ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡುವಂತ ಹೊಸ-ಹೊಸ ಕಲಾವಿದರಿಗೆ ಮತ್ತು ಹೊಸ ಕಲಾವಿದರನ್ನು ಹಾಕಿಕೊಂಡು ಚಿತ್ರ ನಿರ್ಮಾಣ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು, ಹೊಸಬರ ಚಿತ್ರಗಳನ್ನು ವೀಕ್ಷಣೆ ಮಾಡುವುದರ ಮೂಲಕ ಅವರಿಗೆ ಪ್ರೋತ್ಸಾಹ ನೀಡುವಂತೆ ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ ಅಭಿಮಾನಿಗಳಲ್ಲಿ ಮನವಿ ಮಾಡಿದರು.
ಚಿತ್ರದುರ್ಗದ ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ಅವರು ನಟಿಸಿದ “ಭೈರತಿ ರಣಗಲ್” ಚಿತ್ರ ತೆರೆ ಕಂಡಿದ್ದು ಶನಿವಾರ ಅವರು ಭೇಟಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದರು.
“ಭೈರತಿ ರಣಗಲ್” ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಅಭಿಮಾನಿಗಳಿಂದಲೂ ಉತ್ತಮ ಪ್ರೋತ್ಸಾಹ ಸಿಕ್ಕಿದೆ. ಈ ಹಿನ್ನಲೆಯಲ್ಲಿ ಚಿತ್ರ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳಿಗೆ ಭೇಟಿ ನೀಡುವ ಸಲುವಾಗಿ ಚಿತ್ರದುರ್ಗ ನಗರಕ್ಕೆ ಪತ್ನಿ ಗೀತಾ ಜೊತೆ ಆಗಮಿಸಿದ್ದೇನೆ ಎಂದು ಅವರು ತಿಳಿಸಿದರು.
ಕಳೆದ ೩-೪ ದಶಕಗಳಿಂದ ಅಭಿಮಾನಿಗಳು ಚಿತ್ರ ವೀಕ್ಷಣೆ ಮಾಡುವುದರ ಮೂಲಕ ಪ್ರೋತ್ಸಾಹ ನೀಡುತ್ತಿದ್ದಾರೆ, ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಚಿತ್ರ ಮಂದಿರಕ್ಕೆ ಬರುವುದು ಕಡಿಮೆಯಾಗಿತ್ತು ಆದರೆ ಉತ್ತಮ ಚಿತ್ರಗಳು ತೆರೆ ಕಾಣುತ್ತಿರುವುದರಿಂದ ಪ್ರೇಕ್ಷಕರು ಚಿತ್ರ ಮಂದಿರದತ್ತ ಮುಖ ಹಾಕುತ್ತಿದ್ದಾರೆ. ಉತ್ತಮ ಚಿತ್ರಗಳನ್ನು ನೀಡಿದರೆ ಪ್ರೇಕ್ಷಕರು ಬರುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಅಪ್ಪು ನಮ್ಮೆಲ್ಲರಲ್ಲೂ ಇದ್ದಾನೆ ಅಪ್ಪು ನೆನೆಸಿಕೊಳ್ಳದ ದಿನಗಳೇ ಇಲ್ಲ. ಅವನನ್ನ ನೆನೆಸಿಕೊಳ್ಳದಿದ್ದರೆ ನಾನು ಅಣ್ಣನೆ ಆಗುವುದಿಲ್ಲ. ಅಪ್ಪು ಎಲ್ಲೂ ಹೋಗಿಲ್ಲ ಇಲ್ಲೆ ಇದ್ದು ಅವನ ಕಣ್ಣುಗಳು ಇನ್ನೂ ಜಗತ್ತನ್ನ ನೋಡುತ್ತಿವೆ ಎಂದು ಶಿವಣ್ಣ ಹೇಳಿದರು.
ಚಿತ್ರರಂಗಕ್ಕೆ ಹೊಸಬರ ಪ್ರವೇಶ ಆಗುತ್ತಿದೆ. ಅವರು ಹೀರೋ ಆಗಲು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಚಿತ್ರಗಳನ್ನು ನೋಡಿ ಪೋತ್ಸಾಹ ನೀಡಿದಂತೆ ಅವರ ಚಿತ್ರಗಳನ್ನು ವೀಕ್ಷಣೆ ಮಾಡುವುದರ ಮೂಲಕ ನಮ್ಮಂತೆ ಅವರಿಗೂ ಪ್ರೋತ್ಸಾಹ ನೀಡಬೇಕಿದೆ ಎಂದು ತಿಳಿಸಿದರು.
ನಾವುಗಳು ಚಿತ್ರವನ್ನು ಮಾಡುವುದರಿಂದ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. “ಭೈರತಿ ರಣಗಲ್” ಚಿತ್ರ ಉತ್ತಮವಾಗಿದೆ. ಅಲ್ಲದೆ ಉತ್ತಮ ಕಥೆ ಹಂದರ ಹೊಂದಿದೆ. ಮುಂದಿನ ದಿನದಲ್ಲಿ ಭಾಗ-೨ ಬರುವ ನಿರೀಕ್ಷೆ ಇದೆ ಎಂದರು. ಈಸೂರು ದಂಗೆ ಕುರಿತು ಸಿನಿಮಾ ಮಾಡಬೇಕು. ಈ ಕಥೆ ಚೆನ್ನಾಗಿದೆ ಎಂದು ಹೇಳಿದರು. ಈಸೂರು ದಂಗೆ ಸಿನಿಮಾ ಖಂಡಿತ ಮಾಡೇ ಮಾಡ್ತಿವಿ. ಕಥೆ ತುಂಬಾ ಸೂಕ್ಷ್ಮ ಆಗಿರುವುದರಿಂದ ಸಾಕಷ್ಟು ಎಚ್ಚರಿಕೆ ವಹಿಸಿ ಸಿನಿಮಾ ಮಾಡಬೇಕು ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಮುಂದೆ ೪೫ ಸಿನಿಮಾ ಬರುತ್ತಿದೆ. ಅದರಲ್ಲಿ ನಾನು, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯಿಸಿದ್ದೇವೆ. ಈ ಚಿತ್ರದಲ್ಲಿ ಶಿವಣ್ಣನ ಪಾತ್ರ ಭಿನ್ನವಾಗಿದೆ. ಇದು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಲಿದೆ. ನಂತರ ನಮ್ಮದೇ ಬ್ಯಾನರ್ನಲ್ಲಿ ಎ ಫಾರ್ ಆನಂದ ಸಿನಿಮಾ ಮೂಡಿ ಬರಲಿದೆ. ಇದು ನನ್ನ ಹಾಗೂ ಮಕ್ಕಳ ನಡುವೆ ನಡೆಯುವ ಸಂಭಾಷಣೆಯ ವಿಭಿನ್ನ ಶೈಲಿಯ ಚಿತ್ರ. ಹೊಸತನವಿದೆ ಎಂದು ವಿವರಿಸಿದರು.
ಭೈರತಿ ರಣಗಲ್ ಅಮೇರಿಕಾದಲ್ಲೂ ಎರಡನೇ ವಾರ ಚಿತ್ರ ನಡೆಯುತ್ತಿದೆ. ದುಬೈನಲ್ಲೂ ಬಿಡುಗಡೆ ಆಗಿದೆ. ಮುಂದಿನ ವಾರ ತೆಲುಗು, ತಮಿಳು ಸೇರಿದಂತೆ ಎಲ್ಲ ಕಡೆಗಳಲ್ಲಿ ಚಿತ್ರ ಬರಲಿದೆ ಎಂದರು.
ಮಫ್ತಿ-೨ ತೆರೆಗೆ ಬರುವ ನಿರೀಕ್ಷೆ ಇದೆ. ಭೈರತಿ ರಣಗಲ್ ಹಾಗೂ ಮಫ್ತಿ ಸರಣಿ ಕಥೆಗಳು ಎಂದು ಹೇಳಿದ ಅವರು ಈ ವರ್ಷ ಕನ್ನಡದಲ್ಲಿ ಉತ್ತಮ ಚಿತ್ರಗಳು ತೆರೆಗೆ ಬಂದಿವೆ. ಭೀಮಾ, ಭೈರತಿ ರಣಗಲ್, ಕೃಷ್ಣಂ ಪ್ರಣಯ ಸಖಿ ರೀತಿಯ ಒಳ್ಳೆಯ ಕಥೆಗಳು ಬಂದಿವೆ. ಹೀಗಾಗಿ ಚಿತ್ರಮಂದಿರಕ್ಕೆ ಜನ ಬರುತ್ತಿದ್ದಾರೆ. ಚಿತ್ರ ಯಶಸ್ವಿಯಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಿಂದ ಪ್ರವಾಸ ಆರಂಭಿಸಿದ್ದೇವೆ. ಇಂದು ದಾವಣಗೆರೆ, ಶಿರಸಿ, ಶಿವಮೊಗ್ಗ, ರಾಣೆಬೆನ್ನೂರು ಹಾಗೂ ಹುಬ್ಬಳ್ಳಿಗೆ ಪ್ರವಾಸ ಮಾಡಿ ಅಭಿಮಾನಿಗಳನ್ನು ಮಾತನಾಡಿಸಲಿದ್ದೇವೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ ಶಿವರಾಜ್ ಕುಮಾರ್ ನಮಗೆಲ್ಲಾ ಅಣ್ಣ ಇದ್ದಂತೆ ಅವರು ಬರೀ ಸಿನಿಮಾದಲ್ಲಿ ಕೆಲಸ ಮಾಡುವುದನ್ನು ಮಾತ್ರ ಮಾಡುತ್ತಿದ್ದಾರೆ ತಮ್ಮ ಆರೋಗ್ಯ ಕಡೆಗೆ ಗಮನ ನೀಡುತ್ತಿಲ್ಲ ಇನ್ನೂ ಮುಂದಾದರೂ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ, ವರ್ಷದ ೩೬೫ ದಿನವೂ ಚಿತ್ರರಂಗಕ್ಕೆ ದುಡಿಯವ ಬದಲು ವರ್ಷದಲ್ಲಿ ೧ ಅಥವಾ ೨ ಚಿತ್ರಗಳನ್ನು ಮಾಡುವುದರ ಮೂಲಕ ಅಭಿಮಾನಿಗಳನ್ನು ಸಂತೋಷ ಪಡಿಸಬೇಕಿದೆ. ಚಲನಚಿತ್ರ ರಂಗಕ್ಕಿಂತ ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡಬೇಕು, ಅವರ ಪತ್ನಿ ಗೀತಾಕ್ಕ ಗಮನ ನೀಡಬೇಕೆಂದು ಮನವಿ ಮಾಡಿದರು.
ಕೇಕೆ ಚಪ್ಪಾಳೆ-
ಚಿತ್ರದುರ್ಗದ ಪ್ರಸನ್ನ ಚಿತ್ರಮಂದಿರಕ್ಕೆ ಆಗಮಿಸಿದ್ದ ನಟ ಶಿವಣ್ಣ ಅವರನ್ನು ಕಂಡ ಕೂಡಲೇ ಅಭಿಮಾನಿಗಳು ಸಂಭ್ರಮಿಸಿದರು. ಸಾವಿರಾರು ಅಭಿಮಾನಿಗಳು, ಶಿಳ್ಳೆ, ಕೇಕೆ, ಚಪ್ಪಾಳೆ ಹಾಕಿ ಸಂಭ್ರಮಿಸಿದರು. ಚಿತ್ರಮಂದಿರದ ಎದುರು ಬೃಹತ್ ಹಾರ ಹಾಕಿದ ಅಭಿಮಾನಿಗಳು, ಶಿವಣ್ಣನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.
ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್, ಪ್ರಸನ್ನ ಚಲನಚಿತ್ರ ಮಂದಿರದ ಮಾಲೀಕ ಪ್ರಜ್ವಲ್, ಟಿಪ್ಪು ಖಾಸಿಂ ಆಲಿ ಸೇರಿದಂತೆ ಆಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿದ್ದರು.