ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವಿದೆ ? ಎಷ್ಟು ರಾಜ್ಯಗಳಲ್ಲಿ ನಿಮಗೆ ಸ್ವಂತ ಬಲವಿದೆ ? ಎಂದು ಜೆಡಿಎಸ್ ಕಾಂಗ್ರೆಸ್ ನಾಯಕರನ್ನ ಪ್ರಶ್ನಿಸಿದೆ.
ನಿಮ್ಮ ಬೆನ್ನುಮೂಳೆ ಮುರಿದು ಯಾವ ಕಾಲವಾಯಿತು? ಶಿವಸೇನೆ ಪಾದಕ್ಕೆ ಶರಣಾದ ಮೇಲೆ ನಿಮಗೇನಿದೆ ಕಿಮ್ಮತ್ತು? ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಜೆಡಿಎಸ್ ವಾಗ್ದಾಳಿ ಮಾಡಿದೆ.
ಆಶಾವಾದಕ್ಕೆ ಸ್ವಸ್ತಿ ಹೇಳಿ ಅವಕಾಶವಾದಕ್ಕೆ ನಾಂದಿಹಾಡಿದ ಗತಿಗೆಟ್ಟ ಕಾಂಗ್ರೆಸ್ಸಿಗೆ, ಜೆಡಿಎಸ್ ಉಸಾಬರಿ ಯಾಕೆ ? ಎಂದು ಜೆಡಿಎಸ್ ಪ್ರಶ್ನಿಸಿದೆ.
ರಾಷ್ಟ್ರದ ಬಹುತೇಕ ಚುನಾವಣೆಗಳಲ್ಲಿ ಸೋತು ಅನೇಕ ರಾಜ್ಯಗಳಲ್ಲಿ ಕನಿಷ್ಠ ನೆಲೆಯೂ ಇಲ್ಲದ ನೀವು ಜೆಡಿಎಸ್ ನೆಲೆಯ ಬಗ್ಗೆ ಮೈ ಪರಚಿಕೊಳ್ಳುತ್ತೀರಿ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಪಕ್ಷದ ತಟ್ಟೆಯಲ್ಲಿ ನೊಣಕ್ಕೆ ದುರ್ಬೀನು ಹಾಕುವ ನಿಮ್ಮ ಹತಾಶ ಮನಸ್ಥಿತಿಗೆ ಏನು ಹೇಳುವುದು?
ನಿಮ್ಮ ಬಾಲಬುದ್ಧಿಯ ಐರನ್ ಲೆಗ್ ರಾಹುಲ್ ಗಾಂಧಿ ಪ್ರವೇಶವಾದ ಮೇಲೆ ನಿಮ್ಮ ಪಾರ್ಟಿ ಪಕಳೆಗಳು ಹೇಗೆ ಉದುರುತ್ತಿವೆ ಎನ್ನುವುದು ಕಾಣುತ್ತಿಲ್ಲವೇ? ಕಣ್ಣಿಗೆ ಕಾಮಾಲೆ ಜತೆಗೆ ಪೊರೆ ಬಂದಿದೆಯಾ? ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಜೆಡಿಎಸ್ ಹಿಗ್ಗಾಮುಗ್ಗಾ ಟೀಕಿಸಿದೆ.
ಸೋತು ಸೋತು ಸೋತುಗೆಟ್ಟು ತುಕ್ಕು ಹಿಡಿದಿರುವ ಕಾಂಗ್ರೆಸ್ ಪಾರ್ಟಿ ಮತ್ತು ಅದರ ಪಟಾಲಂ ಈಗ ಇವಿಎಂ ಮೇಲೆ ದಂಡಯಾತ್ರೆ ಮಾಡುತ್ತಿದ್ದೀರಿ ! ಎಲ್ಲಾ ಸಮೀಕ್ಷೆಗಳಲ್ಲಿಯೂ ಚನ್ನಪಟ್ಟಣದಲ್ಲಿ ನಿಖಿಲ್ ಅವರು ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದವು. ಹಾಗಾದರೆ ಮೆಗಾಸಿಟಿ ಮಳ್ಳ ಗೆದ್ದಿದ್ದು ಹೇಗೆ ? ಹಾಗಂತ ನಾವೇನು ಇವಿಎಂಗಳ ಮೇಲೆ ಬಿದ್ದು ಅಳುತ್ತಿದ್ದೇವೆಯೇ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಅಧಿಕಾರಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಒಲೈಸಿ ಬಹುಸಂಖ್ಯಾತರನ್ನು ಕಾಲ ಕಸದಂತೆ ನೋಡುತ್ತಿರುವ ನಿಮಗೆ ನೈತಿಕತೆ ಇದೆಯಾ? ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಎಂದು ಜೆಡಿಎಸ್ ಪ್ರಶ್ನಿಸಿದೆ.
ಮುಡಾದಲ್ಲಿ ದಲಿತರ ಸೈಟು ಕಬಳಿಸಿದ 420, ಎ1 ಆರೋಪಿಯ ನವರಂಗಿ ಆಟಗಳು ಸರಣಿ ಸರಣಿಯಾಗಿ, ಕಂತು ಕಂತಾಗಿ ಹೊರಬರುತ್ತಿದೆಯಲ್ಲವೇ ? ಆ ಹೊಟ್ಟೆಉರಿ ಗಿರಾಕಿಯನ್ನು ಪ್ರಶ್ನಿಸಿ. ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಕೊಳ್ಳೆ ಹೊಡೆಯುತ್ತಿರುವ ಕಲೆಕ್ಷನ್ ಗಿರಾಕಿಯ ಪರ್ಸಂಟೇಜ್ ದಂಧೆಯನ್ನು ಪ್ರಶ್ನಿಸಿ.
ಬೆಂಗಳೂರಿನ ರಸ್ತೆ ಗುಂಡಿಗಳನ್ನು ನೋಡಿ, ಕಣ್ತೆರೆಯಿರಿ. ವಾಲ್ಮೀಕಿ ನಿಗಮದ ಹಣ ಕದ್ದ ಕಳ್ಳರು, ಪರಿಶಿಷ್ಟರಿಗೆ ಮೀಸಲಿಟ್ಟ ಹಣ ದೋಚಿದ ದುರುಳರು ನಿಮ್ಮಲ್ಲೇ ಇದ್ದಾರೆ ಅಲ್ಲವೇ? ಅವರನ್ನೂ ಪ್ರಶ್ನಿಸಿ. ತಾಕತ್ತು, ದಮ್ಮು ಇಲ್ಲವೇ ? ಪ್ರಶ್ನೆ ಮಾಡೋಕೆ ಅವರೆಡೂ ಇರಬೇಕು. ಬೆನ್ನುಮೂಳೆ ಇಲ್ಲದ ನಿಮಗೆ ಅದು ಸಾಧ್ಯವೇ? ಎಂದು ಜೆಡಿಎಸ್ ಮನಬಂದಂತೆ ಕಾಂಗ್ರೆಸ್ ವಿರುದ್ಧ ಟೀಕಿಸಿದೆ.