ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಯಚೂರು ಜಿಲ್ಲೆಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಅಮಾನತುಗೊಂಡ PDO ಅಧಿಕಾರಿಗಳನ್ನು ಕಾನೂನು ಕ್ರಮ ಕೈಗೊಳ್ಳದೇ, ಯಾದಗಿರಿ ಜಿಲ್ಲೆಗೆ ವರ್ಗಾಯಿಸಿರುವುದು ಸ್ವತಃ ರಾಜ್ಯ ಕಾಂಗ್ರೆಸ್ ಸರ್ಕಾರವೇ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುವಂತಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಉಪ ನಾಯಕ ಚಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರು ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರ ಭ್ರಷ್ಟಾಚಾರ ಕೃತ್ಯವನ್ನು ಮರೆಮಾಚುವ ನಿಟ್ಟಿನಲ್ಲಿ ಮಾಡಿದ ಈ ವರ್ಗಾವಣೆ, ಸಿದ್ದರಾಮಯ್ಯ ಸರ್ಕಾರದ ನಿಲುವಿನ ಮೇಲೆ ಸಂಶಯ ಹುಟ್ಟಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸಾಮಾನ್ಯ ಜನರಿಗೆ ನ್ಯಾಯ ಸಿಗಬೇಕಾದರೆ, ಭ್ರಷ್ಟ ಅಧಿಕಾರಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸುವುದು ಮುಖ್ಯ. ಆದರೆ ಸರ್ಕಾರವೇ ಇಂತಹ ಆಪಾದಿತ ಅಧಿಕಾರಿಗಳಿಗೆ ರಕ್ಷಣೆ ನೀಡಿದಂತಾಗಿದ್ದು, ಭ್ರಷ್ಟಾಚಾರಿಗಳಿಗೆ ಖುದ್ದು ಪ್ರೋತ್ಸಾಹ ನೀಡುತ್ತಿರುವಂತಾಗಿದೆ.
ಅಮಾನತುಗೊಂಡ ಭ್ರಷ್ಟಾಚಾರಿಗಳನ್ನು ಬೇರೆ ಜಿಲ್ಲೆಗೆ ವರ್ಗಾವಣೆಗೊಳಿಸಲು ಯಾರ ಬಳಿ “Fact Check” ಮಾಡಿಸಿದ್ದೀರಿ, ಮತ್ತು ಈ ಭ್ರಷ್ಟಾಚಾರದಲ್ಲಿ ನಿಮ್ಮ ಪಾಲೆಷ್ಟು ಸಚಿವ ಪ್ರಿಯಾಂಕ ಖರ್ಗೆ ಅವರೇ ಎಂದು ಚಲವಾದಿ ನಾರಾಯಣಸ್ವಾಮಿ ಕಟುವಾಗಿ ಪ್ರಶ್ನಿಸಿದ್ದಾರೆ.