ಸಚಿವರ ಕಚೇರಿ ಮುಂದೆ ತಮಟೆ ಚಳವಳಿ ಹಿಂದಕ್ಕೆ: ಲಿಂಗಾರೆಡ್ಡಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
      ಕರ್ನಾಟಕದ ನೀರಾವರಿ ಒಳಗೊಂಡಂತೆ ಪ್ರಮುಖ ಯೋಜನೆಗಳ ಕಡತಗಳು ಕೇಂದ್ರ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರ ಮುಖಾಂತರವೇ ಬರಬೇಕು ಎಂದು ಕೇಂದ್ರ ಸರ್ಕಾರ ಕೈಗೊಂಡಿರುವ ಮಹತ್ತರ ತೀರ್ಮಾನವ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಲಿಂಗಾರೆಡ್ಡಿ ಸ್ವಾಗತಿಸಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಅಕ್ಟೋಬರ್ ಎರಡರ ಗಾಂಧಿ ಜಯಂತಿ  ದಿನದಂದು ಚಿತ್ರದುರ್ಗಕ್ಕೆ ಆಗಮಿಸಿದ್ದ ಸಚಿವ ವಿ.ಸೋಮಣ್ಣ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಯೊಂದಿಗೆ ಅರ್ಧ ತಾಸು ಮಾತುಕತೆ ನಡೆಸಿ ಇನ್ನು ಒಂದುವರೆ ತಿಂಗಳ ಒಳಗಾಗಿ ಭದ್ರಾ ಮೇಲ್ದಂಡೆಗೆ ಕೇಂದ್ರ ಘೋಷಿಸಿರುವ 5300 ಕೋಟಿ ರೂ ಅನುದಾನದ ಮೊದಲ ಕಂತು ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದ್ದರು.

       ನಂತರದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಅಕ್ಟೋಬರ್ 17 ರಂದು ಆದೇಶ ಹೊರಡಿಸಿ ಕರ್ನಾಟಕದ ನೀರಾವರಿ ಯೋಜನೆಯ ಪರಿಶೀಲನೆ ನಡೆಸುವ, ಅಧಿಕಾರಿಗಳೊಂದಿಗೆ ಚರ್ಚಿಸುವ ಜವಾಬ್ದಾರಿಯ ವಿ.ಸೋಮಣ್ಣ ಅವರಿಗೆ ವಹಿಸಿದೆ.

ರಾಜ್ಯ ಸಚಿವರೊರ್ವರಿಗೆ ಕೇಂದ್ರ ಸರ್ಕಾರ ಇಂತಹ ಜವಾಬ್ದಾರಿ ನೀಡಿರುವುದು ಇತ್ತಿಚೆಗಿನ ವರ್ಷಗಳಲ್ಲಿ ಪ್ರಥಮವಾಗಿದೆ.  ಕರ್ನಾಟಕದ ನೀರಾವರಿ ಯೋಜನೆ ಉಸ್ತುವಾರಿ ಸೋಮಣ್ಣ ಅವರಿಗೆ ವಹಿಸಿರುವುದು ಕೇಂದ್ರದ ಅನುದಾನ ತರುವಲ್ಲಿ ಸೋಮಣ್ಣ ಅವರ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೋರಾಟ ಸಮಿತಿ ಭಾವಿಸುತ್ತದೆ.

ಸಂಸದ ಗೋವಿಂದ ಕಾರಜೋಳ ಅವರನ್ನು ಕೇಂದ್ರ ಜಲಶಕ್ತಿ ಸಚಿವಾಲಯದ ಸಂಸದೀಯ ಸಲಹಾ ಸಮಿತಿಗೆ ಕೇಂದ್ರ ಸರ್ಕಾರ ಸದಸ್ಯರನ್ನಾಗಿ ನೇಮಿಸಿದೆ. ಹಾಗಾಗಿ ಕಾರಜೋಳ ಹಾಗೂ ಸಚಿವ ವಿ.ಸೋಮಣ್ಣ ಒಟ್ಟಾಗಿ ಸೇರಿ ಭದ್ರಾ ಮೇಲ್ದಂಡೆ ಅನುದಾನ ಬಿಡುಗಡೆಗೆ ಶ್ರಮಿಸಬೇಕೆಂದು ಸಮಿತಿ ಆಗ್ರಹಿಸುತ್ತದೆ.

      ಭದ್ರಾ ಮೇಲ್ದಂಡೆಗೆ ಕೇಂದ್ರ ಸರ್ಕಾರ ಅನುದಾನ ನೀಡಬೇಕಾದರೆ ಮೊದಲು ಅದು ಕೇಂದ್ರ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ನಂತರ ಜಿಓ(ಸರ್ಕಾರಿ ಆದೇಶ) ಆಗಬೇಕು.ತರುವಾಯ ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ರಾಜ್ಯ ಜಲಸಂಪನ್ನೂಲ ಅಧಿಕಾರಿಗಳು ಎಂಓಯು(ಒಪ್ಪಿಗೆ ಪತ್ರ) ಸಹಿಹಾಕಬೇಕು. ನಂತರ ಹಣಕಾಸು ಇಲಾಖೆ ನೆರವು ನೀಡಬೇಕು. ಇದಲ್ಲದೇ ಕೇಂದ್ರ ಅನುದಾನ ನೀಡಬೇಕಾದರೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ.40 ರಷ್ಟು ಅನುದಾನ ಕಾಯ್ದಿರಿಸಲು ಸಜ್ಜಾಗಬೇಕಾಗಿದೆ.

    ನೀರಾವರಿ  ಯೋಜನೆಯ ಉಸ್ತುವಾರಿಯನ್ನು ವಿ.ಸೋಮಣ್ಣ ಅವರಿಗೆ ನೀಡಿರುವುದರಿಂದ  ನೀರಾವರಿ ಹೋರಾಟ ಸಮಿತಿ ಸಚಿವರ ತುಮಕೂರು ಕಚೇರಿ ಮುಂದೆ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ತಮಟೆ ಚಳವಳಿಯ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದೆ.

ವಿಧಾನಸಭೆ  ಉಪ ಚುನಾಣೆ ನಂತರ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಜೊತೆ ಚರ್ಚಿಸುವುದಾಗಿ ಸೋಮಣ್ಣ ಭರವಸೆ ನೀಡಿದ್ದಾರೆ. ಅಗತ್ಯ ಬಂದಲ್ಲಿ ಹೋರಾಟ ಸಮಿತಿ ನಿಯೋಗದೊಂದಿಗೆ ಕೇಂದ್ರ ಜಲಶಕ್ತಿ ಸಚಿವರ ಭೇಟಿಯಾಗಲು ಸಮಯಾವಕಾಶ ಕಲ್ಪಿಸುವುದಾಗಿ ಸಚಿವರು ತಿಳಿಸಿದ್ದಾರೆ.

    ಭದ್ರಾ ಮೇಲ್ದಂಡೆಗೆ ಕೇಂದ್ರದ ಅನುದಾನ ಪಡೆಯಲು ಮುಂದಿನ ಕೇಂದ್ರ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಬೇಕು.  ಈಗಾಗಲೇ ರಾಜ್ಯ ಸರ್ಕಾರದಿಂದ ಜಲಶಕ್ತಿ ಸಚಿವಾಲಯದ ಮುಂದೆ ಮರು ಪ್ರಸ್ತಾವನೆ ಸಲ್ಲಿಕೆಯಾಗಿದ್ದು 1754 ಕೋಟಿ ರೂ ಅನುದಾನ ಖೋತಾ ಮಾಡದೆ ಬಜೆಟ್ ಘೋಷಣೆಯಂತೆ 5300 ಕೋಟಿ ರೂ ಒದಗಿಸಬೇಕೆಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆಗ್ರಹಿಸುತ್ತದೆ.

ಹೋರಾಟ ಸಮಿತಿಯ ಯಾದವರೆಡ್ಡಿ, ಧನಂಜಯ, ಜಿ.ಬಿ.ಶೇಖರ್, ಬಸ್ತಿಹಳ್ಳಿ ಸುರೇಶ್, ತಿಪ್ಪೇಸ್ವಾಮಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

 

- Advertisement -  - Advertisement - 
Share This Article
error: Content is protected !!
";