ಮಹಿಳೆಯರು ಶೌರ್ಯ-ಧೈರ್ಯ ಬೆಳೆಸಿಕೊಳ್ಳಬೇಕು: ಸಚಿವ ಮುನಿಯಪ್ಪ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು ಗ್ರಾಮಾಂತರ:
ಮಹಿಳೆಯರು ವೀರ ವನಿತೆ ಒನಕೆ ಓಬವ್ವರ ಆತ್ಮಸ್ಥೈರ್ಯದೊಂದಿಗೆ ಸಮಯ ಪ್ರಜ್ಞೆ
, ಧೈರ್ಯ, ಶೌರ್ಯ ಮತ್ತು ಸಾಹಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಹೇಳಿದರು.

ದೇವನಹಳ್ಳಿ ಟೌನ್ ನ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮನ್ನು ಉದ್ಘಾಟಿಸಿ, ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

 ವೀರ ವಿನಿತೆ ಒನಕೆ ಓಬವ್ವ ನಮಗೆಲ್ಲರಿಗೂ ಆದರ್ಶ ಪ್ರಾಯರಾಗಿದ್ದಾರೆ. ಮಹಿಳೆಯರು ಅವರ ಆದರ್ಶಗಳನ್ನು ಪಾಲಿಸುವ ಮೂಲಕ ನಾಡಿನ ರಕ್ಷಣೆ ಪಣತೊಡಬೇಕು ಎಂದರು. 

 ಎದುರಾಳಿ ಸೈನಿಕರು ಕೋಟೆಯನ್ನು ಮುತ್ತಿಗೆ ಹಾಕಿದಾಗ ಮನೆಯಲ್ಲಿದ್ದ ಒನಕೆಯನ್ನೇ ಆಯುಧವನ್ನಾಗಿಸಿ ಎದುರಾಳಿ ಸೈನಿಕರ ಹೊಡೆದುರುಳಿಸಿ ಕೋಟೆಯನ್ನು ರಕ್ಷಿಸಿದರು. ಅಂತಹ ವೀರ ವನಿತೆ ಒನಕೆ ಓಬವ್ವ ಅವರ ಕಾಯಕ ನಿಷ್ಠೆ, ಧೈರ್ಯ ನಾಡಿನ ಮಹಿಳೆಯರಿಗೆ ಆದರ್ಶವಾಗಿದೆ. ನಿಜ ಜೀವನದಲ್ಲಿ ಧೈರ್ಯ, ಸಾಹಸವನ್ನು ಮಹಿಳೆಯರು ಅಳವಡಿಸಿಕೊಂಡಲ್ಲಿ ಕರ್ತವ್ಯ ನಿಷ್ಠೆ, ಕಾಯಕ ನಿಷ್ಠೆಯಿಂದ ಧೈರ್ಯವಾಗಿ ಬದುಕಬಹುದು ಎಂದು ಸಚಿವರು ಹೇಳಿದರು.

 ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಮಾತನಾಡಿ ಓಬವ್ವ ಅವರ ಧೈರ್ಯ ಹಾಗೂ ಸಾಹಸದಿಂದ ಹತ್ತಾರು ಸೈನಿಕರನ್ನು ಹೊಡೆದುರುಳಿಸಿ ಕೋಟೆಯನ್ನು ರಕ್ಷಿಸಿದ್ದಕ್ಕಾಗಿ ವೀರವನಿತೆ ಓಬವ್ವ ಎಂದು ಕರೆಯುತ್ತಾರೆ. ಮಹಿಳೆಯರ ಧೈರ್ಯಕ್ಕೆ ಒಂದು ಸ್ಪೂರ್ತಿ ವೀರವನಿತೆ ಓಬವ್ವ, ಎಲ್ಲರು ಅವರು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜಣ್ಣ, ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್ ಅನುರಾಧ, ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ , ತಾಲೂಕು ಪಂಚಾಯಿತಿ ಇಒ ಶ್ರೀನಾಥಗೌಡ, ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸಮುದಾಯದ ವಿವಿಧ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

- Advertisement -  - Advertisement - 
Share This Article
error: Content is protected !!
";