ಶ್ರೀಗಂಧ ಮರಗಳ ಕಳ್ಳತನ ಪತ್ತೆಗೆ ಎಸ್ಐಟಿ ರಚನೆ ಮಾಡಲಿ-ಅಮರನಾರಾಯಣ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶ್ರೀಗಂಧ ಮರಗಳ ಕಳ್ಳತನ ಪತ್ತೆಗೆ ರಾಜ್ಯ ಸರ್ಕಾರ ಕೂಡಲೇ ಎಸ್ಐಟಿ ರಚನೆ ಮಾಡಬೇಕು ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಗೌರವ ಅಧ್ಯಕ್ಷರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಒತ್ತಾಯಿಸಿದರು.

ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಕರೆದಿದ್ದ ಶ್ರೀಗಂಧ ಬೆಳೆಗಾರರ ಸಮಸ್ಯೆಗಳ ಕುರಿತ ಸಭೆಯಲ್ಲಿ ಅವರು ಎಸ್ಪಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ರೈತರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಗಂಧ ಬೆಳೆಯುತ್ತಿದ್ದಾರೆ. ಸದ್ಯದ ಶ್ರೀಗಂಧ ನೀತಿಯಿಂದಾಗಿ ಸಾಕಷ್ಟು ರೈತರಿಗೆ ಅನ್ಯಾಯವಾಗುತ್ತಿದೆ. ಈ ನೀತಿಯಲ್ಲಿ ಅನೇಕ ಲೋಪದೋಷಗಳಿವೆ. ಶ್ರೀಗಂಧವನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿ ಮತ್ತು ಮಾರಾಟ ಮಾಡುವಂತ ಕಾನೂನು ಜಾರಿಗೆ ತರಬೇಕು.

ಆದರೆ ಶ್ರೀಗಂಧ ಬೆಳೆಯುವಂತ ರೈತರಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲವಾಗಿದೆ. ಶ್ರೀಗಂಧ ಮರಗಳನ್ನು ಕಳವು ಮಾಡುತ್ತಿರುವ ತಂಡಗಳ ಮೇಲೆ ಪೊಲೀಸರು ನಿಗಾ ವಹಿಸಬೇಕು. ಕೇವಲ ಕಳವು ಪತ್ತೆ ಮಾಡಿದರೆ ಸಾಲದು, ಕಳವು ಮಾಲನ್ನು ಖರೀದಿಸುವಂತ ಖರೀದಿದಾರರ ವಿರುದ್ಧ ಅರಣ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು.

ಅಲ್ಲದೆ ಅರಣ್ಯ, ಪೊಲೀಸ್ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ಮಾಡಿ ಶ್ರೀಗಂಧ ಮರಗಳ ಕಳ್ಳತನಕ್ಕೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಅವರು ಮನವಿ ಮಾಡಿದರು.

ಶ್ರೀಗಂಧ ಖರೀದಿ ಮತ್ತು ಮಾರಾಟದಲ್ಲಿ ದೊಡ್ಡ ಮಾಫಿಯಾ ಕೆಲಸ ಮಾಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಅಸಹಕಾರದಿಂದಾಗಿ ಸಾಕಷ್ಟು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಶ್ರೀಗಂಧದ ಮೇಲಿರುವ ನಿರ್ಬಂಧಗಳನ್ನು ಸರ್ಕಾರ ತೆಗೆಯಬೇಕು. ಸೂಕ್ತ ಮಾರುಕಟ್ಟೆ ದರ ನಿಗದಿ ಮಾಡಬೇಕು ಎಂದು ಅವರು ಮನವಿ ಮಾಡಿದರು.

ನಮ್ಮಲ್ಲಿ ಪರಿಶುದ್ಧವಾದ ಶ್ರೇಷ್ಠ ಶ್ರೀಗಂಧ ದೊರೆಯುತ್ತಿದೆ. ಇಂತಹ ಶ್ರೀಗಂಧ ಶುದ್ಧ ಪರಿಸರ ಹರಡುತ್ತದೆ, ಅಷ್ಟೇ ಅಲ್ಲ ರಾಜ್ಯದ ಹೆಗ್ಗುರುತು ಶ್ರೀಗಂಧ. ಹಾಗೆಯೇ ಹಿಂದೂ ಸಂಪ್ರದಾಯದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳ ಆಚರಣೆಯಲ್ಲಿ ನಿತ್ಯ ಬಳಸುವ ವಸ್ತುವಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಶ್ರೀಗಂಧದ ಮರ ಬೆಳೆಸಬೇಕು.

ಜೊತೆಯಲ್ಲಿ ಪೊಲೀಸರು ಶ್ರೀಗಂಧ ಬೆಳೆಗಾರರಿಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಗನ್ ಪರವಾನಗಿ ನೀಡಬೇಕು, ಜಿಲ್ಲಾ ಮಟ್ಟದಲ್ಲಿ ವಿಶೇಷ ಪೊಲೀಸ್ ತಂಡ ರಚನೆ ಮಾಡುವಂತೆ ಅವರು ಎಸ್ಪಿ ಅವರಲ್ಲಿ ಮನವಿ ಮಾಡಿದರು.

 ಶ್ರೀಗಂಧಕ್ಕೆ ಮತ್ತು ಕರ್ನಾಟಕಕ್ಕೆ ಅವಿನಭಾವ ಸಂಬಂಧವಿದ್ದು, ನಮ್ಮ ನಾಡನ್ನು ಶ್ರೀಗಂಧದ ಬಿಡು ಎನ್ನುತ್ತಾರೆ. ಶ್ರೀಗಂಧದ ಮರಗಳನ್ನು ಬೆಳೆಸುವಲ್ಲಿ ಕಾನೂನಾತ್ಮಕ ಸಮಸ್ಯೆಗಳಿದ್ದು ಸರ್ಕಾರದ ಮಟ್ಟದಲ್ಲಿ ಕೆಲವು ಸಲಹೆ ಸೂಚನೆಗಳನ್ನು ನೀಡಲಾಗಿದ್ದು ಅದರ ಮೇರೆಗೆ ನಿಯಮಗಳನ್ನು ಬದಲಿಸಿ, ಅರಣ್ಯ ಇಲಾಖೆಯಿಂದ ತೋಟಗಾರಿಕೆ ಇಲಾಖೆಗೆ ಬದಲಾಯಿಸಲು ಸರ್ಕಾರ ಮುಂದಾಗಿರುವುದು ಪ್ರಶಂಸನೀಯ ಎಂದು ತಿಳಿಸಿದರು.

ಜಾಗತಿಕ ತಾಪಮಾನ ಏರುತ್ತಿದ್ದು ಪರಿಸರದಲ್ಲಿ ಬಿಸಿಲಿನ ತಾಪಮಾನ ಸರಿದೂಗಿಸಲು ಶ್ರೀಗಂಧ ಮರ ಬೆಳೆಸುವಲ್ಲಿ ರೈತರು ಕೈ ಜೊಡಿಸಬೇಕು ಎಂದು ತಿಳಿಸಿದರು.

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಉಪಾಧ್ಯಕ್ಷರು ಹಾಗೂ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಶರಣಪ್ಪ ಮಾತನಾಡಿ, ಶ್ರೀಗಂಧ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಶ್ರೀಗಂಧ ಮರಗಳನ್ನು ಸ್ಥಳೀಯವಾಗಿ ರೈತ ಉಪಕಸುಬಾಗಿ ಪರಿಗಣಿಸಿ ಬೆಳೆಯುವುದರಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ.

ಮಾರುಕಟ್ಟೆಯಲ್ಲಿ ಶ್ರೀಗಂಧವನ್ನು ವಿವಿಧ ಔಷಧಗಳು ಮತ್ತು ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆದರೆ ರಕ್ಷಣೆಯೇ ರೈತರಿಗೆ ದೊಡ್ಡ ಸವಾಲ್ ಆಗಿದೆ. ಶ್ರೀಗಂಧ ಮರಗಳ ಕಳ್ಳತನ ಆದ ಕೂಡಲೇ 112 ಗೆ ರೈತರು ಕರೆ ಮಾಡಬೇಕು. ಜೊತೆಯಲ್ಲಿ ಸ್ವಯಂ ರಕ್ಷಣೆಗೆ ಗನ್ ಲೈಸನ್ಸ್ ಪಡೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.

ಶ್ರೀಗಂಧ ಸೇರಿದಂತೆ ಮತ್ತಿತರ ರೈತ ಉತ್ಪನ್ನಗಳ ಮೇಲೆ ನಡೆದಿರುವ ಸಂಶೋಧನೆಗಳ ಉಪಯೋಗ ಸಾಮಾನ್ಯ ರೈತರಿಗೆ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಸ್ಥಳೀಯರ ಮಾಹಿತಿಯಿಂದ ಹೆಚ್ಚು ಶ್ರೀಗಂಧ ಮರಗಳ ಕಳ್ಳತನ ಆಗುತ್ತಿವೆ. ಶ್ರೀಗಂಧ ಕಳ್ಳತನ ಕೃತ್ಯ ಬೆಳಕಿಗೆ ಬಂದ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ರೈತರಿಗೆ ಯಾವ ವ್ಯಕ್ತಿಗಳ ಮೇಲೆ ಅನುಮಾನ ಇದೆಯೋ ಅಂತಹ ವ್ಯಕ್ತಿಗಳ ಮಾಹಿತಿಯನ್ನು ಪೊಲೀಸರಿಗೆ ನೀಡಿದರೆ ಪೊಲೀಸರು ಕಳ್ಳರನ್ನು ಸುಲಭವಾಗಿ ಪತ್ತೆ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಶ್ರೀಗಂಧ ಬೆಳೆಗಾರರ ಸಮಸ್ಯೆಗಳನ್ನು ಆಲಿಸಿ ನಂತರ ಮಾತನಾಡಿ, ಪೊಲೀಸ್ ಇಲಾಖೆ ರೈತರಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಗನ್ ಲೈಸನ್ಸ್ ನೀಡುವುದು ಸೇರಿದಂತೆ ಕಳ್ಳತನ ಕೃತ್ಯಗಳು ಬೆಳಕಿಗೆ ಬಂದ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ. ಪೊಲೀಸರು ಎಫ್ಐಆರ್ ದಾಖಲು ಮಾಡದಿದ್ದಲ್ಲಿ ಯಾವ ಠಾಣೆ ಎಂದು ಒಂದು ವಾಟ್ಸ್ ಅಪ್ ನಲ್ಲಿ ಮಾಹಿತಿ ಹಾಕುವಂತೆ ರೈತರಿಗೆ ಸೂಚನೆ ನೀಡಿದರು.

ಶ್ರೀಗಂಧ ಮರಗಳ ಕಳ್ಳತನ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜಿಲ್ಲಾ ಮಟ್ಟದಲ್ಲಿ ವಿಶೇಷ ತಂಡ ರಚನೆ ಮಾಡಲಾಗುತ್ತದೆ. ರೈತರು ಕೋರಿಕೆಯಂತೆ ಎಸ್ಐಟಿ ರಚನೆ ಮಾಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಪೊಲೀಸ್ ಇಲಾಖೆ ಜೊತೆಗೆ ಶ್ರೀಗಂಧ ಬೆಳೆಗಾರ ರೈತರು ಒಂದೊಂದು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು. ಕೇವಲ ಜಮೀನಿಗೆ ಸಿಸಿ ಕ್ಯಾಮೆರಾ ಅಳವಡಿಸಿದರೆ ಸಾಲದು ಶ್ರೀಗಂಧ ತೋಟಗಳಿಗೆ ಹೋಗುವಂತ ಮಾರ್ಗಗಳ ಮನೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಬೇಕು. ಶ್ರೀಗಂಧ ತೋಟಗಳಿಗೆ ಕಾವಲು ಕಾಯಲು ಏಳೆಂಟು ರೈತರು ಸೇರಿಕೊಂಡು ಒಬ್ಬೊಬ್ಬ ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಕ ಮಾಡಿಕೊಂಡರೆ ಉತ್ತಮ ಎಂದು ಎಸ್ಪಿ ಸಲಹೆ ನೀಡಿದರು.

ಶ್ರೀಗಂಧ ಬೆಳೆಗಾರರು ಕಳ್ಳತನ ನಡೆದ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಯಾವ ಠಾಣೆಯಲ್ಲಿ ದೂರು ದಾಖಲು ಮಾಡಲು ಹಿಂದೇಟು ಹಾಕಿದರೆ ನನಗೆ ಮಾಹಿತಿ ನೀಡಬೇಕು. ಶ್ರೀಗಂಧ ಖರೀದಿ ಮಾಡುವವರ ಮಾಹಿತಿ ಇದ್ದರೂ ನನ್ನ ಗಮನಕ್ಕೆ ತರುವಂತೆ ರೈತರಿಗೆ ಸೂಚನೆ ನೀಡಿದರು.

ಶ್ರೀಗಂಧ ಬೆಳೆಗಾರರು ತಮ್ಮ ಜಮೀನುಗಳಲ್ಲಿ ಚುರುಕಾದ ನಾಯಿಗಳನ್ನು ಸಾಕಾಣಿಕೆ ಮಾಡಬೇಕು. ಕಳ್ಳತನ ಪತ್ತೆಗಾಗಿ ಆಧುನಿಕ ತಂತ್ರಜ್ಞಾನಗಳನ್ನು ತಮ್ಮ ಜಮೀನುಗಳಲ್ಲಿ ಅಳವಡಿಕೆ ಮಾಡಿಕೊಳ್ಳುವಂತೆ ಎಸ್ಪಿ ಬಂಡಾರು ಕರೆ ನೀಡಿದರು.

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಯಲ್ಲದಕೆರೆ ರವಿಕುಮಾರ್, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ದಿನೇಶ್, ಮಂಡೇರ ಹೆಚ್.ಸತೀಶ್ ಕುಮಾರ್, ಪಿಟ್ಲಾಲಿ ಬಿ.ರಾಮಣ್ಣ ಸೇರಿದಂತೆ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ ತಾಲೂಕುಗಳಿಂದ ಆಗಮಿಸಿದ್ದ ಶ್ರೀಗಂಧ ಬೆಳೆಗಾರ ರೈತರು ಹಾಜರಿದ್ದರು.

 

- Advertisement -  - Advertisement - 
Share This Article
error: Content is protected !!
";