ಶಾಂತಿಯುತವಾಗಿ ನಡೆದ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರಿನ ಚುನಾವಣೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಾದ ಚನ್ನಪಟ್ಟಣ
, ಶಿಗ್ಗಾಂವಿ, ಸಂಡೂರಿನ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಮತದಾನ ಅತ್ಯಂತ ಚುರುಕಿನಿಂದ ನಡೆಯಿತು.

ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಪೈಪೋಟಿಗೆ ಕಾರಣವಾದ ಮೂರು ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಚುರುಕು ಪಡೆದುಕೊಂಡಿತು. ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಮತ ಚಲಾಯಿಸಿದರು. ಜೊತೆಗೆ ಬೆಳಗ್ಗೆಯಿಂದಲೇ ಯುವ ಮತದಾರರು ಮತ್ತು ವಯೋವೃದ್ಧರು ಮತಗಟ್ಟೆಗೆ ಬಂದು ಸರತಿ ಸಾಲಿನಲ್ಲಿ ನಿಂತು ಶಾಂತಿಯುತವಾಗಿ ಮತದಾನ ಮಾಡಿದರು.

ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತದಾನಕ್ಕೂ ಮುನ್ನ ಕ್ಷೇತ್ರದ ಶ್ರೀಕೆಂಗಲ್ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಚನ್ನಪಟ್ಟಣದ ತಾಲೂಕಿನ ಚಕ್ಕೆರೆ ಮತಗಟ್ಟೆ 167ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರು ಕುಟುಂಬ ಸಮೇತರಾಗಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಬಳಿಕ ಮಾತನಾಡಿದ ಸಿಪಿ ಯೋಗೇಶ್ವರ್ ಅವರು, ”ಈ ಚುನಾವಣೆಯಲ್ಲಿ ಕ್ಷೇತ್ರದ ಜನರು ನನ್ನ ಕೈಹಿಡಿಯುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.

ಶಿಗ್ಗಾಂವಿ-ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮತದಾನ ಮಾಡಿದರು. ಮತದಾನಕ್ಕೆ ತೆರಳುವ ಮುನ್ನ ಹುಬ್ಬಳ್ಳಿಯ ಅಶೋಕ ನಗರದ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಶಿಗ್ಗಾಂವಿ ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಶಿಗ್ಗಾವಿ ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂಬರ್ 1ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭರತ್ ಬೊಮ್ಮಾಯಿ ಬಹಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಕುಟುಂಬ ಸಮೇತರಾಗಿ ಸಂಡೂರು ಪಟ್ಟಣದ 67ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ನಂತರ ಮಾತನಾಡಿದ ಅವರು, ನಾನು‌ಮೊದಲ ಬಾರಿ ಅಭ್ಯರ್ಥಿಯಾಗಿ ಮತದಾನ ಮಾಡಿದ್ದು ಖುಷಿ ನೀಡಿತು. ಎಲ್ಲೆಡೆ ಮತದಾನ ಚೆನ್ನಾಗಿ ನಡೆಯುತ್ತಿದೆ.

ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದೇನೆ. ಇದೊಂದು ಹೊಸ ಅನುಭವ. ಮುಕ್ತ, ಶಾಂತಿಯುತ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು. ಹಾಗೆಯೇ ಎಲ್ಲರೂ ತಮ್ಮ ಮತ ಹಕ್ಕು ಚಲಾಯಿಸಬೇಕು. ಸಂವಿಧಾನದ ಆಶಯದಂತೆ ಮತದಾನ ಮಾಡಿ” ಎಂದು ಮನವಿ ಮಾಡಿದರು.

ಸಂಸದ ತುಕಾರಾಂ ಮಾತನಾಡಿ, ನಾವು ಕುಟುಂಬ ಸಮೇತರಾಗಿ ಮತದಾನ ಮಾಡಿದ್ದು ತುಂಬಾ ಖುಷಿಯಾಗಿದೆ. ಸಂವಿಧಾನದ ಆಶಯದಂತೆ ಎಲ್ಲರೂ ‌ಮತದಾನ ಮಾಡಬೇಕು. ಇದು ನನ್ನ 6ನೇ ಚುನಾವಣೆಯಾಗಿದೆ. ಸಂವಿಧಾನ ‌ವ್ಯವಸ್ಥೆಯಲ್ಲಿ‌ಯಾರೂ ಮತದಾನದಿಂದ ಹೊರಗುಳಿಯಬಾರದು ಎಂದು ಹೇಳಿದರು.

 

- Advertisement -  - Advertisement - 
Share This Article
error: Content is protected !!
";