ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷವು ಸಂಸತ್ತಿನಲ್ಲಿ ಸೆಕ್ಷನ್ 267 ರ ಅಡಿಯಲ್ಲಿ ಅದಾನಿ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ಅದಾನಿ ಗ್ರೂಪ್ ಭ್ರಷ್ಟಾಚಾರ, ಲಂಚ ಮತ್ತು ಹಣಕಾಸು ಅಕ್ರಮಗಳ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. ನಾವು ಈ ವಿಷಯವನ್ನು ಸದನದ ಮುಂದೆ ಇಡಲು ಬಯಸಿದ್ದೇವೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಎಐಸಿಸಿ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರು ತಿಳಿಸಿದ್ದಾರೆ.
ಸುಮಾರು 2030 ಕೋಟಿ ಲಂಚ ನೀಡಲಾಗಿದೆ. ಸಾರ್ವಜನಿಕರ ಹಣವನ್ನು ಲಂಚಕ್ಕೆ ಬಳಸಲಾಗಿದೆ ಎಂಬುದನ್ನು ಸದನದ ಮೂಲಕ ದೇಶಕ್ಕೆ ತಿಳಿಸಲು ಬಯಸಿದ್ದೇವೆ. ಇದಕ್ಕೂ ಮುನ್ನವೇ ಅದಾನಿ ಗ್ರೂಪ್ ವಿರುದ್ಧ ಷೇರುಪೇಟೆಯ ಮ್ಯಾನಿಪ್ಯುಲೇಷನ್, ಲೆಕ್ಕಪತ್ರ ವಂಚನೆ, ಓವರ್ ಇನ್‌ವಾಯ್ಸ್ ಮತ್ತು ಶೆಲ್ ಕಂಪನಿಯಂತಹ ಗಂಭೀರ ಆರೋಪಗಳು ಬೆಳಕಿಗೆ ಬಂದಿವೆ ಎಂದು ಅವರು ಆರೋಪಿಸಿದ್ದಾರೆ.
ಈಗ ಈ ವಿಷಯಗಳನ್ನು ಸದನದಲ್ಲಿ ತರುವುದು ಮುಖ್ಯ, ಇದರಿಂದ ದೇಶ ನಷ್ಟ ಅನುಭವಿಸಿದೆ ಮತ್ತು ಇದರಿಂದ ಜಗತ್ತು ನಮ್ಮ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳಬಹುದು. ದೇಶ ಉಳಿಸಲು ನಾವು ಈ ವಿಷಯವನ್ನು ಎತ್ತಿದ್ದೆವು ಎಂದು ಖರ್ಗೆ ತಿಳಿಸಿದ್ದಾರೆ.
ಜೂನ್ 2015 ರಲ್ಲಿ ಮೋದಿಯವರು ಬಾಂಗ್ಲಾದೇಶಕ್ಕೆ ಹೋದಾಗ, ಅದಾನಿ ಗ್ರೂಪ್ ಅಲ್ಲಿ ವಿದ್ಯುತ್ ಯೋಜನೆಯನ್ನು ಪಡೆದುಕೊಂಡಿತು. ಮೋದಿಯವರ ಆಶೀರ್ವಾದವಿಲ್ಲದೆ ಯಾವ ದೇಶ ಅದಾನಿಯನ್ನು ಮಾತ್ರ ಆಯ್ಕೆ ಮಾಡುತ್ತದೆ? ಇದೆಲ್ಲವೂ ಮೋದಿಯವರ ಬೆಂಬಲದಿಂದ ನಡೆಯುತ್ತಿದೆ, ಇದು ದೇಶದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಇಂತಹ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲು ಮಾತ್ರ ನಿಯಮ 267 ಮಾಡಲಾಗಿದೆ. ಸತ್ಯ ಹೊರಬರಲು ಜೆಪಿಸಿ ರಚನೆಯಾಗಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಖರ್ಗೆ ತಿಳಿಸಿದ್ದಾರೆ.