ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಇದು ನಾಡಿನ ಅತಿ ದೊಡ್ಡ ಸಂಘಟನೆ ಇರುವ ಒಂದು ಸಂಸ್ಥೆ. 1906ರಲ್ಲಿಯೇ ಈ ಸಂಘದ ಸ್ಥಾಪನೆ ಆಗಿ ಅವತ್ತಿಗೇ ಜನಾಂಗದವರಿಗಾಗಿಯೇ ಒಕ್ಕಲಿಗರ ಪತ್ರಿಕೆ ತಂದಿದ್ದು, ಈತನಕ ಆ ಸಂಘದ ಚಟುವಟಿಕೆ ಹಾಗೂ ಒಕ್ಕಲಿಗರಿಂದ ಸ್ಥಾಪಿತ ನಮ್ಮ ಆಂತರಿಕ ಸರ್ಕಾರವೇ ಸರಿ.
ನೂರಾರು ವರುಷಗಳ ಹಿಂದೆಯೇ ಸಂಘದ ಹುಟ್ಟಿಗೆ ಕಾರಣರಾದ ಹಲವರ ಪೈಕಿ ಕೆ.ಎಚ್. ರಾಮಯ್ಯ ಪ್ರಮುಖರಲ್ಲಿ ಒಬ್ಬರು. ರಾಜಮನೆತನದ ಆಪ್ತರಾಗಿದ್ದ ರಾಮಯ್ಯನವರು 12.7 ಎಕರೆ ಜಾಗವನ್ನು ಪಡೆದು ಶಿಕ್ಷಣ ಸಂಸ್ಥೆಗಳು ವಸತಿ ನಿಲಯ ಹೀಗೆ ಹಲವು ಕಾರ್ಯಕ್ರಮ ಜಾರಿಗೆ ಬರುವಂತೆ ಮಾಡಿದರು. ಬೆಂಗಳೂರಿನಲ್ಲಿ ಇರುವ ಸಂಘ ರಾಮಯ್ಯನವರ ದೂರ ದೃಷ್ಟಿಯ ಫಲ…
ರಾಮಯ್ಯನವರು ಹುಟ್ಟಿದ್ದು 12/07/1879 ರಂದು ಬೆಂಗಳೂರಿನ ಬಳೇಪೇಟೆಯಲ್ಲಿರುವ ರಂಗನಾಥಸ್ವಾಮಿಗುಡಿ ಬೀದಿಯ ಮನೆ ನಂಬರ್ 104. ತಂದೆ ಹನುಮಾ ಮೇಸ್ತ್ರಿ, ತಾಯಿ ನಂಜಮ್ಮ. ಇವರ ಪೂರ್ವಿಕರ ಊರು ದೊಡ್ಡಬಳ್ಳಾಪುರದ ಕಲ್ಲುದೇವರಹಳ್ಳಿ.
ರಾಮಯ್ಯನವರು 1933 ಅಕ್ಟೋಬರ್ 5ರಂದು ಹೃದಯಾಘಾತದಿಂದ ನಿಧನರಾದರು. ಒಕ್ಕಲಿಗ ಜನಾಂಗದ ಅಪೂರ್ವ ಪುರುಷ ಸಿಂಹನೆಂದೇ ಜನಜನಿತರಾಗಿದ್ದ ರಾಮಯ್ಯನವರು ಒಕ್ಕಲಿಗರ ಹಿತ ಏಳಿಗೆಗಾಗಿಯೇ ದುಡಿದವರಲ್ಲ, ಹಿಂದುಳಿದ ಎಲ್ಲಾ ವರ್ಗದ ಶ್ರೇಯಸ್ಸಿಗೆ ಶ್ರಮಿಸಿದ ಮಹನೀಯ. ಒಕ್ಕಲಿಗರ ಸಂಘದ ರೂವಾರಿ ಆಗಿದ್ದರೂ ಆದಿ ಕರ್ನಾಟಕ ಸಂಸ್ಥೆ ಕಟ್ಟಿದ ಮಹಾತ್ಮರಿವರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಕಲ್ಲುದೇವರಹಳ್ಳಿಯ ರೈತ ಕುಟುಂಬ ಮೂಲದಿಂದ ಬಂದ ರಾಮಯ್ಯನವರು ನ್ಯಾಯಾಂಗ ಪದವೀಧರರಾಗಿ ಇಂಗ್ಲೆಂಡ್‌ಗೆ ಹೋಗಿ ನ್ಯಾಯಶಾಸ್ತ್ರದ ಉನ್ನತ ಪದವಿ ಬಾರ್ ಆಟ ಲಾ ಮಾಡಿ ಬಂದವರು. ವಿದ್ಯಾರ್ಥಿ ದೆಶೆಯಲ್ಲಿಯೇ ಕರ್ನಾಟಕದ ಹಿಂದುಳಿದ ಜನಾಂಗಗಳ ಬಗ್ಗೆ, ಅವರ ಶಿಕ್ಷಣದ ಬಗ್ಗೆ, ಏಳಿಗೆಯ ಬಗ್ಗೆ ಚಿಂತಿಸಿದವರು.
ಬ್ರಾಹ್ಮಣೇತರರಿಗೆ ಆ ಕಾಲದಲ್ಲಿ ಅವರು ಎಷ್ಟೇ ಉನ್ನತ ಶಿಕ್ಷಣ ಪಡೆದಿದ್ದರೂ ಸರ್ಕಾರದ ಉನ್ನತ ಹುದ್ದೆಗಳು ದೊರೆಯುತ್ತಿರಲಿಲ್ಲ. ಇದರ ವಿರುದ್ಧ ಚಳುವಳಿಯೊಂದನ್ನು ರೂಪಿಸಿ ಆಗ ಮೈಸೂರು ದೇಶವನ್ನು ಆಳುತ್ತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಬಗ್ಗೆ ಚಿಂತಿಸುವಂತೆ ಪ್ರಭಾವ ಬೀರಿದ್ದರು.
ಇದರಿಂದಾಗಿ ಮಹಾರಾಜರ ಸರ್ಕಾರ ಸಮಿತಿಯೊಂದನ್ನು ರಚಿಸಿ ಬ್ರಾಹ್ಮಣೇತರರಿಗೆ ಸರ್ಕಾರಿ ಹುದ್ದೆಗಳನ್ನು ಮೀಸಲಿಡುವ ಪದ್ಧತಿ ಜಾರಿಗೆ ಬಂತು. ಈ ಹಿನ್ನೆಲೆಯಲ್ಲಿ ಕೆ.ಎಚ್. ರಾಮಯ್ಯನವರು ತಮ್ಮ ವಿದೇಶ ಅಧ್ಯಯನವನ್ನು ಮುಗಿಸಿ ಬಂದ ಮೇಲೆ ಮಹಾರಾಜರ ಸರ್ಕಾರದಲ್ಲಿ ಉನ್ನತ ಹುದ್ದೆಯೊಂದನ್ನು ಅವರಿಗೆ ನೀಡಲಾಯಿತು.
ಹದಿನೆಂಟು-ಹತ್ತೊಂಬತ್ತನೆಯ ಶತಮಾನಗಳಲ್ಲಿ ಪಾಶ್ಚಿಮಾತ್ಯ ದೇಶಗಳು ಕೈಗಾರಿಕಾ ಕ್ರಾಂತಿ ಮತ್ತು ಪರಸ್ಪರ ಸಹಕಾರದಿಂದ ಉನ್ನತಿಯನ್ನು ಸಾಧಿಸಿ ಮುನ್ನಡೆಯುತ್ತಿದ್ದವು. ಇದರ ಪರಿಣಾಮ ಮೈಸೂರು ರಾಜ್ಯ ವಿಶೇಷವಾಗಿ ಗ್ರಾಮಾಂತರ ಪ್ರದೇಶದ ಅಭಿವೃದ್ಧಿಯ ದೃಷ್ಟಿಯಿಂದ ಸಹಕಾರ ಇಲಾಖೆಯನ್ನು ಸ್ಥಾಪಿಸಿತು.
ಈ ಇಲಾಖೆಯ ಮುಖ್ಯಸ್ಥರಾಗಿ ಕೆ.ಎಚ್. ರಾಮಯ್ಯನವರನ್ನು ನಿಯೋಜಿಸಲಾಯಿತು. ಗ್ರಾಮೀಣ ಜನಸಾಮಾನ್ಯರ ಏಳಿಗೆಯ ಆಶೋತ್ತರಗಳನ್ನು ಸದಾ ಚಿಂತಿಸುತ್ತಿದ್ದ ರಾಮಯ್ಯನವರಿಗೆ ಈ ಹುದ್ದೆ ದೊರೆತದ್ದು ಸಂತೋಷವನ್ನೇ ಉಂಟು ಮಾಡಿತು. ಅವರು ಇಡೀ ರಾಜ್ಯದ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ವಿವಿಧ ಜನಾಂಗಗಳ ಬಗ್ಗೆ ಅಧ್ಯಯನ ನಡೆಸಿದರು.
ಇದು ಎಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಪಡೆದುಕೊಂಡಿತೆಂದರೆ ಪ್ರತಿಯೊಂದು ಜನಾಂಗವು ತಮ್ಮ-ತಮ್ಮ ಜನಾಂಗದ ಏಳಿಗೆಗಾಗಿ ರಚಿಸಿಕೊಂಡ ಸಂಘ ಸಂಸ್ಥೆಗಳಿಗೆ ಕೆ.ಎಚ್. ರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾರ್ಗದರ್ಶಕರನ್ನಾಗಿ ಮಾಡಿಕೊಂಡರು.
ಮೈಸೂರು ರಾಜ್ಯದಲ್ಲಿ ಈ ಸಹಕಾರಿ ಚಳುವಳಿ ಸಮಸ್ತ ಜನ ಸಮುದಾಯಗಳನ್ನು ಆಕರ್ಷಿಸಲಾರಂಭಿಸಿತು. ಇದರಿಂದಾಗಿ ಮಹಾರಾಜರು ಕೆ.ಎಚ್. ರಾಮಯ್ಯನವರಿಗೆ ಸಹಕಾರ ಇಲಾಖೆಯ ಮುಖ್ಯಾಧಿಕಾರದ ಜೊತೆಗೆ ಜನಾಂಗ ಅಭಿವೃದ್ಧಿಯ ಹೊಣೆಯನ್ನು ಇಲಾಖೆಯ ಮುಖ್ಯಾಧಿಕಾರ ವಹಿಸಿದರು. ಹೀಗಾಗಿ ಕೆ.ಎಚ್. ರಾಮಯ್ಯನವರು ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಅವರ ತಮ್ಮ ಕಂಠೀರವ ನರಸಿಂಹರಾಜ ಒಡೆಯರ ಗಮನವನ್ನು ಸೆಳೆದರು.
ಇಂಗ್ಲೆಂಡ್‌ನಲ್ಲಿ ಉಂಟಾಗಿದ್ದ ಕೈಗಾರಿಕಾ ಕ್ರಾಂತಿ ಮತ್ತು ಸಮಾಜ ಅಭಿವೃದ್ಧಿ ಕಾರ‍್ಯಗಳು ಈ ಇಬ್ಬರನ್ನು ಬಹಳವಾಗಿ ಆಕರ್ಷಿಸಿದವು. ಅಂತಹ ಒಂದು ಕೈಗಾರಿಕಾ ಅಭಿವೃದ್ಧಿ ಮೈಸೂರು ರಾಜ್ಯದಲ್ಲಿಯು ಆಗಬೇಕೆಂಬುದು ಮಹಾರಾಜರ ಆಸೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸಹೋದರ ಕಂಠೀರವ ನರಸಿಂಹರಾಜ ಒಡೆಯರನ್ನು ಯೂರೋಪ್ ದೇಶಗಳಿಗೆ ಅಧ್ಯಯನ ಪ್ರವಾಸಕ್ಕಾಗಿ ಕಳುಹಿಸಲು ತೀರ್ಮಾನಿಸಿದರು. ಕೆ.ಎಚ್. ರಾಮಯ್ಯನವರನ್ನು ಯುವರಾಜರ ಆಪ್ತ ಕಾರ‍್ಯದರ್ಶಿಯಾಗಿ ಕಳುಹಿಸಿ ನಿರ್ಧರಿಸಿದರು.
ಯುವರಾಜರು ಮತ್ತು ರಾಮಯ್ಯನವರು ಪ್ರವಾಸ ಮುಗಿಸಿ ಹಿಂತಿರುಗುವ ಹೊತ್ತಿಗೆ ಅವರ ಮಧ್ಯೆ ಇದ್ದ ರಾಜ ಮತ್ತು ಪ್ರಜೆ ಎಂಬ ಅಂತರ ಹೋಗಿ ಆತ್ಮೀಯ ಸ್ನೇಹಿತರಾಗಿದ್ದರು.
ರಾಮಯ್ಯನವರ ಅಕಾಲಿಕ ಮರಣದ ಸಂದರ್ಭದಲ್ಲಿ ಯುವರಾಜ ಕಂಠೀರವ ನರಸಿಂಹರಾಜ ಒಡೆಯರು ಈ ವಿಚಾರವನ್ನು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. ಹೀಗೆ ಅನಕ್ಷರಸ್ಥ ರೈತ ಕುಟುಂಬ ಮೂಲದಿಂದ ಬಂದ ಒಬ್ಬ ವ್ಯಕ್ತಿ ಮಹಾರಾಜರಿಗೆ ಆಪ್ತರಾಗಿ ಯುವ ರಾಜರಿಗೆ ಆತ್ಮೀಯ ಸ್ನೇಹಿತರಾಗಿ ರೂಪುಗೊಂಡದ್ದು ಒಂದು ವಿಸ್ಮಯಕಾರಿ ಅಪೂರ್ವ ಘಟನೆ ಎಂದು ಹೇಳಬಹುದು.
ಕೆ.ಎಚ್. ರಾಮಯ್ಯನವರನ್ನು ಮಹಾರಾಜರ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯದೊಂದಿಗೆ ಹಿಂದುಳಿದ ಜನಾಂಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಏಳಿಗೆಗಾಗಿ ನಿಯೋಜಿಸಿದ್ದು ನಿರಂಕುಶ ಆಡಳಿತದಲ್ಲಿ ಒಂದು ಆಶ್ಚರ್ಯಕರವಾದ ಘಟನೆ ಎಂದು ಹೇಳಬಹುದು ರಾಮಯ್ಯನವರು. ಇಡೀ ಮೈಸೂರು ರಾಜ್ಯವನ್ನು ಸುತ್ತಿ ಪ್ರತಿಯೊಂದು ಹಿಂದುಳಿದ ಜನಾಂಗವು ಹೇಗೆ ಅಭಿವೃದ್ಧಿ ಪಥದಲ್ಲಿ ನಡೆಯಬೇಕೆಂಬುದನ್ನು ತಿಳಿಸಿ ಮಾರ್ಗದರ್ಶನ ಮಾಡಿದರು.
ಅವರಿಗೆ ಸರ್ಕಾರಿ ಅಧಿಕಾರಿ ಎಂಬ ಯಾವುದೇ ನಿರ್ಬಂಧಗಳು ಇರಲಿಲ್ಲ. ಸರ್ಕಾರದ ಉನ್ನತ ಅಧಿಕಾರಿಯೊಬ್ಬ ನಿರಂಕುಶ ರಾಜಪ್ರಭುತ್ವದ ಕಾಲದಲ್ಲಿ ರಾಜಕೀಯ ಪಕ್ಷಗಳು ಅಧ್ಯಕ್ಷತೆ ವಹಿಸಿದ್ದು, ಆ ಬಗ್ಗೆ ರಾಜಕಾರಣಿಗಳೊಂದಿಗೆ ಬೆರೆತು ಚರ್ಚೆ ನಡೆಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ ದೂರದರ್ಶಿತ್ವದ ಸಂಕೇತವಾಗಿದೆ ಎಂದು ಹೇಳಬಹುದು.
ಮೈಸೂರು ರಾಜ್ಯದ ಜನಾಂಗಗಳಲ್ಲಿ ಬ್ರಾಹ್ಮಣರನ್ನು ಹೊರತುಪಡಿಸಿದರೆ ಮಿಕ್ಕ ಯಾವುದೇ ಜನಾಂಗವು ಶಿಕ್ಷಣದತ್ತ ಗಮನ ಹರಿಸಿರಲಿಲ್ಲ. ಒಂದು ರೀತಿಯಲ್ಲಿ ಅದಕ್ಕೆ ಅವಕಾಶವು ಇರಲಿಲ್ಲ ಎಂದು ಹೇಳಬಹುದು. ಮಹಾರಾಜರ ಸುತ್ತ-ಮುತ್ತ ಇದ್ದವರೆಲ್ಲ ಮೇಲುವರ್ಗದವರಾಗಿದ್ದು ಗ್ರಾಮೀಣ ಜನರು ಶೂದ್ರರು ಶಿಕ್ಷಣ ಪಡೆದು ಮೇಲೆ ಬರುವುದನ್ನು ಒಪ್ಪುವವರಾಗಿರಲಿಲ್ಲ.
ಆ ಜನರು ಪ್ರತಿಯೊಬ್ಬರು ತಮ್ಮ-ತಮ್ಮ ಕುಲಕಸುಬಗಳನ್ನು ಮಾಡಿಕೊಂಡು ಕೇವಲ ಅಧೀನರಾಗಿ ಇರಬೇಕೆಂಬುದೇ ಅವರ ಆಶಯವಾಗಿತ್ತು. ಇದಕ್ಕೆ ತಡೆ ಹಾಕಿದವರು ಬ್ರಿಟಿಷರು ಎಂಬುದನ್ನು ಜನ ಕೃತಜ್ಞತೆಯಿಂದ ಸ್ಮರಿಸಬೇಕು. ಸಮಾನ ಶಿಕ್ಷಣ, ಸಮಾನ ಅವಕಾಶ, ಸಮಾನ ಪರಿಸರ ಎಲ್ಲರಿಗೂ ದೊರೆಯಬೇಕೆಂಬುದು ಆಗಿನ ಸರ್ಕಾರದ ಬ್ರಿಟಿಷ್ ಅಧಿಕಾರಿಗಳ ಇಷ್ಟವಾಗಿತ್ತು. ಬ್ರಿಟಿಷರು ನಮ್ಮ ದೇಶದ ಸಂಪತ್ತನ್ನು ಲೂಟಿ ಹೊಡೆದಿರಬಹುದು.
ನಮ್ಮನ್ನು ಒಂದು ರೀತಿಯ ಸಂಪತ್ತನ್ನು ಲೂಟಿ ಹೊಡೆದಿರಬಹುದು. ನಮ್ಮನ್ನು ಒಂದು ರೀತಿಯ ಗುಲಾಮಗಿರಿಯಲ್ಲೂ ಇಟ್ಟಿರಬಹುದು. ಆದರೆ ಮೂಢನಂಬಿಕೆಗಳ ಜಾತಿ ವ್ಯವಸ್ಥೆಯ ಮೇಲು-ಕೀಳುಗಳ ಅಂಧಕಾರದಲ್ಲಿ ಮುಳುಗಿದ್ದ ಈ ಜನರನ್ನು ಬೆಳಕಿನತ್ತ ತಿರುಗಿಸಿದ್ದು, ಪ್ರಜಾಪ್ರಭುತ್ವದ ಕಲ್ಪನೆ ಮೂಡಿಸಿದ್ದು ಇಂಗ್ಲೀಷರು ಎಂಬುದನ್ನು ಮರೆಯಬಾರದು.
ಕೆ.ಎಚ್. ರಾಮಯ್ಯನವರು ಈ ದೆಸೆಯಲ್ಲಿ ಅಪಾರವಾಗಿ ಶ್ರಮಹಿಸಿದ್ದಾರೆ. ಅತ್ಯಂತ ಕೆಳಸ್ತರದಲ್ಲಿದ್ದ ಹರಿಜನರಿಗೆ ಶಿಕ್ಷಣ ಕೊಡಬೇಕೆಂಬ ಯೋಜನೆಯನ್ನು ಮಹಾರಾಜರ ಗಮನಕ್ಕೆ ತಂದು ಅವರಿಗಾಗಿ ಪ್ರತ್ಯೇಕ ಶಾಲೆಗಳನ್ನು ಈಗಿನ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಸ್ವತಃ ನಾಲ್ವಡಿ ಕೃಷ್ಣರಾಜ ಒಡೆಯರೇ ಉದ್ಘಾಟಿಸಿದರು. ಆ ಶಾಲೆಗೆ ಉಪಾಧ್ಯಾಯರೊಬ್ಬರು ದೊರಕುವುದೇ ದುರ್ಲಬವಾಯಿತು.
ಕೆ.ಎಚ್. ರಾಮಯ್ಯನವರು ಆದಿ ದ್ರಾವಿಡ ಸಂಘ ಎಂಬ ಸಂಸ್ಥೆಯೊಂದನ್ನು ಹುಟ್ಟು ಹಾಕಿ ದಲಿತರ ಸಾಮಾಜಿಕ ಮತ್ತು ಶೈಕ್ಷಣಿಕ ಏಳಿಗೆಗಾಗಿ ಸೇವೆ ಮಾಡುವಂತೆ ಪ್ರಚೋದಿಸಿದರು. ಹೀಗೆ ಅತ್ಯಂತ ಕೆಳಸ್ತರದ ಜನರಿಗೂ ಇತರರಂತೆ ಸಾಮಾಜಿಕ ಸ್ಥಾನಮಾನಗಳು ದೊರೆಯಬೇಕೆಂಬುದು ರಾಮಯ್ಯನವರ ಆಶಯವಾಗಿತ್ತು.
ಮೈಸೂರು ರಾಜ್ಯದಲ್ಲಿ ಅನೇಕ ಜನಾಂಗಗಳಿದ್ದು ಅವುಗಳಲ್ಲಿ ಅನೇಕ ಒಳಪಂಗಡಗಳಿದ್ದವು. ಈ ಒಳ ಪಂಗಡಗಳು ಸದಾ ಪರಸ್ಪರ ಕಿತ್ತಾಟದಲ್ಲಿ ತೊಡಗಿರುತ್ತಿದ್ದವು. ಒಬ್ಬರ ಏಳಿಗೆಯನ್ನು ಇನ್ನೊಬ್ಬರು ಸಹಿಸುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಕೆ.ಎಚ್. ರಾಮಯ್ಯನವರು ಪ್ರತಿಯೊಂದು ಜನಾಂಗದ ಸಭೆಗಳನ್ನು ನಡೆಸಿ ಈ ಎಲ್ಲಾ ಜನಾಂಗದ ಒಳಪಂಗಡದವರನ್ನು ಒಂದೆಡೆ ಸೇರಿಸಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಪ್ರಗತಿ ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ಈ ಒಳಪಂಗಡಗಳ ಕಿತ್ತಾಟ ಮೇಲ್ವರ್ಗದವರನ್ನು ಕಾಡುತ್ತಿತ್ತು. ಅಂತಹ ಮೇಲುವರ್ಗದ ಜನಾಂಗದವರಿಗೆ ಕೂಡ ಮಾರ್ಗದರ್ಶನ ಮಾಡಿದ್ದಾರೆ. ಪ್ರತಿಯೊಂದು ಹಿಂದುಳಿದ ಜನಾಂಗವು ತಮ್ಮ ತಮ್ಮ ಜನಾಂಗಗಳ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದು ಹೇಳುವುದರ ಜೊತೆಗೆ ಅದಕ್ಕಾಗಿ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸುವಂತೆ ಪ್ರೇರೇಪಿಸುತ್ತಿದ್ದರು. ಹೀಗೆ ಹಿಂದುಳಿದ ಜನಾಂಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಏಳಿಗೆಗೆ ಅವರು ದುಡಿದಿದ್ದಾರೆ.
ಸಮಾಜದ ಉನ್ನತಿಗಾಗಿ ಕೆಲಸ ಮಾಡಿದವರನ್ನು ಸ್ಮರಿಸಿ ಗೌರವಿಸುವುದು ಒಂದು ಸಾಮಾಜಿಕ ಕರ್ತವ್ಯ. ಅನೇಕ ಮಹನೀಯರು ನಾನಾ ಕ್ಷೇತ್ರಗಳಲ್ಲಿ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಸಮಾಜದ ಏಳಿಗೆಗಾಗಿ ದುಡಿದಿರುವ ಅನೇಕ ಉದಾಹರಣೆಗಳಿವೆ. ಅವರ ಮಹನೀಯರನ್ನು ಮತ್ತು ಅವರ ಜೀವನ ಸಾಧನೆಗಳನ್ನು ದಾಖಲಿಸಿ ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವುದು ಅಗತ್ಯ.
ಏಕೆಂದರೆ ಅಂತಹ ಮಹನೀಯರ ಆದರ್ಶ ಬದುಕು ಮತ್ತು ಜೀವನ ಸಾಧನೆಗಳು ಮುಂದಿನ ಪೀಳಿಗೆಯವರಿಗೆ ತಮ್ಮ ಜೀವನವನ್ನು ಸರಿಮಾರ್ಗದಲ್ಲಿ ರೂಪಿಸಿಕೊಳ್ಳಲು ಮಾರ್ಗದರ್ಶಕವಾಗುತ್ತವೆ. ಅನೇಕ ವೇಳೆ ಹೀಗೆ ಸೇವೆ ಮಾಡಿದವರನ್ನು ನಾನಾ ಕಾರಣಗಳಿಗಾಗಿ ನಿರ್ಲಕ್ಷಿಸುವುದು, ಮರೆತು ಬಿಡುವುದು ಉಂಟು. ಅಕ್ಷರಸ್ಥ ಸಮಾಜದಲ್ಲಿ ಅಕ್ಷರ ಬಲ್ಲವರು ತಮ್ಮವರನ್ನು, ತಮಗೆ ಬೇಕಾದವರನ್ನು ದಾಖಲಿಸುವುದುಂಟು.
ಬೇರೆಯವರ ಬಗ್ಗೆ ಇವರು ದಾಖಲಿಸುವ ಗೋಜಿಗೆ ಹೋಗುವುದಿಲ್ಲ. ತಮ್ಮವರನ್ನು ಮಾತ್ರ ಉತ್ಪ್ರೇಕ್ಷಿಸಿ ದಾಖಲಿಸುವುದುಂಟು. ಹೀಗೆ ಅವಜ್ಞೆಗೆ ಗುರಿಯಾದ ಅನೇಕ ಸಾಧಕರ ಜೀವನ ಸಾಧನೆಗಳು ಕಾಲಗರ್ಭದಲ್ಲಿ ಅಡಗಿ ಹೋಗಿವೆ ಎಂದು ಹೇಳಬಹುದು. ಅಪಾರವಾದ ಸಾಧನೆ ಮಾಡಿಯೂ ಈ ರೀತಿಯ ನಿರ್ಲಕ್ಷ್ಯತೆ ಒಳಗಾದ ಅನೇಕರಲ್ಲಿ ದಿವಂಗತ ಕೆ. ಹೆಚ್. ರಾಮಯ್ಯನವರು ಒಬ್ಬರು.
ರಾಮಯ್ಯನವರ ಅಕಾಲಿಕ ಮರಣ ರಾಜಮನೆತನಕ್ಕೆ ನೋವು ತಂದಿತ್ತು ಅದಕ್ಕಾಗಿ ಆಪ್ತ ಮಿತ್ರನ ಅಂತ್ಯ ಸಂಸ್ಕಾರ ಅರಸರ ನೇತೃತ್ವದಲ್ಲಿ ಜರುಗಿ ಈ ಕೆಳಕಂಡ ಪದಪುಂಜಗಳ ಮೂಲಕ ತಮ್ಮ ಗೌರವ ಹಾಗೂ ಸಂಬಂಧಗಳ ಅನಾವರಣ ಮಾಡಿದ್ದಾರೆ.
ನಿಜವಾಗಿ ನಮ್ಮ ದೇಶದ ಸುಪುತ್ರನಿವನು. ಮಿತ್ರನೋರ್ವನಿರುವನೆಂದರೆ ಅವನಿಲ್ಲಿ ಮಲಗಿಹನು. ಮಿತ್ರನೆಂಬ ಆ ವಸ್ತುವಿನಲ್ಲಿ ನೂರೆಂಟು ದೋಷಗಳಿದ್ದರೂ ಅವಗಳನ್ನು ಮರೆಯಿಸುವ ನೂರೆಂಟು ಗುಣಗಳು ಇದ್ದವು. ಹೆಚ್ಚು ಹೇಳಲೇಕೆ ಆ ವ್ಯಕ್ತಿಗೆ ನಾವೆಲ್ಲಾ ಸೇರಿ ತಲೆ ಬಾಗಿಸುವ.