ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಹಗರಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿಯೇ ಮುಳುಗಿದ್ದೀರಿ. ರಾಜ್ಯದ ರೈತರು, ಬಡವರು, ಬಿಪಿಎಲ್ ಕುಟುಂಬಗಳ ಬಗ್ಗೆ ಚಿಂತೆ ಇಲ್ಲ. ದೀನ ದಲಿತರ, ಬಡವರ, ರೈತರ ಕಣ್ಣೀರು ಹೊರೆಸುವ ಕಾರ್ಯ ಮಾಡಲಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ಆದರೆ ನೀವು ಯಾರೊಬ್ಬರ ಓಲೈಕೆ ಮಾಡಲಿಕ್ಕೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ದ ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ವಾಗ್ದಾಳಿ ನಡೆಸಿದರು.
ರಾಜ್ಯದ ರೈತರ ಕೃಷಿ ಭೂಮಿ, ಮಠ, ಮಂದಿರ, ಜನ ಸಾಮಾನ್ಯರ ಜಮೀನುಗಳನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ಅಕ್ರವಾಗಿ ಕಬಳಿಸುವ ಷಡ್ಯಂತ್ರದ ಜನವಿರೋಧಿ ನೀತಿ ವಿರುದ್ಧ ನಮ್ಮ ಭೂಮಿ ನಮ್ಮ ಹಕ್ಕು ಎಂಬ ಹಕ್ಕೊತ್ತಾಯದೊಂದಿಗೆ ನಗರದ ಡಿ.ಸಿ.ಸರ್ಕಲ್ನಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದು ಹೋರಾಟದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಬಡ ರೈತರ ಶಾಪ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ತಟ್ಟಲಿದೆ ಎಂದು ಅವರು ಎಚ್ಚರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರು ಎಲ್ಲಾ ಜಿಲ್ಲೆಗಳಿಗೆ ಹೋಗಿ ವಕ್ಫ್ ಆಸ್ತಿಯನ್ನಾಗಿ ವಶಪಡಿಸಿಕೊಳ್ಳಬೇಕೆಂದು ಅಧಿಕೃತ ಸೂಚನೆ ನೀಡಿ ಮಠ ಮಾನ್ಯಗಳ, ರೈತರ ದೇವಸ್ಥಾನದ ಆಸ್ತಿಯನ್ನು ವಕ್ಫ್ ಹೆಸರಿಗೆ ಬರುವ ಹಾಗೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಭಾರತ ನಮ್ಮ ಕರ್ನಾಟಕ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಚಿಂತೆ ಮಾಡಬೇಕು. ಈ ದೇಶವನ್ನು ಪಾಕಿಸ್ತಾನಕ್ಕೆ ಸೇರಿಸುವ ಕೆಲಸ ಮಾಡುತ್ತಿದ್ದಾರೋ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ರೈತರ ಜಮೀನನ್ನು ಪಡೆದುಕೊಳ್ಳುವ ಆದೇಶ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಒಂದು ಕಡೆ ಹೇಳುತ್ತಾರೆ. ಆದರೆ ಇನ್ನೊಂದು ಕಡೆ ಸದ್ದು ಗದ್ದಲವಿಲ್ಲದೆ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗುತ್ತಿದೆ ಇದೆಲ್ಲ ಹೇಗೆ ಬಂತು ಎಂಬುದರ ಬಗ್ಗೆ ಮುಖ್ಯಮಂತ್ರಿಗಳ ಉತ್ತರ ಕೊಡಬೇಕು ಎಂದು ನವೀನ್ ಆಗ್ರಹ ಮಾಡಿದರು.
ರಾಜ್ಯ ಸರ್ಕಾರ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿ ಯಾರೊಬ್ಬರೂ ನೆಮ್ಮದಿಯಿಂದ ಬದುಕುವುದಕ್ಕೆ ಆಗುತ್ತಿಲ್ಲ. ಎಲ್ಲೆಡೆ ಭ್ರಷ್ಟಾಚಾರ ತುಂಬಿದೆ. ಸ್ವತಃ ಸಿದ್ದರಾಮಯ್ಯನವರೇ ಭ್ರಷ್ಟರಾಗಿದ್ದಾರೆಂದು ಆರೋಪಿಸಿದರು.
ರೈತರ, ಮಠ ಮಾನ್ಯಗಳ, ದೇವಸ್ಥಾನಗಳ ಒಂದಿಂಚು ಆಸ್ತಿಯನ್ನು ವಕ್ಫ್ ಸಂಸ್ಥೆಗೆ ಕೊಡುವ ಪ್ರಶ್ನೆಯೇ ಇಲ್ಲ, ನೀವು ಏನು ಮಾಡುತ್ತೀರಿ ಮಾಡಿ ಎಂದ ಸಿದ್ದರಾಮಯ್ಯರವರಿಗೆ ಎಚ್ಚರಿಕೆ ನೀಡಿದ ನವೀನ್ ನಮ್ಮ ಜಿಲ್ಲೆಯಲ್ಲಿ ನಂದನಹೊಸೂರಿನಲ್ಲಿ ಬಹು ಸಂಖ್ಯಾತ ಹಿಂದುಗಳಿಗೆ ಕಾಲು ಎಕರೆ ರುದ್ರಭೂಮಿ ಸಹ ಇಲ್ಲ. ಆದರೆ ಸುಮಾರು ವರ್ಷಗಳ ಹಿಂದೆ ವಾಸವಾಗಿ ಹೋದ ಅಲ್ಪಸಂಖ್ಯಾತರಿಗೆ 5 ಎಕರೆ ಖಬಾರಸ್ತಾನಕ್ಕೆ ಕೊಟ್ಟಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಡಿಸೆಂಬರ್ ಮೊದಲ ವಾರದಲ್ಲಿ ನಮ್ಮ ನಾಯಕರ ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ನವೀನ್ ತಿಳಿಸಿದರು.
ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜನ್ ಮಾತನಾಡಿ, ವಕ್ಫ್ ಆಸ್ತಿ ದೊಡ್ಡ ಸಮಸ್ಯೆ ಸೃಷ್ಠಿಸಿದೆ. ಕಾಂಗ್ರೆಸ್ ಸರ್ಕಾರದ ಒಂದು ಸಮುದಾಯದ ತುಷ್ಟೀಕರಣಕ್ಕಾಗಿ ಸಾವಿರಾರು ರೈತರ ಭೂಮಿಯನ್ನು ವಕ್ಫ್ ಮಂಡಳಿಗೆ ಬದಲಾಯಿಸುತ್ತಿದ್ದೀರಿ. ರೈತರು, ಮಠಾಧೀಶರು, ಸ್ವಾಮೀಜಿ, ನಾಗರಿಕರು ಇದು ನಮ್ಮ ಭೂಮಿ ಎಂದು ಬೀದಿಗಿಳಿದು ಹೋರಾಟ ಮಾಡಬೇಕಾದ ವಾತಾವರಣ ಸೃಷ್ಟಿಸಿದೆ. ಲ್ಯಾಂಡ್ ಜಿಹಾದ್ ಮೂಲಕ ಹಿಂದೂ ಸಮಾಜದ ಆಸ್ತಿಗಳನ್ನು ಕಬಳಿಸುವ ಹುನ್ನಾರ ನಡೆಸಿರುವ ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ. ಪ್ರತಿ ದಿನ ಹಗರಣ, ಭ್ರಷ್ಟಾಚಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಈಗ ವಕ್ಫ್ ಕಾಯ್ದೆ ಮುಂದಿಟ್ಟು ರಾತ್ರೋರಾತ್ರಿ ರೈತರ ಆಸ್ತಿಗಳನ್ನು ವಕ್ಫ್ ಮಂಡಳಿ ಆಸ್ತಿಯನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿದರು.
ವಕ್ಫ್ ಮಂಡಳಿ ನೀಡಿರುವ ನೋಟಿಸ್ ರದ್ದು ಪಡಿಸುವುದಾಗಿ ಸರ್ಕಾರ ಹೇಳುತ್ತಿದೆ. ನೋಟಿಸ್ ರದ್ದುಗೊಳಿಸುವ ಜೊತೆಗೆ ಪಹಣಿ ಕಾಲಂ ೧೧ ರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನೂ ತೆಗೆದು ಹಾಕುವ ಕೆಲಸ ಮಾಡಬೇಕು. ಈಗ ಸಾಂಕೇತಿಕವಾಗಿ ಹೋರಾಟ ನಡೆಸಲಾಗುತ್ತಿದೆ. ಸರ್ಕಾರ ವಕ್ಫ್ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡ ಎನ್.ಆರ್. ಲಕ್ಷ್ಮೀಕಾಂತ್, ಬಯಲುಸೀಮೆ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜೀವನಮೂರ್ತಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ರಾಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ರಾಮದಾಸ್, ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್, ನಗರಾಧ್ಯಕ್ಷ ನವೀನ್ ಚಾಲುಕ್ಯ, ಜಿಲ್ಲಾ ಖಂಜಾಚಿ ಮಾಧುರಿ ಗೀರಿಶ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ಹಿರಿಯೂರು ಮಂಡಲ ಅಧ್ಯಕ್ಷ ವಿಶ್ವನಾಥ್, ಯುವ ಮೋರ್ಚಾದ ಚಂದ್ರು, ರೂಪಾ, ವೀಣಾ, ಬಸಮ್ಮ, ಕಂಚನಾ, ಕವೀತಾ, ಸುಮಾ, ಕಿರಣ್, ಲೋಕೇಶ್, ಯೋಗೇಶ್ ಸಹ್ಯಾದ್ರಿ, ಜಗದೀಶ್, ಹೇಮಂತ, ಕಲ್ಲಂಸೀತಾರಾಮರೆಡ್ಡಿ, ರಜನಿ ಹರೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.