ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯೋಜಿಸಿರುವ ಪುಸ್ತಕ ಪ್ರದರ್ಶನಕ್ಕೆ ಸಾಹಿತಿ ಆನಂದ್ ಕುಮಾರ್ ಚಾಲನೆ ನೀಡಿದರು.
ನಗರದ ಶ್ರೀ ಕೃಷ್ಣ ರಾಜೇಂದ್ರ ನಗರ ಕೇಂದ್ರ ಗ್ರಂಥಾಲಯದಲ್ಲಿ ಭಾರತದ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥ್ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು.
ನಂತರ ಮಾತನಾಡಿದ ಸಾಹಿತಿ ಆನಂದ ಕುಮಾರ್, ಮುದ್ರಣ ಮಾಧ್ಯಮ ಬಂದ ಮೇಲೆ ಪುಸ್ತಕಗಳು ಜನಸಾಮಾನ್ಯರಿಗೆ ತಲುಪುವಲ್ಲಿ ಗ್ರಂಥಾಲಯದ ಪಾತ್ರ ಬಹುಮುಖ್ಯವಾಗಿದೆ. ಪುಸ್ತಕದ ಸಾಂಗತ್ಯ ಇರುವವರು ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯತ್ ನಿವೃತ್ತ ಅಧೀಕ್ಷಕ ಹನುಮಂತ್ ರಾಯ್ ಮಾತನಾಡಿ, ಪುಸ್ತಕಗಳ ಮಹತ್ವ ಮತ್ತು ಕುವೆಂಪು, ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪರಿಸರವಾದಿ ಡಾ.ಹೆಚ್ಕೆಎಸ್ ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕಷ್ಟಪಟ್ಟು ನಿರಂತರ ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳು ಸರಳತೆ ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಆಶುಭಾಷಣ ಸ್ಪರ್ಧೆ ಹಾಗೂ ಗ್ರಂಥಾಲಯದ ಮಹತ್ವ ಎಂಬ ವಿಷಯದ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಯಿತು.
ಕಾರ್ಯಕ್ರಮದಲ್ಲಿ ನಗರ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಕೊಳ್ಳಿ ಬಸವರಾಜ, ಸಹ ಗ್ರಂಥಪಾಲಕ ಮೋಹನ್ ದಾಸ್ ಸೇರಿದಂತೆ ಗ್ರಂಥಾಲಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.