ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬಯಲು ಮುಕ್ತ ಬಹಿರ್ದೆಸೆ ಮಾಡಬೇಕು, ಮನೆಗೊಂದು ಶೌಚಾಲಯ, ಹೀಗೆ ಎಲ್ಲಡೆ ಶೌಚಾಲಯ ನಿರ್ಮಾಣದ ದೊಡ್ಡ ಅಭಿಯಾನ ನಡೆಯುತ್ತಿದೆ. ಆದರೆ ನಗರಸಭೆ ವತಿಯಿಂದ ಲಕ್ಷಾಂತರ ರೂ ಖರ್ಚು ಮಾಡಿ ಶೌಚಾಲಯ ನಿರ್ಮಿಸಿ ವರ್ಷಗಳೇ ಕಳೆಯುತ್ತ ಬರುತ್ತಿದ್ದರೂ ಉದ್ಘಾಟನೆ ಭಾಗ್ಯ ಮಾತ್ರ ಕಂಡಿಲ್ಲ.
ಇದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರಸಭೆ ವ್ಯಾಪ್ತಿಯ ಟಿಬಿ ವೃತ್ತದಲ್ಲಿನ ಚಳ್ಳಕೆರೆ ರಸ್ತೆಯಲ್ಲಿ ಕಂಡು ಬರುವ ಉದ್ಘಾಟನೆ ಆಗಿರದ ಶೌಚಾಲಯದ ಕಥೆ ಮತ್ತು ವ್ಯಥೆ.
ಸಾರ್ವಜನಿಕರು ಬಹಿರ್ದೆಸೆಗೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ವೇದಾವತಿ ನಗರದ ಟಿಬಿ ವೃತ್ತದ ಬಳಿಯ ಚಳ್ಳಕೆರೆ ರಸ್ತೆಯಲ್ಲಿ ನಿರ್ಮಿಸಿರುವ ಶೌಚಾಲಯವು ಮಹಿಳೆಯರು, ಮಕ್ಕಳು ಸೇರಿದಂತೆ ಇತರಿಗಾಗಿ ನಿರ್ಮಿಸಲಾದ ಶೌಚಾಲಯ ಬಳಕೆಗೆ ಬರುವ ಮುನ್ನವೇ ಅನಾಥವಾಗಿದೆ.
ಶೌಚಾಲಯಕ್ಕೆ ನೀರಿನ ಸಂಪರ್ಕ ಕಲ್ಪಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಹೀಗಾಗಿ, ಅದಕ್ಕಿನ್ನೂ ಉದ್ಘಾಟನೆಯ ಭಾಗ್ಯ ದೊರೆತ್ತಿಲ್ಲ.
14ನೇ ಹಣಕಾಸು ಯೋಜನೆಯಿಂದ ಶೌಚಾಲಯ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಆ ಯೋಜನೆ ಸ್ಥಗಿತಗೊಂಡು ಅನುದಾನ ವಾಪಸ್ ಹೋದ ನಂತರ ನಗರಸಭೆ ನಿಧಿಯಿಂದಲೇ ಸುಮಾರು 8 ಲಕ್ಷ ರೂ.ಗೆ ಮತ್ತೆ ಟೆಂಡರ್ ಕರೆದು ಶೌಚಾಲಯ ಮಾಡಿ ಹಾಗೆ ಬೀಡಲಾಗಿದೆ. ಕಾಟಚಾರಕ್ಕೆ ಎನ್ನುವಂತೆ ಇಲ್ಲಿ ಶೌಚಾಲಯ ನಿರ್ಮಿಸಿ ಕೈತೊಳೆದುಕೊಳ್ಳಲಾಗಿದೆ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.
ಸುಮಾರು ಎರಡು ವರ್ಷಗಳು ಕಳೆದರೂ ಶೌಚಾಲಯ ಉದ್ಘಾಟನೆ ಆಗದಿರುವುದರಿಂದ ಹೊಸ ಕಟ್ಟಡ ನಿರ್ವಹಣೆ ಇಲ್ಲದೆ ಕಿಟಕಿ, ಬಾಗಿಲುಗಳಿಗೆ ಬಳಸಿದ ಸರಳುಗಳು ತುಕ್ಕು ಹಿಡಿಯಲಾರಂಭಿಸಿವೆ. ಅದರ ಸುತ್ತಲೂ ಕಸ ಹಾಕುವ ಮೂಲಕ ಜನರು ಅಲ್ಲೊಂದು ಕಸದ ಕೊಂಪೆಯನ್ನೇ ನಿರ್ಮಿಸಿದ್ದಾರೆ. ಹೀಗಾಗಿ ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಇದೆ.
ಶೌಚಾಲಯದ ಬೀಗ ತೆರೆಯದ್ದರಿಂದಾಗಿ ಸುತ್ತಲಿನ ಜಾಗವನ್ನು ಜನರು ಬಯಲು ಶೌಚಾಲಯವನ್ನಾಗಿಸಿಕೊಂಡಿದ್ದಾರೆ. ಇದರಿಂದಾಗಿ ಸುತ್ತಲಿನ ಪರಿಸರವೆಲ್ಲ ಹಾಳಾಗಿ ಹೋಗಿದೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಇದ್ಯಾವುದೂ ಕಾಣುತ್ತಿಲ್ಲ. ನಗರದಲ್ಲಿ ಬೆರಳೆಣೆಕೆಯಷ್ಟು ಸಾರ್ವಜನಿಕ ಶೌಚಾಲಯಗಳಿವೆ. ಅವುಗಳು ಸಹ ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಶೌಚಾಲಯ ನಿರ್ಮಾಣ ಮಾಡುವುದರ ಜತೆಗೆ ಸಮರ್ಪಕವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಟ್ಟಾಗಲೇ ಹಣ ಸದ್ಬಳಕೆಯಾದಂತಾಗುತ್ತದೆ.
ಶೌಚಾಲಯವನ್ನು ಜನಪ್ರತಿನಿಧಿಗಳು ಉದ್ಘಾಟನೆ ಮಾಡಬೇಕು ಎಂದೇನಿಲ್ಲ ಸಮರ್ಪಕ ನೀರಿನ ವ್ಯವಸ್ಥೆ ಮಾಡಿ ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಿಕೊಡಲಿ ಆಗ ನಿರ್ಮಾಣ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.
ಟಿಬಿ ವೃತ್ತದಲ್ಲಿನ ಪ್ರವಾಸಿ ಮಂದಿರದ ಕಾಂಪೌಂಡ್ ಗೋಡೆಗೆ ಹೊಂದಿಕೊಂಡಂತಿರುವ ಶೌಚಾಲಯವು ಚಳ್ಳಕೆರೆ ಮಾರ್ಗಕ್ಕೆ ತೆರಳುವ ಬಸ್ ನಿಲ್ದಾಣದ ಸಮೀಪವೇ ಇದೆ. ಸಾರ್ವಜನಿಕರ ಉಪಯೋಗಕ್ಕೆಂದು ಶೌಚಾಲಯ ನಿರ್ಮಿಸಲಾಗಿದ್ದು ಉದ್ಘಾಟನೆ ಆಗಿದ್ದರೆ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲ ಆಗುತ್ತಿತ್ತು. ಆದರೆ ಅದು ಉದ್ಘಾಟನೆಗೊಳ್ಳದೇ ಇರುವುದರಿಂದ ಸಾರ್ವಜನಿಕರು ಶೌಚಾಲಯಕ್ಕೆ ಹೋಗುತ್ತಿಲ್ಲ. ಹೊಸ ಕಟ್ಟಡ ಬೀಗ ಹಾಕಿದ ಸ್ಥಿತಿಯಲ್ಲೇ ಇದೆ.
ಚಳ್ಳಕೆರೆ ರಸ್ತೆಯ ಬಸ್ ನಿಲ್ದಾಣದಲ್ಲಿ ಶೌಚಾಲಯ ನಿರ್ಮಾಣಗೊಂಡಿದ್ದು ಪ್ರಯಾಣಿಕರಿಗೆ ಶೌಚಾಲಯ ಸೌಲಭ್ಯ ಇದ್ದರೂ ಇಲ್ಲದಂತಾಗಿದೆ.
ಹಿರಿಯೂರಿನಿಂದ ಬಳ್ಳಾರಿ ಮಾರ್ಗ ಹೋಗುವ ಪ್ರಯಾಣಿಕರಿಗೆ ಶೌಚಾಲಯ ಇಲ್ಲದಿರುವುದು ತುಂಬಾ ಅಸಹ್ಯಕರವಾಗಿದೆ. ಮೊದಮೊದಲು ಶೌಚಾಲಯ ಕಾಮಗಾರಿ ಅರ್ಧಕ್ಕೆ ನಿಂತಿದ್ದು ನಂತರ ದಿನಗಳಲ್ಲಿ ಪೂರ್ಣಗೊಂಡಿದೆ. ಶೌಚಾಲಯಕ್ಕಾಗಿ ಪ್ರಯಾಣಿಕರು ಸುತ್ತಮುತ್ತ ನೋಡಿ ನಗರದ ಪ್ರವಾಸಿ ಮಂದಿರದ ಕಾಂಪೌಂಡ್ ಬಳಿ ಮಸ-ಮೂತ್ರ ವಿಸರ್ಜನೆ ಮಾಡುವುದರಿಂದ ದುರ್ವಾಸನೆ ಬರುತ್ತಿದೆ.
ಬಸ್ ನಿಲ್ದಾಣದ ಮೇಲ್ಚಾವಣಿ ಕಿತ್ತು ಹೋಗಿದ್ದು ಅಲ್ಲಿ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದಿರುವುದು ಪ್ರಯಾಣಿಕರು ಶಾಪ ಹಾಕುತಿದ್ದಾರೆ. ದೂರದ ಊರುಗಳಿಗೆ ಪ್ರಯಾಣಿಸುವ ಮಹಿಳೆಯರು ಶೌಚಾಲಯಕ್ಕೆ ಹೋಗಬೇಕೆಂದರೆ ಯಾವುದೇ ವ್ಯವಸ್ಥೆ ಇಲ್ಲದಿರುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದರೆ ತಪ್ಪಾಗದು.
ನಗರಸಭೆ ಎಚ್ಚೆತ್ತುಕೊಂಡು ಶೌಚಾಲಯ ಪ್ರಾರಂಭಿಸಿ ಪ್ರಯಾಣಿಕರಿಗೆ ಸಹಕಾರಿಯಾಗಬೇಕಾಗಿದೆ.
“ಶೌಚಾಲಯದ ಅವಶ್ಯಕತೆ ಇದ್ದು ದೂರದ ಊರಿಗೆ ಪ್ರಯಾಣಿಸುವ ಪ್ರಯಾಣಿಕರು ಮಲಮೂತ್ರ ವಿಸರ್ಜನೆಗೆ ಪರದಾಡುತ್ತಾರೆ. ಅದರಲ್ಲೂ ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತದೆ. ಶೌಚಾಲಯ ನಿರ್ಮಾಣಗೊಂಡರು ಸಾರ್ವಜನಿಕರ ಅನುಕೂಲಕ್ಕೆ ಬಿಟ್ಟುಕೊಡದಿರುವುದು ನಗರಸಭೆಯ ನಿರ್ಲಕ್ಷ್ಯತನ ಇರಬಹುದು. ನಗರಸಭೆ ಎತ್ತುಕೊಂಡು ಶೌಚಾಲಯ ಪ್ರಾರಂಭಿಸಿ ಪ್ರಯಾಣಿಕರಿಗೆ ಅನುವು ಮಾಡಿಕೊಡಬೇಕು”.
ರಾಘವೇಂದ್ರ, ಅಧ್ಯಕ್ಷರು, ಅಂಬೇಡ್ಕರ್ ಸ್ವಾಭಿಮಾನಿ ಸೇನೆ, ಹಿರಿಯೂರು.
“ನಗರಸಭೆ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ನಗರಸಭೆಯ ಆರೋಗ್ಯ ಶಾಖೆಗೆ ಇನ್ನೂ ಹಸ್ತಾಂತರಿಸಿಲ್ಲ, ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ನಮಗೆ ಹಸ್ತಾಂತರಿಸಿದರೆ ಸಾರ್ವಜನಿಕರ ಸೇವೆಗೆ ವ್ಯವಸ್ಥೆ ಮಾಡಲಾಗುತ್ತದೆ”.
ಮೀನಾಕ್ಷಮ್ಮ, ಆರೋಗ್ಯಾಧಿಕಾರಿ, ನಗರಸಭೆ, ಹಿರಿಯೂರು.
“8 ಲಕ್ಷ ರೂ.ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಸದ್ಯಕ್ಕೆ ಎಲ್ಲ ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ. ನೀರಿನ ವ್ಯವಸ್ಥೆ ಕಲ್ಪಿಸಿ ಮುಂದಿನ ಎರಡು-ಮೂರು ವಾರಗಳಲ್ಲಿ ಸಾರ್ವಜನಿಕರ ಸೇವೆಗೆ ಅರ್ಪಿಸಲಾಗುತ್ತದೆ”.
ಅರಸು, ಕಿರಿಯ ಇಂಜಿನಿಯರ್, ನಗರಸಭೆ, ಹಿರಿಯೂರು.