ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗುರುಪೀಠಗಳ ಸ್ವಾಮೀಗಳು ಆರೋಗ್ಯವಂತರಾಗಿದ್ದಾಗ ಮಾತ್ರ ಸಮಾಜಕ್ಕೆ ತಿಳುವಳಿಕೆ ನೀಡಲು ಸಾಧ್ಯವಿದೆ. ಜೊತೆಗೆ ಸಮಾಜದ ಕೊಳೆ ತೊಳೆಯಲು ಸಾಧ್ಯವಿದೆ. ಅಂತಹ ಆರೋಗ್ಯವನ್ನು ಶಿವಲಿಂಗಾನಂದ ಶ್ರೀಗಳು ಹೊಂದಿದ್ದಾರೆ ಎಂದು ಮಾಜಿ ಶಾಸಕ ಎಸ್.ಕೆ.ಬಸವರಾಜನ್ ತಿಳಿಸಿದರು.
ಚಿತ್ರದುರ್ಗ ನಗರದ ಕಬೀರಾನಂದ ನಗರದಲ್ಲಿರುವ ಶ್ರೀ ಕಬೀರಾನಂದ ಆಶ್ರಮದ ಆವರಣದಲ್ಲಿ ಶನಿವಾರ ಸಂಜೆ ಪೀಠಾಧಿಪತಿ ಶ್ರೀಶಿವಲಿಂಗಾನಂದ ಶ್ರೀಗಳವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾನವ ಆರೋಗ್ಯ ಮಾನಸಿಕ ಮತ್ತು ದೈಹಿಕವಾಗಿ ಉತ್ತಮವಾಗಿರಬೇಕಿದೆ ಇದಕ್ಕೆ ಬೇಕಾದ ಯೋಗ, ಧ್ಯಾನ, ವ್ಯಾಯಾಮ ಮಾಡಬೇಕಿದೆ.
ದೈಹಿಕವಾಗಿ ದುಶ್ಚಟಗಳಿಗೆ ಬಲಿಯಾಗುವುದು, ಕೆಟ್ಟ ವಿಚಾರಗಳಿಗೆ ಬಲಿಯಾಗಿ ಮಾನಸಿಕವಾಗಿ ಸಮತೋಲನ ಕಳೆದುಕೊಳ್ಳದು ಬೇಡ ಎಂದು ಅವರು ಕಿವಿ ಮಾತು ಹೇಳಿದರು.
ಶಿವಲಿಂಗಾನಂದ ಶ್ರೀಗಳು ಉತ್ತಮವಾದ ಆರೋಗ್ಯ ಹೊಂದಿದ್ದಾರೆ. ಒಂದು ಕಾಲದಲ್ಲಿ ಈ ಮಠ ಹಾಳು ಕೊಂಪೆಯಾಗಿತ್ತು. ಇಲ್ಲಿ ಯಾರೂ ಬರಲು ಸಾಧ್ಯವಿರಲಿಲ್ಲ ಅಂತಹ ವಾತಾವರಣ ಇಲ್ಲಿತ್ತು ಎಂದು ತಿಳಿಸಿದರು. ಮುರುಘಾಮಠಕ್ಕೆ ನಾನು ಬಂದಾಗ ಈ ಮಠದಲ್ಲಿ ಒಂದು ದಿನ ಕಳೆದೆ.
ಆಗ ಯಾವುದೇ ವ್ಯವಸ್ಥೆ ಇರಲಿಲ್ಲ, ಹಾಳು ಕೊಂಪೆಯಾಗಿತ್ತು, ಹಾಳು ಕೊಂಪೆಯನ್ನು ಈಗ ಸುಂದರವಾದ ಮಠವನ್ನಾಗಿ ಶ್ರೀಗಳು ಬಂದ ಮೇಲೆ ಮಾಡಿದ್ದಾರೆ. ಇಲ್ಲಿಗೆ ಬರುವ ಭಕ್ತರು ತಮ್ಮ ದುಗುಡ ದುಮ್ಮಾನಗಳನ್ನು ಶ್ರೀಗಳವರ ಬಳಿಯಲ್ಲಿ ಹೇಳಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಇಂದಿನ ದಿನಮಾನದಲ್ಲಿ ಮಠಗಳಿಗೆ ಒಳ್ಳೆಯ ಸ್ವಾಮಿಗಳು ಸಿಗುವುದು ಕಷ್ಟ. ಮಠ ಮತ್ತು ಭಕ್ತರ ಹಣೆ ಬರಹ ಚನ್ನಾಗಿದ್ದರೆ ಮಾತ್ರ ಉತ್ತಮ ಸ್ವಾಮಿಗಳು ಸಿಗಲು ಸಾಧ್ಯ. ಆದಿಚುಂಚನ ಗಿರಿ ಶ್ರೀಗಳು ಇವರನ್ನು ಇಲ್ಲಿಗೆ ಕಳುಹಿಸುವುದರ ಮೂಲಕ ಈ ಮಠದ ಉಸ್ತುವಾರಿ ನೋಡಿಕೋ ಎಂದಾಗ ಇಲ್ಲಿಗೆ ಬಂದ ಶ್ರೀಗಳು ಹಲವಾರು ವಿದ್ಯಾ ಸಂಸ್ಥೆಗಳನ್ನು ಪ್ರಾರಂಭ ಮಾಡಿ ಮಕ್ಕಳಿಗೆ ವಿದ್ಯಾದಾನ, ಅನ್ನದಾನ, ಗೋವುಗಳ ರಕ್ಷಣೆ, ವೃದ್ದರಿಗೆ ಆಶ್ರಯ ನೀಡುವ ತಾಣವಾಗಿ ಪರಿಣಿಮಿಸಿದೆ ಎಂದು ತಿಳಿಸಿದರು.
ಈ ಮಠಕ್ಕೆ ಯಾವುದೇ ರೀತಿಯ ಆಸ್ತಿಯಾಗುವಂತ ಖಾಯಂ ಭಕ್ತರಾಗಲಿ ಇರಲಿಲ್ಲ ಶ್ರೀಗಳು ಬಂದ ಉತ್ತಮವಾದ ಕಾರ್ಯ ಮಾಡುವುದರ ಮೂಲಕ ಮಠವನ್ನು ಸಮೃದ್ಧಗೊಳಿಸಿದ್ದಾರೆ. ತಮಗೆ ಏನೇ ಕಷ್ಟ ಬಂದರೂ ಯಾರ ಮುಂದೆ ಹೇಳದೆ ತಮ್ಮ ಕಷ್ಟಕ್ಕೆ ತಾವೇ ಪರಿಹಾರ ಕಂಡುಕೊಂಡಿದ್ದಾರೆ. ಇದರಿಂದ ಈ ಮಠ ಉತ್ತಮ ಸ್ಥಿತಿಗೆ ತಲುಪಿದೆ. ಮಠಕ್ಕೆ ಯಾವುದೇ ಜಾತಿ, ಧರ್ಮ, ಸಂಪ್ರದಾಯ, ಕಟ್ಟೆಳೆ ಇಲ್ಲ ಎಲ್ಲರನ್ನು ಅಪ್ಪಿಕೊಳ್ಳುವ ಮಠವಾಗಿದೆ ಎಂದು ಬಸವರಾಜನ್ ಹೇಳಿದರು.
ಇಂದಿನ ದಿನಮಾನದಲ್ಲಿ ಮಠದಲ್ಲಿ ಸಂಪತ್ತು, ಐಶ್ವರ್ಯ, ಆಸ್ತಿ ಇದ್ದರೆ ಮಾತ್ರ ಮಠಕ್ಕೆ ಸ್ವಾಮಿಯಾಗುತ್ತೇನೆ ಎಂಬ ಮನೋಭಾವ ಬಹಳರಲ್ಲಿದೆ. ಆದರೆ ಶ್ರೀಗಳು ಏನು ಇಲ್ಲದ ಮಠಕ್ಕೆ ಬಂದು ಇಷ್ಟೊಂದು ಸಂಪತ್ತು ಮಾಡಿದ್ದಾರೆ. ಶ್ರೀಗಳ ಈ ಆದರ್ಶ ಬೇರೆ ಸ್ವಾಮಿಗಳು ಪಾಲನೆ ಮಾಡಬೇಕಿದೆ ಶ್ರೀಗಳು ಶತಾಯಿಷಿಗಳಾಗಲಿ ಎಂದರು.
ಸಾನಿಧ್ಯವಹಿಸಿದ್ದ ಮಾದಾರ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಶಿವಲಿಂಗಾನಂದ ಶ್ರೀಗಳು ಬರಿ ಒಂದು ಮಠದ ಪೀಠಾಧ್ಯಕ್ಷರಲ್ಲ ತಾಯಿ ಹೃದಯ ಹೊಂದಿದ್ದ ಮಠಾಧೀಶರಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಒಂದೊಂದು ಜಾತಿಗೆ ಒಂದು ಮಠ ಇದೆ ಇದರಲ್ಲಿ ಕಬೀರಾನಂದಾಶ್ರಮ ಯಾವುದೇ ಜಾತಿ, ಧರ್ಮ, ಜನಾಂಗದ ಸೊಂಕು ಇಲ್ಲದೆ ಎಲ್ಲರನ್ನು ತಮ್ಮವರು ಎಂದು ಹೇಳಿಕೊಳ್ಳುತ್ತಾ ಬಂದ ಎಲ್ಲರನ್ನು ತನ್ನ ಭಕ್ತರನ್ನಾಗಿ ಮಾಡುತ್ತಿದೆ. ಈ ಮಠವನ್ನು ಶ್ರೀಗಳು ಜಾತ್ಯಾತೀತ ಮಠವನ್ನಾಗಿ ಮುನ್ನಡೆಸುತ್ತಿದ್ದಾರೆ.
ಶ್ರೀಗಳು ಜಾತ್ಯಾತೀತವಾಗಿದ್ದಾರೆ. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು. ಶ್ರೀಗಳು ನಡೆಸುವ ಶಿವರಾತ್ರಿ ಮಹೋತ್ಸವ ಚಿತ್ರದುರ್ಗಕ್ಕೆ ಅಷ್ಟೇ ಅಲ್ಲ ಮಧ್ಯ ಕರ್ನಾಟಕಕ್ಕೆ ನಾಡಹಬ್ಬವಾಗಿ ಪರಿಣಮಿಸಿದೆ. ಶ್ರೀಗಳು ಸಂಸ್ಕೃತದಲ್ಲಿ ಅಭ್ಯಾಸ ಮಾಡುವುದರ ಮೂಲಕ ಬಂಗಾರದ ಪದಕ ಪಡೆದಿದ್ದಾರೆ ಎಂದರು.
ಶ್ರೀ ಕಬೀರಾನಂದ ಆಶ್ರಮದ ಪೀಠಾಧಿಪತಿ ಶ್ರೀಶಿವಲಿಂಗಾನಂದ ಶ್ರೀಗಳು, ವಚನಾನಂದ ಶ್ರೀಗಳು, ಕೈಲಾಸಪತಿ ಶ್ರೀಗಳು, ಜ್ಯೋರ್ತಿಲಿಂಗ ಶ್ರೀಗಳು ಸಾನಿಧ್ಯವಹಿಸಿದ್ದರು.
ನಗರಸಭೆ ಸದಸ್ಯ ಭಾಸ್ಕರ್, ಗುತ್ತಿಗೆದಾರ ಶಿವಕುಮಾರ್, ವೀರಶೈವ ಕ್ರೆಡಿಟ್ ಕೋ-ಆಪರೇಟಿವ್ ಸೋಸೈಟಿ ನಿರ್ದೆಶಕ ಸಿದ್ದವ್ವನಹಳ್ಳಿ ಪರಮೇಶ್, ಜಿ.ಪಂ ನಿವೃತ್ತ ವ್ಯವಸ್ಥಾಪಕ ನಾಗರಾಜ್ ಸಂಗಂ, ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜನಪ್ಪ, ಪಿಳ್ಳೇಕೇರನಹಳ್ಳಿ ದೇವೇಂದ್ರಪ್ಪ, ಗಣಪತಿ ಶಾಸ್ತ್ರಿ, ನಿರಂಜನ ಮೂರ್ತಿ, ತಿಪ್ಪೇಸಾಮಿ, ಸೇರಿದಂತೆ ಇತರರು ಭಾಗವಹಿಸಿದ್ದರು.
ಸುಬ್ರಾಯ್ ಭಟ್ಟರು ವೇದ ಘೋಷಗಳನ್ನು ಮಾಡಿದರೆ ಸಮನ ಪ್ರಾರ್ಥಿಸಿದರು. ಬಸವರಾಜು ಸ್ವಾಗತಿಸಿದರು. ಮುರುಗೇಶ್ ನಿರೂಪಿಸಿ ವಂದಿಸಿದರು.