ಚಂದ್ರವಳ್ಳಿ ನ್ಯೂಸ್, ಸಿರಿಗೆರೆ:
ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಭತ್ತದ ಬೆಳೆಯಲ್ಲಿ ಕಡಿಮೆ ನೀರು ಬಳಸಿ ಉತ್ತಮ ಇಳುವರಿ ಪಡೆಯುವ ತಂತ್ರಜ್ಞಾನವನ್ನು ಶಾಂತಿವನದ ಸಿರಿಗೆರೆಯ ಜಮೀನಿನಲ್ಲಿ ಮಾಡಿ ತೊರಿಸಲಾಗಿದೆ.
ಭತ್ತವು ಭಾರತದ ಪ್ರಮುಖವಾದ ಆಹಾರ ಬೆಳೆಯಾಗಿದ್ದು ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಭತ್ತದ ಇಳುವರಿಯನ್ನು ಹೆಚ್ಚಿಸುವ ಭರದಲ್ಲಿ ಅತಿಯಾದ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಾಗುತ್ತಿದ್ದು, ಇದರಿಂದ ಉತ್ಪಾದನಾ ವೆಚ್ಚವು ಹೆಚ್ಚಾಗಿ ಭತ್ತದ ಕೃಷಿ ಲಾಭದಾಯಕವಲ್ಲ ಎನಿಸಿಕೊಂಡಿದೆ.
ದಿನನಿತ್ಯವು ನಾವು ಬಳಸುವ ಅಕ್ಕಿಯಲ್ಲಿ ವಿಷಕಾರಿ ಅಂಶಗಳಾದ ಅರ್ಸೆನಿಕ್ ಮತ್ತು ಕ್ಯಾಡ್ಮಿಯಂ ಅಂತಹವುಗಳು ಸೇರಿಕೊಂಡ ಬಗ್ಗೆ ಸಂಶೋಧನಾ ವರದಿಗಳು ತಿಳಿಸಿವೆ. ಇದನ್ನೆಲ್ಲಾ ಮನಗಂಡು ಶ್ರೀ ತರಳಬಾಳು ಜಗದ್ಗುರು ರವರ ಮಾರ್ಗದರ್ಶನದಂತೆ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆಯ, ವಿಜ್ಞಾನಿಗಳ ತಂಡ 3 ವಿವಿಧ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳನ್ನು ಭತ್ತದ ಬೇಸಾಯದಲ್ಲಿ ಕೈಗೊಂಡಿದ್ದು, ಭತ್ತದ ಪ್ರಮುಖ ತಳಿಗಳಾದ ಆರ್.ಎನ್.ಆರ್.-15048, ಎಂ.ಟಿ.ಯು.-1010 ಮತ್ತು ಆರ್. ಎನ್. ಆರ್.-31479 ಇವುಗಳನ್ನು ಈ ಪ್ರಾತ್ಯಕ್ಷಿಕೆಯಲ್ಲಿ ಬೆಳೆದಿರುತ್ತಾರೆ.
1.ನೇರ ಕೂರಿಗೆ ಭತ್ತ ಬಿತ್ತನೆ ತಂತ್ರಜ್ಞಾನವನ್ನು ಮಳೆಯಾಶ್ರಿತ ಪ್ರದೇಶವಾದ ಜಗಳೂರು ತಾಲೂಕಿನಲ್ಲಿ ಮೇದಗಿನಕೆರೆ, ಗುತ್ತಿದುರ್ಗ, ಬಿಸ್ತುವಳ್ಳಿ ಮತ್ತು ದಾವಣಗೆರೆ ತಾಲೂಕಿನ ಹಾಲುವರ್ತಿ ಈ ಎಲ್ಲಾ ಗ್ರಾಮಗಳಲ್ಲಿ ಒಟ್ಟು ನಾಲ್ಕು ಎಕರೆ ಪ್ರದೇಶದಲ್ಲಿ ಪ್ರಾತ್ಯಕ್ಷಿಕೆಯನ್ನು ಕೈಗೊಂಡಿರುತ್ತಾರೆ.
2.ನೇರಕೂರಿಗೆ ಭತ್ತ ಬಿತ್ತನೆ ತಂತ್ರಜ್ಞಾನವನ್ನು ಭದ್ರಾ ಅಚ್ಚುಕಟ್ಟು ಪ್ರದೇಶದ ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದಲ್ಲಿ 6 ಎಕರೆ ಪ್ರದೇಶದಲ್ಲಿ ಈ ಪದ್ಧತಿಯನ್ನು ಮಾಡಿರುತ್ತಾರೆ.
3.ಭತ್ತದಲ್ಲಿ ಪರ್ಯಾಯ “ಹಸಿ ಮತ್ತು ಒಣಗಿಸುವ” ಪದ್ಧತಿಯನ್ನು ಭದ್ರಾ ಅಚ್ಚುಕಟ್ಟು ಪ್ರದೇಶದ ದಾವಣಗೆರೆ ತಾಲೂಕಿನ ಬೆಳವನೂರು, ಹಳೆಬಾತಿ ಹಾಗೂ ಚನ್ನಗಿರಿ ತಾಲೂಕಿನ ಕಾರಿಗನೂರು ಈ ಎಲ್ಲಾ ಗ್ರಾಮಗಳಲ್ಲಿ ಒಟ್ಟು 5 ಎಕರೆ ವಿಸ್ತೀರ್ಣದಲ್ಲಿ ಪ್ರಾತ್ಯಕ್ಷಿಕೆಯನ್ನು ಕೈಗೊಂಡಿದ್ದಾರೆ.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಶಿಫಾರಸ್ಸಿನಂತೆ ಭತ್ತದ ಬೆಳೆಯ ಸಮಗ್ರ ಬೆಳೆ ಉತ್ಪಾದನೆ ತಂತ್ರಜ್ಞಾನಗಳಾದ ಗುಣಮಟ್ಟದ ಬಿತ್ತನೆ ಬೀಜ, ಕಡಿಮೆ ರಸಗೊಬ್ಬರ, ಕೀಟನಾಶಕ ಹಾಗೂ ಜೈವಿಕ ನಿಯಂತ್ರಣದ ಪದ್ಧತಿಯನ್ನು, (ಭತ್ತದ ಕಾಂಡ ಕೊರಕದ ನಿರ್ವಹಣೆಗಾಗಿ ಮೋಹಕ ಬಲೆಗಳನ್ನು) ಅಳವಡಿಸಿಕೊಂಡು ಉತ್ತಮವಾದ ಹಾಗೂ ಗುಣಮಟ್ಟದ ಭತ್ತದ ಉತ್ಪಾದನೆಯಾಗಿರುತ್ತದೆ.
ವಿಜ್ಞಾನಿಗಳ ಸಲಹೆಯಂತೆ ಮಾಡುವುದರಿಂದ ಗುಣಮಟ್ಟದ ಆಹಾರ ಉತ್ಪಾದನೆ, ಮಣ್ಣಿನ ಫಲವತ್ತತೆ ಸಂರಕ್ಷಣೆ ಆಗುವುದು ಹಾಗೂ ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಮಳೆಯಾಶ್ರಿತ ಪ್ರದೇಶವಾದ ಜಗಳೂರು ತಾಲೂಕಿನಲ್ಲಿ ನೇರ ಕೂರಿಗೆ ವಿಧಾನದಲ್ಲಿ ಭತ್ತ ಬೆಳೆದ ರೈತರು ಪ್ರತಿ ಎಕರೆಗೆ 12 ರಿಂದ 14 ಕ್ವಿಂಟಲ್ ಇಳುವರಿ ಪಡೆದುಕೊಂಡಿರುತ್ತೇವೆ ಎನ್ನುತ್ತಾರೆ ಪ್ರಗತಿಪರ ಕೃಷಿಕ ಮಂಜುನಾಥರವರು.
ಅಚ್ಚು ಕಟ್ಟು ಪ್ರದೇಶದ ರೈತರ ಇಳುವರಿ ಸರಾಸರಿ 22 ರಿಂದ 25 ಕ್ವಿಂಟಲ್ ಪ್ರತಿ ಎಕರೆಗೆ ಬರುತ್ತದೆ ಎನ್ನುತ್ತಾರೆ ದೊಡ್ಡ ಬಾತಿಯ ಪ್ರಗತಿಪರ ಕೃಷಿಕ ವಾಸು ರವರು. ಪರಮಪೂಜ್ಯರ ಮಾರ್ಗದರ್ಶನದಂತೆ ಈ ವರ್ಷ ಮೇಲಿನ ಸುಧಾರಿತ ಪದ್ಧತಿಗಳನ್ನು ರೈತರು ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆದಿರುತ್ತಾರೆ. ಮುಂದಿನ ವರ್ಷ ಈ ಪದ್ಧತಿಗಳನ್ನು ಅನುಸರಿಸುವ ರೈತರ ಸಂಖ್ಯೆ ಹೆಚ್ಚಾಗಬಹುದು.
ನೇರ ಕೂರಿಗೆ ಭತ್ತ ಬಿತ್ತನೆ ಹಾಗೂ ಪರ್ಯಾಯ ಹಸಿ ಮತ್ತು ಒಣಗಿಸುವ ಪದ್ಧತಿಗಳನ್ನು ಅಳವಡಿಸಿಕೊಂಡರೆ ಶೇಕಡ 35 ರಿಂದ 40 ರಷ್ಟು ನೀರನ್ನು ಉಳಿತಾಯ ಮಾಡಬಹುದು. ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಭತ್ತ ಬೆಳೆಯುವ ವಿಸ್ತೀರ್ಣ ಸರಿಸುಮಾರು 80 ಸಾವಿರ ಹೆಕ್ಟೇರ್. ಈ ಮೇಲ್ಕಂಡ ಪದ್ಧತಿಗಳನ್ನು ಅನುಸರಿಸುವುದರಿಂದ ಭತ್ತ ಬೆಳೆಯುವ ಪ್ರದೇಶವನ್ನು ನಾವು 96 ಸಾವಿರ ಹೆಕ್ಟೇರ್ ಗೆ ಹೆಚ್ಚಿಸಿಕೊಳ್ಳಬಹುದು.
ಈ ಪದ್ಧತಿಗಳಿಂದ ಮಣ್ಣಿನ ಫಲವತ್ತತೆ, ನೀರಿನ ಉಳಿತಾಯ ಹಾಗೂ ಭತ್ತ ಬೆಳೆಯ ಉತ್ಪಾದನ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ಪ್ರಮುಖ ಆಹಾರ ಬೆಳೆಯಾದ ಭತ್ತವನ್ನು ಸುರಕ್ಷಿತ ಆಹಾರವಾಗಿ ಪಡೆಯಬಹುದಾಗಿದೆ.