ಚಂದ್ರವಳ್ಳಿ ನ್ಯೂಸ್, ಮೈಸೂರು:
ಚನ್ನಪಟ್ಟಣದಲ್ಲಿ ಕಳೆದ ಭಾನುವಾರ ರಾತ್ರಿ ಸಚಿವ ಜಮೀರ್ ಅಹ್ಮದ್ ಖಾನ್ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಕೊನೆಗೂ ಬಹಿರಂಗ ಕ್ಷಮೆ ಕೋರಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್‌ಪರವಾಗಿ ಪ್ರಚಾರ ಮಾಡುತ್ತಿದ್ದ ವೇಳೆ ತನ್ನ ಭಾಷಣದ ಮಧ್ಯೆ ಜಮೀರ್ ಅಹ್ಮದ್ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡುವ ಭರದಲ್ಲಿ ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಹೆಚ್ಚು ಡೇಂಜರ್ ಎಂದು ಉರ್ದು ಭಾಷೆಯಲ್ಲಿ ಟೀಕಿಸಿದ್ದರು.
ಜಮೀರ್ ಹೇಳಿಕೆ ಜನಾಂಗಿಯ ನಿಂದನೆ ಎಂದು ರಾಷ್ಟ್ರಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಇದರಿಂದ ಕಾಂಗ್ರೆಸ್‌ಗೆ ಮುಜುಗರವೂ ಆಗಿತ್ತು. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿರುವ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್‌ಗೆ ಮುಜುಗರ ಆಗುತ್ತಿದ್ದಂತೆ ಕ್ಷಮೆಯಾಚನೆ ಮಾಡಿದ್ದಾರೆ.
ಸಚಿವ ಜಮೀರ್ ಖಾನ್ ಮೈಸೂರಿನಲ್ಲಿ ಮಾತನಾಡಿ, ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ರೆ ಕ್ಷಮೆಯಾಚಿಸುತ್ತೇನೆ. ನಾನು ಹೇಳಿರುವ ಉದ್ದೇಶವೇ ಬೇರೆ, ಈ ಹಿಂದೆ ನಾನು ಅವರು ಜೊತೆಯಲ್ಲಿದ್ದಾಗ ನನ್ನನ್ನು ಕುಳ್ಳ ಎನ್ನುತ್ತಿದ್ದರು. ನಾನು ಅವರನ್ನು ಕರಿಯಣ್ಣ ಎಂದು ಕರೆಯುತ್ತಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಪ್ರೀತಿಯಿಂದ ಅವರು ಕುಳ್ಳ ಎಂದಾಗ ನಾನು ಪ್ರೀತಿಯಿಂದಲೇ ಕರಿಯಣ್ಣ ಎನ್ನುತ್ತಿದ್ದೆ ಎಂದಿರುವ ಸಚಿವ ಜಮೀರ್ ಖಾನ್, ಅದನ್ನಷ್ಟೇ ಹೇಳಿದ್ದೇನೆ. ಅವರ ಮೇಲೆ ನನಗೆ ಗೌರವವಿದೆ. ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೇಳಲು ನಾನು ಸಿದ್ಧ ಎಂದು ಹೇಳುವ ಮೂಲಕ ಈ ವಿವಾದಕ್ಕೆ ಕೊನೆ ಹಾಡಲು ಯತ್ನಿಸಿದ್ದಾರೆ.
ದೇವೇಗೌಡರ ಕುಟುಂಬ ಕೊಂಡುಕೊಳ್ಳುತ್ತೇನೆ ಎಂಬ ವಿಚಾರದ ಬಗ್ಗೆಯೂ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಯಾರಾದರೂ ಎಚ್‌ಡಿ ದೇವೇಗೌಡರ ಕುಟುಂಬ ಕೊಂಡುಕೊಳ್ಳಲು ಸಾಧ್ಯವಾ? ನನಗೆ ದೇವೇಗೌಡರ ಮೇಲೆ ಬಹಳ ಗೌರವವಿದೆ.
ಈ ಹಿಂದೆ ಚುನಾವಣೆಯಲ್ಲಿ ಮುಸ್ಲಿಂ ಮತಗಳನ್ನು ಖರೀದಿ ಮಾಡುತ್ತೇನೆ ಎಂದು ಹೇಳಿದ್ದರು. ಅದನ್ನು ಉಲ್ಲೇಖಸಿ ನಾನು ಈ ರೀತಿ ಹೇಳಿದ್ದೇನೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಸಮಜಾಯಿಷಿ ನೀಡಿದರು.