ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಭಾರತ್ ಜೋಡೋ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಾರತದ ಮೊದಲಪ್ರಧಾನಿ, ನವ ಭಾರತ ನಿರ್ಮಾತೃ ‘ಭಾರತ ರತ್ನ‘ ಪಂಡಿತ್ ಶ್ರೀ ಜವಾಹರ ಲಾಲ್ ನೆಹರು ಅವರ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು.
ವೇದಿಕೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, “ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ಅವರು ಯಾವ ರೀತಿ ಈ ದೇಶಕ್ಕೆ ಒಂದು ಅಡಿಪಾಯ ಹಾಕಿ ಕೊಟ್ಟರು ಎನ್ನುವುದಕ್ಕೆ ಬೆಂಗಳೂರು ನಗರ ಹಾಗೂ ಕರ್ನಾಟಕ ರಾಜ್ಯವೇ ಒಂದು ದೊಡ್ಡ ಸಾಕ್ಷಿ.
ನಮ್ಮ ಸರ್ಕಾರವು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಸಿಎಸ್‌ಆರ್‌ನಿಧಿ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ 2000 ಶಾಲೆಗಳನ್ನು ನಿರ್ಮಿಸುವ ಯೋಜನೆ ನಮ್ಮ ಮುಂದಿದೆ ಎಂದು ಅವರು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ 2000 ಶಾಲೆಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ಐದಾರು ಸಚಿವರಿಗೆ ವಹಿಸಿದ್ದಾರೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳ ದಿನಾಚರಣೆ ಹಾಗೂ ಪಂಡಿತ್ ಶ್ರೀ ಜವಹರ ಲಾಲ್ ನೆಹರು ಅವರ ಜಯಂತಿ ಅಂಗವಾಗಿ ಗುರುವಾರ ವಿಧಾನಸೌಧದಲ್ಲಿ ಸರ್ಕಾರಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಅವರೇ ನಮ್ಮ ಆಸ್ತಿ. ನಮ್ಮಂತೆಯೇ ಅವರು ಮುಂದೆ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬೇಕು. ನಂಬಿಕೆ ಇದ್ದರೆ ಎಲ್ಲವೂ ಸಾಧ್ಯ. ಅದಕ್ಕೆ ಸರಿಯಾದ ಪ್ರಯತ್ನ ಹಾಗೂ ಪರಿಶ್ರಮವಿರಬೇಕು. ಮಕ್ಕಳ ಆಲೋಚನೆಗಳು ಹೆಚ್ಚು ದೂರದೃಷ್ಟಿಯಿಂದ ಕೂಡಿರಬೇಕು. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತಹ ಜ್ಞಾನವನ್ನು ಪಡೆಯಬೇಕು ಎಂದು ಡಿಸಿಎಂ ತಿಳಿಸಿದರು.
ವಿದ್ಯಾರ್ಥಿಗಳ ಜೀವನದಲ್ಲಿ ಯಶಸ್ಸು ಸಿಗಬೇಕಾದರೆ 4 ಡಿ ಸೂತ್ರವನ್ನು ಅಳವಡಿಸಿಕೊಳ್ಳಬೇಕು. ಮೊದಲು ಕನಸು ಕಾಣಬೇಕು, ಆ ಕನಸನ್ನು ನನಸು ಮಾಡಿಕೊಳ್ಳುವ ಆಸೆ ಇರಬೇಕು. ಅದಕ್ಕೋಸ್ಕರ ನಿರಂತರ ಕೆಲಸ ಮಾಡಬೇಕು. ಶಿಸ್ತು ಇರಬೇಕು. ಆಗ ಮಾತ್ರ ಯಶಸ್ಸು ಸಿಗುತ್ತದೆ.
ಹಾಗೆಯೇ ಮಕ್ಕಳು ಅವರ ಜೀವನ ರೂಪಿಸಿದ ತಂದೆ, ತಾಯಿ ಹಾಗೂ ಗುರುಗಳನ್ನು ಎಂದಿಗೂ ಮರೆಯಬಾರದು. ಈ ಸಂವಾದ ಕಾರ್ಯಕ್ರಮದಿಂದ ಮಕ್ಕಳ ದಿನಾಚರಣೆಯು ಹೆಚ್ಚು ಅರ್ಥಪೂರ್ಣವಾಗಿದ್ದು, ಮಕ್ಕಳ ವಿಚಾರ ವಿನಿಮಯಕ್ಕೆ ಒಂದು ಉತ್ತಮ ವೇದಿಕೆಯಾಗಿದೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.
ದೇಶದ ಮೊದಲ ಪ್ರಧಾನಿ ಪಂಡಿತ್ ಶ್ರೀ ಜವಹರಲಾಲ್ ನೆಹರು ಅವರ ಜನ್ಮ ದಿನವನ್ನ ಮಕ್ಕಳ ದಿನಾಚರಣೆಯಾಗಿ ಪ್ರತಿವರ್ಷ ಆಚರಿಸುತ್ತೇವೆ. ಆದರೆ ಈ ಬಾರಿ ಈ ದಿನವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರಿ ಶಾಲಾ ಮಕ್ಕಳೊಂದಿಗೆ ‘ಭವಿಷ್ಯದ ಕರ್ನಾಟಕಕ್ಕಾಗಿ ಸಂವಾದ‘ ನಡೆಸುತ್ತಿದ್ದೇವೆ.
ಭವಿಷ್ಯದ ಕರ್ನಾಟಕಕ್ಕೆ ಭವಿಷ್ಯದ ಪ್ರಜೆಗಳ ಸಲಹೆ, ಅವರ ದೂರದೃಷ್ಟಿ, ಅವರ ಕುಂದು- ಕೊರತೆಗಳನ್ನ ಆಲಿಸುವುದರಜೊತೆಗೆ, ಸಮೃದ್ಧ ಕರ್ನಾಟಕವನ್ನು ಯುವ ಪೀಳಿಗೆಯ ಜೊತೆಗೂಡಿ ನಿರ್ಮಿಸೋಣ ಎಂದು ಅವರು ಕರೆ ನೀಡಿದರು.