ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೆಲದ ಮಾತು 68
ಅವ್ವ ಅಪ್ಪ ನೆಲೆಸಿದ್ದ ಆ ತಡಕೆಯ ಗುಡಿ ಬಾಗಿಲಿಗೆ, ಜೋಡುಗಳು ಬಂದು ಬಿದ್ದದ್ದು, ನಾನೆಷ್ಟು ಮರೆಯಲೆತ್ನಿಸಿದರು ಮರೆಯಲಾಗುತ್ತಿಲ್ಲ. ಇದನ್ನು ಎಷ್ಟೋ ಬಾರಿ ನನ್ನ ಆತ್ಮೀಯ ಹೆಜ್ಜೆಗಳೊಂದಿಗೆ ಹಂಚಿಕೊಂಡು ಹಗುರಾಗಿದ್ದೇನೆ.
ಆ ದಿನಗಳಲ್ಲಿ ಸಂಬಂಧಗಳೊಳಗಿನ ಸ್ಥಿತಿವಂತ ಕುಟುಂಬ ಆತನದು,ನನ್ನವ್ವನ ಸೋದರ ಸಂಬಂಧಿಯೇ,ನಮ್ಮನ್ನ ಹೀನಾಯವಾಗಿ ಕಡೆಗಣಿಸಿಯೇ ನೋಡುತ್ತಿದ್ದವ.
ಆ ಮನೆಯ ಯಜಮಾನಿಯೋ, ಸಣ್ಣವನನ್ನ ಎತ್ಕೊಂಡು ಅವರ ಮುಂದೆ ಹೋದ್ರೆ, ಬೆಳಿಗ್ಗೆನೇ ಈ ಕರಿ ಬೆಕ್ಕನ್ನ ತಂದು ನಮ್ಮ ಮುಂದೆ ನಿಲ್ಲಿಸಬೇಡ ಅಂತಿದ್ರು, ಅವಮಾನಿಸಿ ನಗ್ತಿದ್ರು, ಈ ದಿನಕ್ಕೆ ಆ ಬೆಕ್ಕಿನಿಂದಲೇ, ಯಜಮಾನಿಯ ಮೌಲ್ಯ ವೃದ್ಧಿಸಿದ್ದು ಅನ್ನೋದು ಮಾತ್ರ ನನ್ನ ಖುಷಿಯ ಮಾತು.
ಪ್ರತಿಯೊಬ್ಬರ ಬದುಕಿನಲ್ಲೂ ಹಗಲು ರಾತ್ರಿಗಳು ತೆರೆದುಕೊಳ್ಳುತ್ತವೆ, ಯಾರು, ಯಾವುದು, ಯಾವಾಗ, ಎಲ್ಲಿ, ಗೊತ್ತಾಗುವುದೇ ಇಲ್ಲ, ಹೇಗೆ ಕಮರುತ್ತಾವೋ, ಹಾಗೆಯೇ ಅರಳುತ್ತವೆ. ಪ್ರತಿಯೊಬ್ಬರಲ್ಲೂ,ಅಮಾವಾಸ್ಯೆ ಬೆಳೆದಿಂಗಳಾಟ ಇದ್ದೇ ಇರುತ್ತದಲ್ವ,ಸಮಯ ಬೇಕಷ್ಟೇ.
ಸವೆದ ಹಾದಿಯನ್ನ ಒಮ್ಮೊಮ್ಮೆ ಹಿಂತಿರುಗಿ ನೋಡಿದಾಗ, ಬರೆಯಲೇ ಬೇಕು ಅನಿಸಿದ್ದನ್ನ ಬರೆಯುತ್ತಿದ್ದೇನೆ. ಅತಿಯಾದ ಅವಮಾನಗಳು, ಹೀಯಾಳಿಕೆಗಳು, ಮನಸ್ಸನ್ನ ಘಾಸಿ ಮಾಡಿದ್ದಂತೂ ನಿಜ. ಬೇಡವೆಂದರೂ ಕಾಡುವ ಕುಹಕಗಳವು.ಹೇಗೆ ಮರೆಯಲಿ.ಆ ಮನೆಯ ದೊಡ್ಡವಳನ್ನ ಮದುವೆಯಾಗಿದ್ದ ಒಬ್ಬ ಮೂರ್ಖ,ಕೋಟೆ ಪೋಲೀಸ್ ಠಾಣೆಗೆ ಬರೆದು ಕೊಟ್ಟ ದೂರು,ನನ್ನ ಸೊಸೆಯನ್ನ ಅಪಹರಿಸಿದ್ದಾರೆ,ಇವನನ್ನು ಬಂಧಿಸಿ ಎಂದು,ನನ್ನನ್ನು ತೋರಿಸಿ ಠಾಣೆಯಲ್ಲಿ ಕೂರಿಸಿದ್ದು,ಘರ್ಷಣೆಯಲ್ಲಿ ದೊಡ್ಡವನ ಕೈ ಮುರಿದದ್ದು, ಅಣ್ಣಂದಿರು,ಅತ್ತಿಗೆಯರು, ಅವ್ವ,ಅಪ್ಪ,ಬಳ್ಳಿಯ ಯಾರೂ ಭಾಗವಹಿಸದ,ಊರಿನಾಚೆ ನಡೆದ ಆರತಿ ಕಾರ್ಯಕ್ಕೆ, ಊರೇ ಹೋಗಿ ನಮ್ಮ ಮುಂದೆ ಅಪಹಾಸ್ಯ ಮಾಡಿದ್ದು,ಆ ಮನೆಯ ಮುಂದೆ ನಡೆದಾಡುವಾಗ, ಸಣ್ಣ ಸಣ್ಣ ಮಕ್ಕಳು,ಹೀಯಾಳಿಸಿ ನಗುತ್ತಿದ್ದ ಆ ಕುಹಕ ನಗು,ಆ ಯಜಮಾನಿಗೆ ಅದೆಷ್ಟು ದಿನದ ಕನಸೋ ಏನೋ, ನಮ್ಮೆದುರು ರಾಜ್ಯ ಗೆದ್ದಂತ ಬಿಗುಮಾನ ಅವಳದು, ಎಷ್ಟೆಲ್ಲ ಕಷ್ಟಗಳ ಮಧ್ಯೆ,ಅವ್ವ ಕಟ್ಟಿದ್ದ ಒಂದೇ ಗೂಡಿನ ಮರಿಗಳೆಲ್ಲಾ, ಬೆಳಕರಿಯುವುದರೊಳಗೆ ಒಡೆದ ಕನ್ನಡಿಯಂತೆ ಚೂರಾದ ದಿನಗಳು, ಇಂದಿಗೂ ಕೂಡಿಲ್ಲ.ಒಟ್ಟು ಬಳಗದ ಮನಸ್ಸುಗಳೊಡೆದು,
ಗೆಳೆತನಕ್ಕೆ ಸಾಕ್ಷಿಕರಿಸಿ ಬೆಸೆದಿದ್ದ ಜೋಡಿಗಳು,ಅವರು ಕಿತ್ತಾಡಿದಕ್ಕೂ ನಮಗೂ ಸಂಬಂಧವಿಲ್ಲ,ನಾವು ಆ ಮನೆಗೂ ಬರಲ್ಲ,ಈ ಮನೆಗೂ ಬರಲ್ಲ ಅಂದಾಗ, ಹಾಲುಣಿಸಿ ಆರೈಕೆ ಮಾಡಿ,ಕೂಲಿ ಹೋಗುತ್ತಿದ್ದ,ಅವ್ವನ ಮನಸ್ಸು ಏನಾಗಿರಬೇಕು, ಜೋಗುಳ ಹಾಡಿ ತೂಗಿ ಮಲಗಿಸುತ್ತಿದ್ದ ಅಕ್ಕ, ಸಮಯ ಇದ್ದಾಗ ಬಗಲಲ್ಲಿ ಇಟ್ಕೊಂಡು ಆಡಿಸುತಿದ್ದ ನಾನು,ಇವು ಯಾವುವೂ ಲೆಕ್ಕಕ್ಕೆ ಬರಲೇ ಇಲ್ವಲ್ಲಾ.ದಾರೀಲಿ ಹೋಗುವಾಗ,ಹೀರೋ ಅಂತ ಕೂಗಿ ಮರೆಯಾಗಿ, ತಿರುಗಿದರೆ ಕುಹಕದಿಂದ ನೋಡುತ್ತಿದ್ದವರು,ಈ ಜೋಡಿಯ ಕೂಸುಗಳನ್ನ ಎತ್ಕೊಂಡು,ದಾರಿಗೆ ಅಡ್ಡವಾಗಿ ಬಂದು ತೋರಿಸುತ್ತಲೇ ಗೇಲಿ ಮಾಡುತ್ತಿದ್ದವರು,ಮನೆ ಕೂಸುಗಳನ್ನ ಅವಮಾನಿಸಿ ನಗುತ್ತಿದ್ದವರು,ಅವ್ವನಿಗಂತೂ ನನಿಗೂ ಕೇಳಿಸುವ ಹಾಗೆ ಬಾಯಿಗೆ ಬಂದಂತೆ ಬೈಯುತ್ತಿದ್ದವರು,ಅವರ ಉದ್ದೇಶಗಳು ಈ ಕ್ಷಣಕ್ಕೂ ಗೊತ್ತಿಲ್ಲ?ಉಸಿರುಗಟ್ಟಿಸಿ,ಬೆದರಿಕೆಯಲ್ಲಿಡಿಸಬೇಕೆನ್ನುವ ಆ ಯಜಮಾನಿಯ ಬಯಕೆಗಳು,ನನ್ನ ಬೆನ್ನತ್ತಿದ್ದಂತೂ ನಿಜ.
ಅವಮಾನವಂತೂ ನನ್ನ ಗೂಡಿಗೆ ಸಹಜ ಕ್ರಿಯೆ, ಕೇಳಿದರೂ ಕೇಳದಂತೆ ಮೂಕನಾದೆ,ಮೌನಿಯಾದೆ, ಅಸಹಾಯಕನಂತೂ ಮೊದಲೇ ಆಗಿದ್ದೆ,ನೆಹರು ನಗರದ ಮನೆಗೆ ಹೋಗಬೇಕೆಂದರೆ,ಹಿಂಸೆಯ ಹೆಜ್ಜೆಗಳನ್ನ ಜೊತೆಗಿಟ್ಕೊಂಡೇ ಓಡಾಡಬೇಕಾದಂತಹ ಪರಿಸ್ಥಿತಿ ನನ್ನದು,ಇದನ್ನ ನನ್ನವಳು, ಅವ್ವ,ಮಕ್ಕಳು,ಸೇರಿ ಅನುಭವಿಸಿದ್ದೇವೆ,ಅಪ್ಪನೋ ಪಾರಿವಾಳದ ಗೆಳೆಯ,ಈ ಪಾರಿವಾಳಗಳ ಗುಣ ಧರ್ಮ ಹೇಗೆ ಅಂದ್ರೆ,ಅವನ್ನ ಯಾವ ಖಾನೆಗೆ ಬಿಟ್ಟರೂ ಅವು ಜೊತೆಯಾಗಿ ಬದುಕುತ್ತವೆ,ಹಾಗಾಗಿ ನನ್ನಪ್ಪನ ಗುಣಧರ್ಮ,ಎಲ್ಲಾ ಕಡೆಗೂ ಸಲ್ಲುತ್ತಿದ್ದ, ಆತನಿಂದಲೇ ಇಷ್ಟೆಲ್ಲ ನಡೆದದ್ದು ಅಂತ ಅವ್ವ ಅನೇಕ ಬಾರಿ ಆತನ ಮೇಲೆ ಗಲಾಟೆಗೆ ಬಿದ್ದದ್ದುಂಟು,ಕಡೆಗೆ ಬಹುದಿನ ನನ್ನ ಜೊತೆಗಿದ್ದ ಅವ್ವನನ್ನೂ ಸಹ,ಯಾರ ಕೈವಾಡವೋ ಗೊತ್ತಿಲ್ಲ,
ಆ ದೇವತೆ ಬದುಕಿದ್ದ ಮೂಲ ಗುಡಿಗೇ ಸರಿಸಿದರು.ಏನೆಲ್ಲಾ ಅವಾಂತರಗಳು,ಅಕ್ಷರ ಪೋಣಿಸಲಿಕ್ಕೆ ಹಿಂಸೆಯಾಗುತ್ತದೆ,ಇದನ್ನೆಲ್ಲ ಬರೆದುಕೊಳ್ಳುವ ಅವಶ್ಯಕತೆಯೂ ನನಗಿಲ್ಲ,ನನ್ನೊಂದಿಗೆ ಮಣ್ಣಾಗಲಿರುವ ಸುದ್ದಿಗಳಿವು,ಆದರೆ ಒಂದಂತೂ ದಿಟ,ಪ್ರತಿ ಬಳಗದ,ಪ್ರತಿಯೊಬ್ಬನ ಕಥೆಯು ಇದಕ್ಕೆ ಹೊರತಾಗಿರುವುದಿಲ್ಲ, ಭಿನ್ನವಾಗಿರಬಹುದಷ್ಟೇ, ಅನುಭವಿಸಿದವನ ಕಣ್ಣೀರಿನಲ್ಲಿ ಕಥೆ ಹೇಳುತ್ತವೆ, ಬಹುತೇಕರಲ್ಲಿ ಒಳಗೇ ಕೂತು ರೋದಿಸುತ್ತವೆ, ನಾನು ಅಕ್ಷರಗಳಲ್ಲಿಟ್ಟಿದ್ದೇನೆ ಅಷ್ಟೇ.ಬದುಕು ಕೊಟ್ಟ ಏಟಿಗೆ,
ನೆಹರು ನಗರವನ್ನೂ ಬಿಟ್ಟು ಹೊರ ನಡೆದೆ.ಗೊತ್ತಿಲ್ಲ ಒಡಹುಟ್ಟಿದವರಾಗಿದ್ದರೂ ಹೀಗೀಗ ಹೊರಗಿನ ಸಂಬಂಧಗಳಾಗಿಬಿಟ್ಟಿವೆ. ಕರುಳ ಬಳ್ಳಿಯ ಸಂಬಂಧಗಳಿವು, ಇವುಗಳಿಗೇಕೆ ಇಷ್ಟೊಂದು ವೈರುಧ್ಯ,ಇಂದಿಗೂ ಅರ್ಥಗಳನ್ನು ಹುಡುಕುತ್ತಲೇ ಇದ್ದೇನೆ.
ತಪ್ಪುಗಳು ನನ್ನವೂ ಇಲ್ಲವೆಂದಿಲ್ಲ,ಅನೇಕವಾಗಿವೆ,ನನ್ನ ದುಡಿತದ ಅವಧಿಯಲ್ಲಿ ಇವು ಹಿರಿಯನ ಕೂಸುಗಳು,ಕಿರಿಯನ ಕೂಸುಗಳು,ನನ್ನ ಕೂಸುಗಳು ಅಂತ ಒಮ್ಮೆಯೂ ಯೋಚಿಸಿಲ್ಲ,ಒಟ್ಟು ಗೂಡಿನ ಮೇಲೆ ಅವ್ವನ ಹಿಡಿತವಿತ್ತು, ಬಳ್ಳಿಯ ಈಚು,ಮೊಗ್ಗು, ಹೂಗಳನ್ನ,ಕಾಯುವ ಕೆಲಸವಷ್ಟೇ ನನ್ನದು,ಆ ದೇವತೆಯ ಜೊತೆ ಸೇರಿ ಅಷ್ಟೂ ಗಮನಿಸಿ ಎಲ್ಲರನ್ನೂ ನೋಡುತ್ತಿದ್ದೆ, ಭೇದಭಾವವನ್ನು ನನ್ನೊಳಗೆ ಸುಳಿಯಲು ಬಿಟ್ಟಿದ್ದಿಲ್ಲ,ಬಳ್ಳಿಯ ಬೇರಿಗಾದ,ಅನೇಕ ಗಾಯದ ಗುರುತುಗಳು,ನನ್ನನ್ನು ಕುಬ್ಜವಾಗಿಸಿದ್ದುಂಟು,ಒಂದು ಗುಡಿಸಲು,ಒಂದೊಲೆ, ನಾಲ್ಕಾದ ದಿನ,ನಾನೆಷ್ಟು ಸಣ್ಣವನಾಗಿದ್ದೆನೆಂದರೆ,ಪಕ್ಕದ ಮನೆಗ್ಹೋಗಿ,ಟಿವಿ ನೋಡುತ್ತಿದ್ದ ಮನೆ ಕೂಸುಗಳಿಗೆ,ಕಷ್ಟಪಟ್ಟು ಒಂದು ಸಣ್ಣ ಟಿವಿ ತಂದಿದ್ದೆ,ನನ್ನದೇ ಬದುಕಿಗೆ ಹೊರ ಹೋಗುವಾಗ,ಅವ್ವ ಅತ್ತು ಗೋಗರೆದರೂ ಕೇಳಿದ್ದಿಲ್ಲ,
ಬಾಡಿಗೆ ಗೂಡು ಮಾಡಿ,ನನ್ನ ಬಳಗವನ್ನ ಪ್ರತ್ಯೇಕ ಕರೆದೊಯ್ದೆ,ನನ್ನವ್ವನ ಗುಡಿ, ನನಗೆ ಕಸುವು ಕೊಟ್ಟ ಗುಡಿ, ಬಿಟ್ಟು ಹೋಗುವಾಗ ಬಹುವಾಗಿ ದುಃಖಿಸಿದ್ದೂ ಇದೆ,ನನ್ನವಳು,ಕೂಸುಗಳು, ಬಾಡಿಗೆ ಗೂಡು,ಅಷ್ಟೇನು ಸುಲಭವಾಗಿರಲಿಲ್ಲ,ನನ್ನ ಒಂಟಿ ಹೋರಾಟಕ್ಕೆ ಎದುರಾದ ಮೊದಲ ಸವಾಲಿದು. ಮುಂದಿನದೇನೂ ಗೊತ್ತಿಲ್ಲ, ರಟ್ಟಿಯಲ್ಲಿ ಕಸುವಿತ್ತು ದುಡಿಯುತ್ತೇನೆಂಬ ಭರವಸೆ,
ಅದೇ ನನ್ನ ಜೀವಸೆಲೆ,ಆದರೆ ನಾನು ಹೋಗುವಾಗ,ಅವ್ವ ಕೊಟ್ಟ ಪಾತ್ರೆ ಸಾಮಾನುಗಳ ಜೊತೆ ಎಲ್ಲರ ಖುಷಿಗಾಗಿ ಇದ್ದ ಆ ಸಣ್ಣ ಟಿವಿಯನ್ನ ನಾನೇ ಹೊತ್ತು ಹೊರತಂದೆ,ಇದು ತಪ್ಪೇನು ಅಲ್ಲ,ಪ್ರತಿದಿನ ನೋಡುತ್ತಿದ್ದ ನನ್ನ ಕೂಸುಗಳಿಗಾಗಿ,ಮತ್ತೊಂದು ತರಲಾಗದ ಕಾರಣಕ್ಕಾಗಿಯೋ ಏನೋ, ಹಿಂದೂ ಮುಂದೂ ನೋಡದೆ ನೇರವಾಗಿ ಯೋಚಿಸಿದ್ದೆ,ಆ ಕ್ಷಣ ಅವ್ವ,ಅತ್ತಿಗೆಯ ಕಣ್ಗಳು ಒದ್ದೆಯಾಗಿದ್ದವು,ಎಲ್ಲ ಕೂಸುಗಳು ಮೌನವಹಿಸಿ ಮೂಲೆ ಸೇರಿ,ನನ್ನನ್ನೇ ದಿಟ್ಟಿಸಿದ್ದವು,ಯಜಮಾನಿಗೆ ಜೊತೆಯಾಗಿದ್ದ ಕೆಲವರಲ್ಲಿ,ನಗುವನ್ನೂ ಕಂಡು ಹೆಜ್ಜೆ ಹಾಕಿದ್ದೆ,ಆ ಸಂದರ್ಭ ಇವ್ಯಾವುವೂ ನನಗೇನೂ ಸಂಬಂಧವಿಲ್ಲದಂತೆ ಕಾಣಿಸಿ, ಸಾಗರಕ್ಕಿಳಿಯಬೇಕಾಗಿದ್ದವ ಬಾವಿಯೊಳಗಿನ ಕಪ್ಪೆಯಾಗಿದ್ದೆ.
ನೆರಳು,ಅರಿವೆ,ಗಂಜಿಯ ವಿಚಾರವಾಗಿ ಈ ಸಾಲುಗಳು.ಅಂದು ಘಟಿಸಿ ಹೃದಯ ಕಲುಕಿದ ಇವು,ಏಕೋ ಗೊತ್ತಿಲ್ಲಾ!ಇಂದಿಗೂ ನನ್ನನ್ನ ಬಿಡದೇ ಕಾಡುತ್ತಿರುತ್ತವೆ.ನನ್ನವ್ವ ಅತ್ತಿಗೆ,ಕೂಸುಗಳು ಇಂದಿಗೂ ನನ್ನ ಸಣ್ಣತನಕ್ಕೆ,ಅಪಹಾಸ್ಯ ಮಾಡಿದಂತೆ ನನ್ನೆದುರು ನಿಂತಂತಾಗುತ್ತವೆ,ಈ ಹೊತ್ತಿಗೆ ಅವೆಲ್ಲವೂ ನನ್ನೆತ್ತರಕ್ಕೆ ಬೆಳೆದು ನಿಂತಿವೆ, ಅವರವರ ಬದುಕಿನ ಬಂಡಿಯನ್ನ ಹತ್ತಿ ಆನಂದಿಸಿವೆ.
ಲವಲವಿಕೆಯಿಂದ ಓಡಾಡುತ್ತವೆ,ಆಡಿಸಿ ಮುದ್ದಿಸುತ್ತಿದ್ದ ಆ ದಿನಗಳನ್ನ, ಅವು ಸಹ ಇನ್ನೂ ಮರೆತಿಲ್ಲ,ಮತ್ತೆ ಆಲದ ಮರದ ಹಕ್ಕಿ,ಮರಿಗಳ ಕಂಪಾದ ಇಂಚರದಂತೆ,ಇವರುಗಳ ಜೊತೆಯ ಖುಷಿಯೊಳಗೆ, ನನ್ನ ಮನದ ಗಾಯ ಮಾಯುತ್ತಲೇ ಇಲ್ಲ,ಆ ಕ್ಷಣದ ಕಾರಣ ಕೂಸುಗಳಿದೆರು, ಸಣ್ಣವನಾದೇ ಅಂತ ಅನಿಸುತಿದೆ.
ದಾರಿಯ ಕೊನೆ ಉಸಿರಿರುವರೆಗೂ ನನ್ನ ದೃಷ್ಟಿಯೆದುರು,ಅವೆಲ್ಲವೂ ಸುಖವಾಗಿರಲಿ.ಯಾರ್ಯಾರದೋ ತಪ್ಪುಗಳು,ವಿಕೃತ ಮನಸ್ಸುಗಳ ನಿರ್ಧಾರಗಳು, ಅಂತೂ ಒಟ್ಟು ಗೂಡಿಗೆ ಬರೆ ಬಿದ್ದದ್ದು,ಇನ್ನೂ ಮಾಸಿಲ್ಲ, ಅವು ಮಾಸುವುದೇ ಇಲ್ಲ.
ಮುಂದುವರೆಯುವುದು……
ಲೇಖನ-ಕುಮಾರ್ ಬಡಪ್ಪ, ಚಿತ್ರದುರ್ಗ.