ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೇವಾಲಯಗಳ ರಸ್ತೆ ಎಂದೇ ಹೆಸರಾದ ನಗರದ ತೇರಿನ ಬೀದಿಯಲ್ಲಿರುವ ಶ್ರೀ ಪ್ರಸನ್ನ ಚಂದ್ರ ಮೌಳೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ವೈಭವ ಹಾಗೂ ವಿಜೃಂಭಣೆಯಿಂದ ನಡೆಯಿತು.
ಇತಿಹಾಸ ಪ್ರಸಿದ್ಧ ಅರುಣಾಚಲೇಶ್ವರ ಅರ್ಥಾತ್ ಪ್ರಸನ್ನ ಚಂದ್ರ ಮೌಳೇಶ್ವರ ದೇವಾಲಯದ ಭಕ್ತ ಮಂಡಳಿ ಹಾಗೂ ಮುಜರಾಯಿ ಇಲಾಖೆ ಮತ್ತು ತಾಲೂಕು ಆಡಳಿತದ ವತಿಯಿಂದ ನಡೆದ ಚಂದ್ರ ಮೌಳೇಶ್ವರ ಬ್ರಹ್ಮ ರಥೋತ್ಸವ ದಲ್ಲಿ ವಿವಿದೆಡೆಗಳಿಂದ ಬಂದಿದ್ದ ಸಾವಿರಾರು ಭಕ್ತರು ಸ್ವಾಮಿಯ ದರ್ಶನ ಪಡೆದು ರಥಕ್ಕೆ ಬಾಳೆಹಣ್ಣು ದವನ ಅರ್ಪಿಸಿ ಕೃತಾರ್ಥರಾದರು.
ಹರ ಹರ ಮಹಾದೇವ, ಓಂ ನಮಃ ಶಿವಾಯ ಘೋಷಣೆಗಳೊಂದಿಗೆ ರಥವನ್ನು ಎಳೆದಿದ್ದು ನೆರೆದಿದ್ದ ಭಕ್ತಾದಿಗಳ ಗಮನ ಸೆಳೆದಿತ್ತು. ರಥೋತ್ಸವದ ಪ್ರಯುಕ್ತ ನಂಜುಂಡೇಶ್ವರ ಸೇವಾ ಸಮಿತಿ, ಶ್ರೀ ಶ್ರೀಕಂಟೇಶ್ವರ ಭಕ್ತ ಮಂಡಳಿ ಸೇರಿದಂತೆ ವಿವಿಧ ಧಾರ್ಮಿಕ ಸಂಘಟನೆಗಳ ವತಿಯಿಂದ ಅರವಂಟಿಗೆ
ಹಾಗೂ ಪ್ರಸಾದ ವಿತರಣೆ ನಡೆಯಿತು. ರಥೋತ್ಸವದಲ್ಲಿ ಭಕ್ತಾದಿಗಳು ಸೇರಿದಂತೆ ಹಲವಾರು ಜನ ಪ್ರತಿನಿದಿಗಳು ಹಾಗೂ ತಾಲೂಕಿನ ಗಣ್ಯರು ಭಾಗವಹಿಸಿದ್ದರು.