ಕ್ಷಮೆಯಾಚಿಸಿದ ಮೇಲೂ ಸ್ವಾಮೀಜಿ ವಿರುದ್ಧ ಎಫ್‌ಐಆರ್‌ ದಾಖಲು ಖಂಡನೀಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರ ಸ್ವಾಮೀಜಿಯವರು ತಮ್ಮ ಹೇಳಿಕೆ ಹಿಂಪಡೆದಿದ್ದಾರೆ. ಆದರೂ ಅವರ ವಿರುದ್ಧ ದುರುದ್ದೇಶಪೂರ್ವಕವಾಗಿ ಕೇಸು ದಾಖಲಿಸಿ ಎಫ್‌ಐಆರ್‌ಹಾಕಿರುವುದು ಖಂಡಿತಾ ತಪ್ಪು ಎಂದು ಜೆಡಿಎಸ್ ಕಿಡಿಕಾರಿದೆ.

ತಮ್ಮ ಹೇಳಿಕೆಯಿಂದ ಬೇಸರವಾಗಿದ್ದರೆ ವಿಷಾದವಿದೆ ಎಂದು ಪೂಜ್ಯರು ಹೇಳಿದ್ದಾರೆ. ಈ ವಿಚಾರವನ್ನು ಇಲ್ಲಿಗೇ ಕೈಬಿಡಿ ಎಂದು ಕೋರಿದ್ದಾರೆ. ಆದರೆ, ಒಕ್ಕಲಿಗ ವಿರೋಧಿ ಸಿದ್ದರಾಮಯ್ಯ ಅವರು ಮತ್ತು  ಕರ್ನಾಟಕ ಕಾಂಗ್ರೆಸ್   ಸರ್ಕಾರ, ಸಮುದಾಯದ ಸ್ವಾಮೀಜಿಗಳ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ. ಈ ಸರ್ಕಾರ ಒಕ್ಕಲಿಗರ ವಿರುದ್ಧ ವಿಷ ಕಾರುತ್ತಿರುವುದು ಇದೇ ಮೊದಲಲ್ಲ.

ಒಕ್ಕಲಿಗ ವಿರೋಧಿ ಕಾಂಗ್ರೆಸ್‌ಸರ್ಕಾರದ ನಡೆಗೆ ನಮ್ಮ ಧಿಕ್ಕರವಿದೆ. ಶ್ರೀಗಳ ಮೇಲೆ ದಾಖಲಿಸಿರುವ ಎಫ್‌ಐಆರ್‌ವಿಚಾರವಾಗಿ ಕಾಂಗ್ರೆಸ್‌ನಲ್ಲಿರುವ ಒಕ್ಕಲಿಗ ಮಂತ್ರಿಗಳು ಮತ್ತು ಶಾಸಕರು ಜಾಣ ಮೌನಕ್ಕೆ ಶರಣಾಗಿರುವುದು ನಾಚಿಕೆಗೇಡು. ಪ್ರತಿಯೊಂದಕ್ಕೂ ನಾಲಿಗೆ ಹರಿಯಬಿಡುವ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಚೆಲುವರಾಯ ಸ್ವಾಮಿ, ಕೃಷ್ಣಭೈರೇಗೌಡ ಅವರು ಮುಗುಮ್ಮಾಗಿ ಮೌನಕ್ಕೆ ಒಳಗಾಗಿ ಸಮುದಾಯ ಶ್ರೀಗಳನ್ನು ಅಪಮಾನಿಸುತ್ತಿದ್ದರೂ ಸುಮ್ಮನಿರುವುದು ಅಕ್ಷಮ್ಯ.

ಜಾಣಮೌನ ಕುಲದ್ರೋಹಿಗಳ ಗುಣ. ಇಂಥವರಿಗೆ ಮುಂದಿನ ದಿನಗಳಲ್ಲಿ ಒಕ್ಕಲಿಗ ಕುಲಭಾಂದವರು ತಕ್ಕಪಾಠ ಕಲಿಸುವುದು ನಿಶ್ಚಿತ ಜೆಡಿಎಸ್ ಎಚ್ಚರಿಸಿದೆ.
ವಿಜಯೇಂದ್ರ ಖಂಡನೆ-ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಗಳು ತಮ್ಮ ಹೇಳಿಕೆಯ ಕುರಿತಂತೆ ಸೌಹಾರ್ದತೆಯನ್ನು ಪುಷ್ಠೀಕರಿಸಿ ಸೂಕ್ತ ಸ್ಪಷ್ಟನೆ ನೀಡಿ ವಿವಾದಕ್ಕೆ ಇತಿಶ್ರೀ ಹಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಈ ಪ್ರಕರಣವನ್ನು ಇಷ್ಟಕ್ಕೇ ಕೈ ಬಿಡಬಹುದಾಗಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸ್ವಾಮೀಜಿಗಳ ವಿರುದ್ಧ ದೂರು ದಾಖಲಾಗುವಂತೆ ನೋಡಿಕೊಂಡು ಅವರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆಯುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ನೀಚ ರಾಜಕಾರಣ ಮಾಡಲು ಹೊರಟಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

ದೇಶದ್ರೋಹಿಗಳು, ಸಮಾಜ ಘಾತುಕ ಶಕ್ತಿಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಒಬ್ಬ ಸಜ್ಜನಿಕೆಯ ಸಂತರೆಂದು ಕರೆಸಿಕೊಂಡಿರುವ ಹಿರಿಯ ಶ್ರೀಗಳ ಬಾಯ್ತಪ್ಪಿದ ಮಾತು ಕ್ರಿಮಿನಲ್ ಅಪರಾಧದಂತೆ ಕಂಡಿರುವುದು ವಿಪರ್ಯಾಸವೆನಿಸುತ್ತದೆ. ಪೂಜ್ಯ ಶ್ರೀಗಳು ತಾವು ಆಡಿದ ಮಾತುಗಳ ಕುರಿತು ಸೂಕ್ತ ಸ್ಪಷ್ಟನೆ ನೀಡಿ ಮುಸ್ಲಿಂ ಸಮುದಾಯದೊಂದಿಗಿನ ತಮ್ಮ ಬಾಂಧವ್ಯದ ಕುರಿತು ವಿವರಣೆ ನೀಡಿರುವಾಗ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಹಾಗೂ ಹಗರಣಗಳನ್ನು ಮುಚ್ಚಿಕೊಳ್ಳಲು ಸಣ್ಣ ಸಣ್ಣ ಪ್ರಕರಣಗಳನ್ನೂ ದೊಡ್ಡ ವಿವಾದವನ್ನಾಗಿಸಲು ಹೊರಟು ಜನರ ದಿಕ್ಕು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಲೇ ಇದೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಮ ಪೂಜ್ಯ ಚಂದ್ರಶೇಖರನಾಥ ಶ್ರೀಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆದಿರುವ ಈ ಕ್ರಮವನ್ನು ಕರ್ನಾಟಕ ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಅಶೋಕ್ ಖಂಡನೆ-ಸಿದ್ದರಾಮಯ್ಯ ಅವರು ಹೆಸರಿಗೆ ಮಾತ್ರ ಅಹಿಂದ. ಕೇವಲ ಅಲ್ಪಸಂಖ್ಯಾತರನ್ನು ಹಿಡಿದುಕೊಂಡಿದ್ದಾರೆ. ಮುಡಾ ಪ್ರಕರಣದ ಕುರಿತು ಬೆದರಿಕೆ ತಂತ್ರ ಹೂಡಲು ಹಾಸನದಲ್ಲಿ ಸಮಾವೇಶ ಆಯೋಜಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಒಕ್ಕಲಿಗ ಮಠದ ಸ್ವಾಮೀಜಿಗಳ ಮೇಲೆ ಎಫ್‌ಐಆರ್‌ದಾಖಲಿಸಲಾಗಿದೆ
, ಒಕ್ಕಲಿಗ ಸ್ವಾಮೀಜಿಗಳಿಗೆ ಕಿರುಕುಳ ನೀಡಲು ಸಿದ್ದರಾಮಯ್ಯ ಸರ್ಕಾರ ವ್ಯವಸ್ಥಿತ ಸಂಚು ರೂಪಿಸುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

ಮಠಕ್ಕೆ ಭೇಟಿ-
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರ ಸ್ವಾಮೀಜಿಗಳ ವಿರುದ್ಧ ರಾಜ್ಯ ಕಾಂಗ್ರೆಸ್‌ಸರ್ಕಾರ ಎಫ್ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಇಂದು ಮಠಕ್ಕೆ ಭೇಟಿ ನೀಡಿ ಪ್ರಕರಣದ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಶಾಸಕರಾದ ಡಾ.ಅಶ್ವಥ್ ನಾರಾಯಣ
, ಮುಖಂಡರಾದ  ಕಬ್ಬಾಳು ಉಮೇಶ್, ಲಕ್ಷ್ಮೀಕಾಂತ ಉಪಸ್ಥಿತರಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";