ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸತತ ಹತ್ತು ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿರುವ ಕಾಂಗ್ರೆಸ್ ಪಕ್ಷ ಹೇಗಾದರೂ ಮಾಡಿ ಮರಳಿ ಅಧಿಕಾರ ಪಡೆಯಬೇಕೆಂದು ಹೆಣಗಾಡುತ್ತಿದೆ. ಅದಕ್ಕಾಗಿ ಕಾಂಗ್ರೆಸ್ ತಾನು ಆರಂಭದಿಂದಲೂ ಅಂಟಿಕೊಂಡಿದ್ದ ಓಲೈಕೆಯ ನೀತಿಯನ್ನು ಮತ್ತೊಂದು ಹಂತಕ್ಕೆ ಏರಿಸಿದೆ ಎಂದು ಬಿಜೆಪಿ ಟ್ವೀಟ್ ಮಾಡಿ ಆರೋಪಿಸಿದೆ.
ಕಾಂಗ್ರೆಸ್ ಈಗ ನೇರವಾಗಿ ಮೀಸಲಾತಿಯ ಬುಟ್ಟಿಗೆ ಕೈ ಹಾಕಿದೆ. ದಲಿತರು, ಹಿಂದುಳಿದವರು ತಮ್ಮ ಕೈ ಹಿಡಿಯುತ್ತಿಲ್ಲಎಂದು ಕಾಂಗ್ರೆಸ್ ಪಕ್ಷಕ್ಕೆ ಅರಿವಾಗುತ್ತಲೇ ಮುಸಲ್ಮಾನರನ್ನು ಅತಿಯಾಗಿ ಓಲೈಸಲು ಮುಂದಾಗಿದೆ. ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯಲಿದ್ದು,
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ದಲಿತರ, ಹಿಂದುಳಿದವರ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ನೀಡಲು ಷಡ್ಯಂತ್ರ ರೂಪಿಸಿದೆ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದೆ. ಮಹಾರಾಷ್ಟ್ರದಲ್ಲಿ ಉಲೇಮಾ ಅಸೋಸಿಯೇಷನ್, ಮುಸ್ಲಿಂ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ 10% ರಷ್ಟು ಮೀಸಲು ಕೋರಿ ಕಾಂಗ್ರೆಸ್ ಪಕ್ಷಕ್ಕೆ ಮನವಿ ಸಲ್ಲಿಸಿದೆ.
ಇದಕ್ಕೆ ಮಹರಾಷ್ಟ್ರ ಕಾಂಗ್ರೆಸ್ ಒಪ್ಪಿದೆ. ಕಾಂಗ್ರೆಸ್ಸಿನ ಈ ನಿರ್ಧಾರದಿಂದಾಗಿ ಬುಡಕಟ್ಟು ಜನಾಂಗ, ದಲಿತರು ಹಾಗೂ ಹಿಂದುಳಿದ ವರ್ಗಗಳ ಅವಕಾಶಗಳಿಗೆ ಕುತ್ತು ಬರಲಿದೆ ಎಂದು ಬಿಜೆಪಿ ಆತಂಕ ವ್ಯಕ್ತ ಪಡಿಸಿದೆ. ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ದಲಿತರು ಹಾಗೂ ಹಿಂದುಳಿದವರ ಬದುಕಿಗೆ ಕೊಳ್ಳಿ ಇಡುತ್ತಿದೆ.
ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಕೂಡಾ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದು ತಪ್ಪು ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಮುಸಲ್ಮಾನರನ್ನು ಮೆಚ್ಚಿಸಲು ಕಾಂಗ್ರೆಸ್ ಇಂದು ಅಂಬೇಡ್ಕರ್ ಅವರ ಮಾತುಗಳಿಗೂ ಕಿಮ್ಮತ್ತು ನೀಡುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ.