ಚಂದ್ರವಳ್ಳಿ ನ್ಯೂಸ್, ತುಮಕೂರು:
ಜಗತ್ತಿನಲ್ಲಿರುವ ಶಾಸ್ತ್ರೀಯ ಭಾಷೆಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನವಿದೆ. ಎರಡುವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ-ಪರಂಪರೆಯನ್ನು ಇಡೀ ಜಗತ್ತಿನ ಭಾಷಾಶಾಸ್ತ್ರಜ್ಞರು ಪ್ರಶಂಸಿದ್ದಾರೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಲೇಖಕ ಡಾ.ನಾಗಭೂಷಣ ಬಗ್ಗನಡು ಹೇಳಿದರು.
ಅವರು ಶ್ರೀ ಸಿದ್ಧಾರ್ಥ ಎಂಜನಿಯರಿಂಗ್‌ಕಾಲೇಜಿನಆವರಣದಲ್ಲಿ ಶನಿವಾರದಂದು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನಂತರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕನ್ನಡ ಉಳಿಸಿ ಕಟ್ಟಿ ಬೆಳೆಸುವ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರತಿ ಪ್ರದೇಶದ ಕಲೆಗಳ ವೈಭವವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಎಲ್ಲ ಜಾತಿ ಮತ ಧರ್ಮಗಳ ಜನರು ಒಗ್ಗೂಡಿಸಿಕೊಂಡು ಕನ್ನಡ ರಾಜ್ಯೋತ್ಸವವನ್ನು ಕ್ಯಾಂಪಸ್‌ನಲ್ಲಿ ಆಚರಿಸುವುದೇ ನಿಜವಾದ ಕನ್ನಡ ಮತ್ತು ಕನ್ನಡ ಸಂಸ್ಕೃತಿ. ಇದೇ ಕರ್ನಾಟಕದ ಪರಂಪರೆ-ಭಾಷೆ-ಸಂಸ್ಕೃತಿ ಎಂದರು ಅವರು ಪ್ರತಿಪಾದಿಸಿದರು.
ಕನ್ನಡ ಪರಂಪರೆಯ ವಿವೇಕ ಇಲ್ಲದಿದ್ದರೆ ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಿಲ್ಲ. ಅದು ತಾಂತ್ರಿಕ ವಿಷಯಗಳನ್ನು ಅಧ್ಯಯನ ಮಾಡುವು ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರಜ್ಞೆ ಇದೆ ಎಂಬುದಕ್ಕೆ ನಾಡಹಬ್ಬವನ್ನು ವೈವಿಧ್ಯಮ ಕನ್ನಡ ಕಾವ್ಯಪರಂಪರೆಯ ಮೂಲಕ ಆಚರಿಸಿದ್ದೀರಿ ಎಂದು ವಿದ್ಯಾರ್ಥಿಗಳ ಕನ್ನಡ ಪ್ರಜ್ಞೆಯನ್ನು ಡಾ.ನಾಗಭೂಷಣ ಬಗ್ಗನಡು ಅವರು ಪ್ರಶಂಸೆ ಮಾಡಿದರು.
ಸಾಹೆ ವಿವಿ ಕುಲಸಚಿವ ಡಾ.ಎಂ.ಝಡ್.ಕುರಿಯನ್ ಮಾತನಾಡಿ, ಕನ್ನಡ ನುಡಿಯ-ಸಂಸ್ಕೃತಿಯ ಬಗ್ಗೆ ಜಾಗೃತಿ ಇಟ್ಟುಕೊಳ್ಳುವ ಮೂಲಕ ಕ್ರಿಯಾತ್ಮಕ ಕಾರ್ಯಕ್ರಮಗಳಿಗೆ ಒತ್ತು ನೀಡಿರುವ ವಿದ್ಯಾರ್ಥಿಗಳ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ರವಿಪ್ರಕಾಶ್ ಮಾತನಾಡಿ ಬದುಕಿನ ಜೀವನಾಡಿಯಾಗಿಸುವ ನಿಟ್ಟಿನಲ್ಲಿ ನಾವು ನವೆಂಬರ್‌ಗೆ ಮಾತ್ರಕನ್ನಡಿಗರಾಗದೇ, ವರ್ಷ ಪೂರ್ತಿಕನ್ನಡದ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾಹೆ ವಿವಿ ಪರೀಕ್ಷಾಂಗ ನಿಯಂತ್ರಕ ಡಾ. ಗುರುಶಂಕರ್, ಡೀನ್ ಡಾ.ರೇಣುಕಾಲತಾ, ರಾಜ್ಯೋತ್ಸವ ಆಚರಣೆ ಸಂಚಾಲಕ ಡಾ.ಎಂ.ಎನ್. ಈಶ್ವರಪ್ಪ,ವಿದ್ಯಾರ್ಥಿ ಘಟಕದ ಸಂಚಾಲಕರು, ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತಿತರಿದ್ದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ಸಾಮೂಹಿಕ ನೃತ್ಯ, ಏಕವ್ಯಕ್ತಿ ಗಾಯನ, ಏಕಪಾತ್ರಾಭಿನಯ, ಲಲಿತ ಕಲೆಗಳ ರಂಗೋಲಿ, ಬೀದಿ ನಾಟಕ, ಮೆಹಂದಿ, ಕವನ ವಾಚನ, ಮುಖ ಚಿತ್ರಕಲೆ, ಗುಂಪು ಗಾಯನ, ಪ್ರಬಂಧ ಛಾಯಾಗ್ರಹಣ ಸೇರಿದಂತೆ ವಿವಿಧ ಸ್ಪರ್ಧೆಗಳು ಏರ್ಪಟ್ಟಿವೆ.