ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ವಿದ್ಯಾರ್ಥಿ ದೆಸೆಯಲ್ಲಿ ಕೇವಲ ಓದಿಗೆ ಸೀಮಿತವಾಗದೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಆ ಮೂಲಕ ತಮ್ಮ ಬದುಕಿನ ಅನುಭವ ಹೆಚ್ಚಿಸಿಕೊಂಡು ಉನ್ನತ ಚಿಂತನೆ ಬೆಳೆಸಿಕೊಳ್ಳಬೇಕೆಂದು ಕೊಂಗಾಡಿಯಪ್ಪ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಕ್ಯಾಪ್ಟನ್.ಎನ್. ಶ್ರೀನಿವಾಸ್ ಹೇಳಿದರು.
ಕೊಂಗಾಡಿಯಪ್ಪ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಎನ್. ಸಿ. ಸಿ. ಘಟಕ ಆಯೋಜಿಸಿದ್ದ ಹುಲುಕಡಿ ಬೆಟ್ಟಕ್ಕೆ ಬೈಸಿಕಲ್ ಜಾಥಾ ಮತ್ತು ಪರ್ವತರೋಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕ್ಯಾಪ್ಟನ್ ಶ್ರೀನಿವಾಸ್, ಎನ್. ಸಿ. ಸಿ. ಯ ಈ ರೀತಿಯ ಕಾರ್ಯಗಳು ವಿದ್ಯಾರ್ಥಿಗಳ ಬದುಕಿಗೆ ಆಶಾ ಭಾವನೆಯನ್ನು ತರಲು ಸಹಕಾರಿ ಯಾಗಲಿದೆ. ಉತ್ತಮ ಸಮಾಜ ನಿರ್ಮಿಸುವಲ್ಲಿ ಎನ್. ಸಿ. ಸಿ. ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾದುದು ಎಂದು ಹೇಳಿದರು.
ಕೊಂಗಾಡಿಯಪ್ಪ ಕಾಲೇಜಿನ ಉಪ ಪ್ರಾಂಶುಪಾಲ ಶಿವಶಂಕರ್ ಮಾತನಾಡಿ ಆದುನಿಕ ಬಳುವಳಿಯಲ್ಲಿ ಮೂಲ ಬದುಕಿನ ರೂಡಿಗಳು ಮರೆಯಾಗುತ್ತಿವೆ. ದುಬಾರಿ ವಾಹನ ಹಾಗೂ ಮೊಬೈಲಿನ ಹುಚ್ಚು ಮನಸ್ಸನ್ನು ಬದಲಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಅವಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿ ಬೈಸಿಕಲ್ ಜಾಥಾದ ಮಹತ್ವ ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಲೆಫಿನೆಂಟ್ ಪ್ರವೀಣ್ ಹಾಗೂ ಸಿ. ಟಿ. ಓ. ಶ್ರೀಕಾಂತ್ ಸಿ ಕೆ. ಮತ್ತು ಎನ್ ಸಿ. ಸಿ. ವಿದ್ಯಾರ್ಥಿಗಳು ಹಾಜರಿದ್ದರು.