ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯ ಸರ್ಕಾರ ಹಲವು ಭಾಗ್ಯಗಳನ್ನು ನೀಡಿದೆ. ಆದರೆ ರೈತರ ಉಳುವಿಗಾಗಿ ವೃಕ್ಷ ಭಾಗ್ಯ ಯೋಜನೆಯನ್ನು ಕೂಡಲೇ ಜಾರಿಗೆ ತರಬೇಕು ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಗೌರವಾಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಆಗ್ರಹ ಮಾಡಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಕರ್ನಾಟಕ ಸರ್ಕಾರ, ಕೃಷಿ-ತೋಟಗಾರಿಕೆ ಇಲಾಖೆ, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳಗಾರರ ಸಂಘ, ಸುಸ್ಥಿರ ಅಭಿವೃದ್ಧಿ ಸಂಸ್ಥೆ ಹಾಗೂ ಆರಿಗ್ರಾಫ್ ಕಾರ್ಬನ್ ಮಾರ್ಕೆಟ್ಸ್ ಬೆಂಗಳೂರು ಇವರ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಬನ್ ಕ್ರೆಡಿಟ್ ಕುರಿತು ಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಬನ್ ಕ್ರೆಡಿಟ್ ರೈತರಿಗೆ ಪರ್ಯಾಯ ಲಾಭ ತಂದು ಕೊಡಲಿದೆ. ಜಮೀನಿನಲ್ಲಿರುವ ಗಿಡ, ಮರಗಳಿಂದ, ಅಡಿಕೆ, ತೆಂಗಿನ ತೋಟಗಳಿಂದ ಹೆಚ್ಚಿನ ಲಾಭವನ್ನು ರೈತರಿಗೆ ಕಾರ್ಬನ್ ಕ್ರೆಡಿಟ್ ತಂದು ಕೊಡಲಿದೆ ಎಂದು ಅವರು ತಿಳಿಸಿದರು.
ಶೇಂಗಾ, ಭತ್ತ, ಕಬ್ಬು, ರಾಗಿ ಸೇರಿದಂತೆ ಯಾವುದೇ ಬೆಳೆ ಜಮೀನಿನಲ್ಲಿರಲಿ, ಚಿಂತೆ ಬೇಡ. ಆ ಎಲ್ಲ ಬೆಳೆಗಳು ರೈತರಿಗೆ ಕಾರ್ಬನ್ ಕ್ರೆಡಿಟ್ ಹೆಸರಿನಲ್ಲಿ ಲಾಭ ತರಲಿದೆ. ಹಾಗಾಗಿ ರೈತರು ಯಾವುದೇ ಕಾರಣಕ್ಕೂ ಜಮೀನಿನಲ್ಲಿರುವ ಗಿಡ, ಮರಗಳನ್ನು ಕಡಿಯಬಾರದು ಎಂದು ಅವರು ಸೂಚನೆ ನೀಡಿದರು.
ಜಮೀನು ಹೊಂದಿರುವಂತ ರೈತರು ಯಾವುದೇ ಶುಲ್ಕವಿಲ್ಲದೆ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳಗಾರರ ಸಂಘದ ನೇತೃತ್ವದಲ್ಲಿ ನೊಂದಣಿ ಮಾಡಿಕೊಳ್ಳಬೇಕು. ನೊಂದಣಿ ಸಂದರ್ಭದಲ್ಲಿ ರೈತರ ಜಮೀನಿನ ಪಹಣಿ(ಆರ್ ಟಿಸಿ), ಜಮೀನು ಹೊಂದಿರುವ ರೈತರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಮಾತ್ರ ಒದಗಿಸಿ ನೊಂದಣಿ ಮಾಡಿಕೊಳ್ಳಬೇಕು. ಇಲ್ಲಿ ಯಾವುದೇ ಮಧ್ಯವರ್ತಿಗಳ ಅಗತ್ಯ ಇರುವುದಿಲ್ಲ. ಇದಕ್ಕಾಗಿ ಒಂದೇ ಒಂದು ರೂಪಾಯಿಯನ್ನು ಯಾರು ಕೊಡಕೂಡದು ಉಚಿತವಾಗಿ ನೊಂದಣಿ ಮಾಡಿಕೊಳ್ಳಬೇಕು ಎಂದು ಅಮರನಾರಾಯಣ ಅವರು ರೈತರಿಗೆ ಕರೆ ನೀಡಿದರು.
ಕಾರ್ಬನ್ ಕ್ರೆಡಿಟ್ ಎನ್ನುವುದು ಹೋಲ್ಡಿಂಗ್ ಕಂಪನಿಗೆ ನಿರ್ದಿಷ್ಟ ಪ್ರಮಾಣದ ಇಂಗಾಲದ ಡೈಆಕ್ಸೈಡ್ ಅಥವಾ ಇತರ ಹಸಿರುಮನೆ ಅನಿಲಗಳನ್ನು ಬಿಡುಗಡೆ ಮಾಡಲು ಅನುಮತಿಸುವ ಅನುಮತಿಯಾಗಿದೆ. ಒಂದು ಲೋಡ್ ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡಲು ಒಂದು ಟನ್‌ಗೆ ಸಮನಾದ ದ್ರವ್ಯರಾಶಿಯ ಅಗತ್ಯವಿದೆ. ಹೀಗೆ ಜಮೀನಿನಲ್ಲಿ ಶೇಖರಣೆ ಆಗುವ ಕಾರ್ಬನ್ ಕ್ರೆಡಿಟ್ ಅನ್ನು ಸಂಬಂಧಿಸಿದ ಸಂಸ್ಥೆ ವೈಜ್ಞಾನಿಕವಾಗಿ ಅಳತೆ ಮಾಡಲಿದೆ. ಇದರಿಂದ ರೈತರಿಗೆ ಹೆಚ್ಚಿನ ಲಾಭಗಳಿಸಲು ಅವಕಾಶವಿದೆ ಎಂದು ಅವರು ಹೇಳಿದರು.
ರೈತರು ಯಾವುದೇ ಕಾರಣಕ್ಕೂ ತಮ್ಮ ಜಮೀನಿನಲ್ಲಿರುವ ಭತ್ತ, ಕಬ್ಬು, ತರಗೆಲೆ ಇತ್ಯಾದಿ ಕೃಷಿ ತ್ಯಾಜ್ಯವನ್ನು ಸುಡಬಾರದು. ಅಲ್ಲದೆ ಜಮೀನಿನಲ್ಲೇ ಹೂಳುವ ವ್ಯವಸ್ಥೆ ಮಾಡಬೇಕು. ಇದು ಭೂಸಾರ ಹೆಚ್ಚಿಸಲಿದೆ. ಆಗ ಕಾರ್ಬನ್ ಕ್ರೆಡಿಟ್ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಒಳಗೆ ಸಂಗ್ರಹವಾಗಲಿದೆ. ಇದು ರೈತರಿಗೆ ಒಂದು ರೂಪಾಯಿ ಖರ್ಚಿಲ್ಲದೆ ಹೆಚ್ಚಿನ ಆದಾಯ ಗಳಿಸಲು ಅನುಕೂಲವಾಗಲಿದೆ ಎಂದು ಅಮರನಾರಾಯಣ ಅವರು ಹೇಳಿದರು.
ಭಾರತ ದೇಶ ಸೇರಿದಂತೆ ವಿಶ್ವದ ಲಕ್ಷಾಂತರ ಕೈಗಾರಿಕೋದ್ಯಮಿಗಳು, ಶ್ರೀಮಂತರು ರೈತರ ಕಾಲಿಗೆ ಬಿದ್ದು ಕಾರ್ಬನ್ ಕ್ರೆಡಿಟ್ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಮಾಡಿದ ರೈತರಿಗೆ, ಯಾವುದೇ ರೀತಿಯ ಗಿಡ ಮರ ಬೆಳೆಸಿರುವಂತ ರೈತರಿಗೆ ಸುವರ್ಣ ಕಾಲ ಬಂದಿದೆ. ಜಮೀನಿನಲ್ಲಿರುವ ಇಂಗಾಲ ಆಮ್ಲ ಅಳತೆ ಮಾಡಿ ರೈತರಿಗೆ ಹಣ ನೀಡಲಿವೆ ಎಂದು ಸಂಘದ ಗೌರವ ಅಧ್ಯಕ್ಷ ಅಮರನಾರಾಯಣ ತಿಳಿಸಿದರು.
ನಿವೃತ್ತ ಕೃಷಿ ಅಧಿಕಾರಿ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಉಪಾಧ್ಯಕ್ಷ ವೀರಭದ್ರರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಣ್ಣಿನ ಫಲವತ್ತತೆ ಕ್ಷೀಣವಾಗುತ್ತಿದೆ. ಹವಾಮಾನ ಬದಾಲವಣೆಯಿಂದ ಉಷ್ಣಾಂಶ ಏರಿಕೆಯಾಗಿ ಪೋಷಕಾಂಶಗಳ ಕೊರತೆ ಕಂಡು ಹಲವು ರೀತಿಯ ದುಷ್ಪರಿಣಾಗಳು ಬೀರುತ್ತಿವೆ. ಇದನ್ನು ಕಡಿಮೆ ಮಾಡಬೇಕಾದರೆ ಇಂಗಾಲದ ಡೈಆಕ್ಸೈಡ್ ಕಡಿಮೆ ಮಾಡಬೇಕಾಗಿದೆ ಎಂದು ತಿಳಿಸಿದರು.
ವಿಫಲ ಕೊಳವೆ ಬಾವಿಗಳಿಂದಲೂ ನಿರ್ದಿಷ್ಟ ಪ್ರಮಾಣದ ಕಾರ್ಬನ್ ಡೈಆಕ್ಸೈಡ್ ಅಥವಾ ಇತರ ಹಸಿರುಮನೆ ಅನಿಲಗಳನ್ನು ಹೊರಸೂಸುತ್ತವೆ. ಕಾರ್ಬನ್ ಕ್ರೆಡಿಟ್ ಒಂದು ಟನ್ ಇಂಗಾಲದ ಡೈಆಕ್ಸೈಡ್ ಅಥವಾ ಇತರ ಹಸಿರುಮನೆ ಅನಿಲಗಳಿಗೆ ಸಮಾನವಾದ ಹೊರಸೂಸುವಿಕೆ ಹೊಂದಿದೆ. ಕಾರ್ಬನ್ ಕ್ರೆಡಿಟ್‌ಗಳನ್ನು ಕಾರ್ಬನ್ ಅನುಮತಿಗಳು ಎಂದೂ ಕರೆಯಲಾಗುತ್ತದೆ ಎಂದು ಅವರು ತಿಳಿಸಿದರು.
ಕೈಗಾರಿಕೆಗಳು ಹೊರಸೂಸುವಿಕೆ ಮಿತಿಗಳನ್ನು ಮೀರಿದರೆ, ಅವರು ಕಾರ್ಬನ್ ಕ್ರೆಡಿಟ್‌ಗಳನ್ನು ಖರೀದಿಸಬೇಕಾಗುತ್ತದೆ. ಕಂಪನಿಯು ಹಲವಾರು ಕ್ರೆಡಿಟ್‌ಗಳನ್ನು ಖರೀದಿಸಿದರೆ, ಅದು ಕಾರ್ಬನ್ ವಿನಿಮಯ ಅಥವಾ ಮಾರುಕಟ್ಟೆ ಸ್ಥಳದಲ್ಲಿ ಹೆಚ್ಚುವರಿ ಮಾರಾಟ ಮಾಡಬಹುದು. ಈ ವ್ಯವಸ್ಥೆಯನ್ನು ಸಾಮಾನ್ಯವಾಗಿ ಕ್ಯಾಪ್-ಅಂಡ್-ಟ್ರೇಡ್ ಪ್ರೋಗ್ರಾಂ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.
ಹವಾಮಾನ ಮತ್ತು ಶಕ್ತಿ ಪರಿಹಾರಗಳ ಕೇಂದ್ರದ ಪ್ರಕಾರ, ಹಸಿರುಮನೆ ಅನಿಲಗಳನ್ನು ಕಡಿಮೆ ಮಾಡಲು ಮಾರುಕಟ್ಟೆ ಆಧಾರಿತ ವಿಧಾನಗಳನ್ನು ಅಳವಡಿಸಿಕೊಂಡಿವೆ. ದೊಡ್ಡ ವಿದ್ಯುತ್ ಸ್ಥಾವರಗಳು, ಕೈಗಾರಿಕಾ ಸ್ಥಾವರಗಳು ಮತ್ತು ಇಂಧನ ವಿತರಕರಿಗೆ ಅನ್ವಯಿಸುತ್ತವೆ ಎಂದು ಅವರು ತಿಳಿಸಿದರು.
ರೈತರು ಬೆಳೆಯುವಂತ ಯಾವುದೇ ಕೃಷಿ ತ್ಯಾಜ್ಯವನ್ನು ಭೂಮಿಯೊಳಗೆ ಹೋಗುವಂತೆ ಮಾಡಬೇಕು. ಭೂಮಿಗೆ ರಾಸಾಯನಿಕ ಬಳಕೆ ಸ್ಥಗಿತ ಮಾಡಬೇಕು. ಭೂಮಿಗೆ ಇಂಗಾಲವನ್ನು ಸೇರಿಸುವ ಕೆಲಸ ಮಾಡಬೇಕು. ಈ ರೀತಿ ಮಾಡಿದರೆ ಚಿತ್ರದುರ್ಗ ಜಿಲ್ಲೆ ಸೇರಿದಂತೆ ಇಡೀ ರಾಜ್ಯವೇ ಹೆಚ್ಚಿನ ಕಾರ್ಬನ್ ಕ್ರೆಡಿಟ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದುತ್ತದೆ ಅಲ್ಲದೆ ರೈತರಿಗೆ ಹೆಚ್ಚಿನ ಆದಾಯ ತರಲಿದೆ ಎಂದು ತಿಳಿಸಿದರು.
ಪಿಟ್ಲಾಲಿ ಬಿ.ರಾಮಣ್ಣ ಕಾರ್ಯಕ್ರಮ ಉದ್ಘಾಟಿಸಿದರು.
ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಉಪಾಧ್ಯಕ್ಷ ಶರಣಪ್ಪ, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಯಲ್ಲದಕೆರೆ ರವಿಕುಮಾರ್, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ದಿನೇಶ್, ಮಂಡೇರ ಹೆಚ್.ಸತೀಶ್ ಕುಮಾರ್, ಡಾ.ಸಿ.ತಿಪ್ಪೇಸ್ವಾಮಿ, ಆರಿಗ್ರಾಫ್ ಸಂಸ್ಥೆ ಮುಖ್ಯಸ್ಥ ವೈ.ಕೆ.ಸತ್ಯನಾರಾಯಣ, ಶ್ರೀಪಾದ ಆಚಾರ್ಯ, ಪ್ರಗತಿಪರ ರೈತ ಹರಿಯಬ್ಬೆ ಬಿ.ಎಸ್.ರಘುನಾಥ್, ರಮೇಶ್ ಸೇರಿದಂತೆ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ ತಾಲೂಕುಗಳಿಂದ ಆಗಮಿಸಿದ್ದ ಶ್ರೀಗಂಧ ಬೆಳೆಗಾರ ರೈತರು ಹಾಜರಿದ್ದರು.