೆ ವೇದಿಕೆ ನೀಡುವುದು ಸರ್ಕಾರದ ಕರ್ತವ್ಯವಾಗಲಿ. ಸಂಸ್ಕಾರದ ಜೊತೆಗಿರುವ ಶಿಕ್ಷಣವೇ ಸಾರ್ಥಕ. ಶ್ರೀಮಠವು ಪರಂಪರೆಯಲ್ಲಿ ಶಿಕ್ಷಣ, ಸಂಸ್ಕಾರ, ಶಿಸ್ತು, ಸಮಯಕ್ಕೆ ಹೆಸರುವಾಸಿಯಾಗಿದೆ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಮಾತನಾಡಿ ಕನ್ನಡ ಹಾಗೂ ಖಾಸಗಿ ಶಾಲೆಗಳಲ್ಲಿ ಮಾತೃಭಾಷೆ ಶಿಕ್ಷಣ ಕಡ್ಡಾಯವಾಗಿ ಜಾರಿಯಾಗಬೇಕು. ಮಕ್ಕಳಿಗೆ ಮಾತೃ ಭಾಷೆಯ ಮಾಧ್ಯಮ ಶ್ರೇಷ್ಠ. ಇದುವೇ ಕರ್ನಾಟಕ ಏಕೀಕರಣದ ಆಶಯವಾಗಿದೆ. ಇಂದು ದೇಶಾದ್ಯಾಂತ ಕೇಂದ್ರಸರ್ಕಾರದ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆಗಳು ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿವೆ.

ರಾಜ್ಯಸರ್ಕಾರಗಳ ಮೇಲೆ ಹಿಂದಿ ಏರಿಕೆ ಇಂದು ಹೆಚ್ಚಾಗಿದ್ದು, ಬ್ಯಾಂಕಿಂಗ್, ರೈಲ್ವೆ  ಮುಂತಾದ ಕೆಲಸಗಳನ್ನು ಉತ್ತರಭಾರದವರೇ ಹೆಚ್ಚಾಗಿ ಪಡೆಯುತ್ತಿದ್ದಾರೆ. ನಮ್ಮ ಕರ್ನಾಟಕಕ್ಕೆ ತ್ರಿಭಾಷಾ ನೀತಿ ಬೇಡ. ದ್ವಿಭಾಷಾ ನೀತಿ ಬೇಕು. ಇಂತಹ ನಿರ್ಣಯಗಳನ್ನು ಸರ್ಕಾರ ಕೈಗೊಳ್ಳಬೇಕು. ಕರ್ನಾಟಕದ ಆತ್ಮ ಕನ್ನಡ ಆಗಿದೆ ಎಂದರು.

ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಮಾತನಾಡಿ ಸಂವಿದಾನ, ಸ್ವಾತಂತ್ರ್ಯ ಪ್ರಜಾಪ್ರಭುತ್ವದಿಂದ ಇಂದು ಮಹಿಳೆಯರಿಗೆ ಶಿಕ್ಷಣ ದೊರೆತಿದೆ. ಕವಿಗಳೆಂದರೆ ಸಂಪ್ರದಾಯವಾದಿ, ಜಾತಿವಾದಿ, ಕೋಮುವಾದಿ ಅಲ್ಲ. ಅವರುಗಳೊಬ್ಬ ಪ್ರಜಾಪ್ರಭುತ್ವದ ಸೌಹಾರ್ದ ಪರಂಪರೆಯ ವಕ್ತಾರನಾಗಿರುತ್ತಾನೆ. ಕೋಮುವಾದಿಗಳಿಗೆ ಕವಿಗಳನ್ನು ಕಂಡರೆ ಇಷ್ಟವಿಲ್ಲ.

ಹಾಗಾಗಿ ಹಲವು ಕವಿಗಳ, ಪತ್ರಕರ್ತರ ಸಾವಾಗಿದೆ. ಕವಿಗಳ, ಜನಸಾಮಾನ್ಯರ ಬರವಣಿಗೆಗಳು ದೊಡ್ಡ ಶಕ್ತಿಯಾಗಿ ಪ್ರಜಾಪ್ರಭುತ್ವ ಸಂವಿದಾನ ಕಾಪಾಡುತ್ತಿವೆ. ಮಠದಲಿ ನಡೆಸುವ ಇಂತಹ ಕಾರ್ಯಕ್ರಮಗಳಿಗೆ ಸರ್ಕಾರದ ತೆರಿಗೆ ಹಣ ಲಭಿಸಲಿ ಎಂದರು.

ಚಿತ್ರದುರ್ಗದ ಡಾ.ಟಿ.ಭವ್ಯರಾಣಿ, ಸುಜೀತ ಕುಲಕರ್ಣಿ ಹಾಗೂ ತಂಡದವರು ಹಿಂದುಸ್ತಾನಿ ವಯೋಲಿನ್ ವಾದನ ನುಡಿಸಿ, ವಚನ ಗಾಯನ ಹಾಡಿದರು.

ಕಾರ್ಯಕ್ರಮದಲ್ಲಿ ೨೦೨೪ರ ರಾಜ್ಯೋತ್ಸವ ಪ್ರಶಸ್ತಿ ಪರಸ್ಕೃತ ಹಾಗೂ ಹಸೆಚಿತ್ರಕಲಾವಿದ ಚಂದ್ರಶೇಕರ ಸಿರಿವಂತೆ, ಸರೋಜ ಪಾಂಡೋಮಟ್ಟಿ, ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತರಾದ ಆರಿಫ್‌ರಾಜಾ, ಹಾವೇರಿ ಕಸಾಪ ಅಧ್ಯಕ್ಷರಾದ ಲಿಂಗಯ್ಯ ಬಿ.ಹಿರೇಮಠ, ಶ್ರೀಸಂಸ್ಥೆಯ ವಿಶೇಷಾಧಿಕಾರಿ ವೀರಣ್ಣ.ಎಸ್.ಜತ್ತಿ, ವಿದ್ಯಾಸಂಸ್ಥೆಯ ಕನ್ನಡ ಶಿಕ್ಷಕರು, ಉಪನ್ಯಾಸಕರು, ಶಾಲಾ-ಕಾಲೇಜುಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಇದ್ದರು.

ಜಗಳೂರಿನ ಎನ್.ಟಿ.ಎರಿಸ್ವಾಮಿ, ಬೆಂಗಳೂರು ಜಿ.ಎ.ಜಗದೀಶ್, ದಾವಣಗೆರೆಯ ಶ್ರೀ ಕೃಷ್ಣನಾಯಕ್, ನಾಗರಾಜ ಸಿರಿಗೆರೆ, ಪ್ರತಿಭಾ ಬಳ್ಳಿಗಾವಿ, ಎಚ್.ಶಿವಮೂರ್ತಿ, ಹಾನಗಲ್‌ನ ವಿಜಯಕಾಂತ ಪಾಟೀಲ್, ಚಿತ್ರದುರ್ಗದ ಡಾ.ಎಸ್.ಎನ್.ಹೇಮಂತರಾಜು, ಡಾ.ಬಿ.ಎಂ.ಗುರುನಾಥ್, ಎಂ.ತಿಪ್ಪೇಸ್ವಾಮಿ ಉಪ್ಪಾರಹಳ್ಳಿ, ರಾಣೇಬೆನ್ನೂರಿನ ಮಂಜಯ್ಯ ದೇವರಮನಿ, ಮೊಳಕಾಲ್ಮೂರಿನ ಜಬಿವುಲ್ಲಾ ಎಂ.ಅಸದ್, ಹೊಳಲ್ಕೆರೆಯ ಟಿ.ಪಿ.ಉಮೇಶ್, ಹಿರಿಯೂರಿನ ಎಂ.ಜಿ.ಆರ್ ದಾಮಿನಿ ಸ್ವರಚಿತ ಕವನ ವಾಚಿಸಿದರು.

 

 

 

- Advertisement -  - Advertisement - 
Share This Article
error: Content is protected !!
";