ಡ್ರೋನ್ ಆಧಾರಿತ ಫೋಟೋ, ವಿಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2024-25
ನೇ ಸಾಲಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಡ್ರೋನ್ ಆಧಾರಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗ ಪಡೆಯಲು ಪರಿಶಿಷ್ಟ ಪಂಗಡದ ಯುವಕ, ಯುವತಿಯರಿಗೆ ಡ್ರೋನ್ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ 12 ಅರ್ಜಿ ಸಲ್ಲಿಸಲು ಕೊನೆಯ ದಿನ.  

ಡ್ರೋನ್ ತರಬೇತಿ ನೀಡಲು ಚಿತ್ರದುರ್ಗ ಜಿಲ್ಲೆಗೆ 356 ಗುರಿ ನಿಗಧಿಪಡಿಸಲಾಗಿದ್ದು, ಅರ್ಜಿ ಸಲ್ಲಿಸಲು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ತರಬೇತಿ ಪಡೆಯಲು ಪುರಷರಿಗೆ 35 ವರ್ಷ, ಮಹಿಳೆಯರಿಗೆ 40 ವರ್ಷ ಮೀರಿರಬಾರದು. ಅಭ್ಯರ್ಥಿಯು ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಕುಟುಂಬದ ವಾರ್ಷಿಕ ಆದಾಯ ರೂ.2.50ಲಕ್ಷ ಮೀರಿರಬಾರದು.

ಮೂಲ ನಿವಾಸಿ ಮತ್ತು ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪರಿಶಿಷ್ಟ ಪಂಗಡ ಸಮುದಾಯದ ಯುವಕ, ಯುವತಿಯರಿಗೆ ಮೊದಲ ಆದ್ಯತೆ ನೀಡಲಾಗುವುದು. ತರಬೇತಿಯ ನೊಂದಣಿ ಸಮಯದಲ್ಲಿ ಕಡ್ಡಾಯವಾಗಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್‍ನ್ನು ಸಲ್ಲಿಸಬೇಕು. ಅಭ್ಯರ್ಥಿಯು ತರಬೇತಿ ನೀಡುವ ಸ್ಥಳಕ್ಕೆ ಬರುವ ಪ್ರಯಾಣ ವೆಚ್ಚ ಹಾಗೂ ತರಬೇತಿ ಅವಧಿಯಲ್ಲಿ ಯಾವುದೇ ಶಿಷ್ಯವೇತನ ನೀಡುವುದಿಲ್ಲ.

ಆಸಕ್ತ ಅರ್ಹ ಅಭ್ಯರ್ಥಿಗಳು ಚಿತ್ರದುರ್ಗ ನಗರದ ಜೆ.ಸಿ.ಆರ್ ಬಡಾವಣೆ, ಗಣಪತಿ ದೇವಸ್ಥಾನದ ಹತ್ತಿರದ ಜಿಲ್ಲಾ ಪರಿಶಿಷ್ಟ ವರ್ಗಗಳವರ ಕಚೇರಿಯಲ್ಲಿ ಅರ್ಜಿ ಪಡೆದು 2024ರ ಡಿ. 12ರ ಸಂಜೆ 5.30ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";