ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಡ, ಮಧ್ಯಮ ವರ್ಗದವರ ಆಶಾಕಿರಣ ಎಸ್.ಜೆ.ಎಂ.ಐ.ಟಿ ಎಂದು ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ತಿಳಿಸಿದರು. ಶ್ರೀಗಳು ನಗರದ ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಗ್ರಾಜ್ಯುಯೇಷನ್ ಡೇ-೨೦೨೪ ಪದವಿ ಪ್ರದಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಾ, ಲಿಂಗೈಕ್ಯ ಜಗದ್ಗುರುಗಳಾದ ಮಲ್ಲಿಕಾರ್ಜುನ ಮಹಾಸ್ವಾಮೀಜಿಗಳು ಮಧ್ಯ ಕರ್ನಾಟಕದ ಬಡಮಕ್ಕಳು ಇಂಜಿನಿಯರಿಂಗ್ ಶಿಕ್ಷಣ ಪಡೆಯಬೇಕೆಂಬ ದೂರದೃಷ್ಟಿಯಿಂದ ಎಸ್.ಜೆ.ಎಂ.ಐ.ಟಿ.ಕಾಲೇಜು ಸ್ಥಾಪನೆ ಮಾಡಿದರು.
ಹಣ-ವ್ಯಾಪಾರ ಮಾಡುವ ಉದ್ದೇಶವಿಲ್ಲದೆ ಬಡವರ ಮಕ್ಕಳು ಚೆನ್ನಾಗಿ ಓದಲಿ ಎನ್ನುವ ಸದುದ್ದೇಶದಿಂದ ಶ್ರೀಗಳು ಪ್ರಾರಂಭಿಸಿದ ಕಾಲೇಜು ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡಿ ಸಾವಿರಾರು ಇಂಜಿನಿಯರುಗಳನ್ನು ಹೊರ ತಂದಿದೆ. ತಂದೆ ತಾಯಿ ಒಂದನೇ ತರಗತಿಯಿಂದ ಇಲ್ಲಿಯವರೆಗೆ ಓದಿಸಿ ಈ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಬಹಳಷ್ಟು ವಿದ್ಯಾರ್ಥಿಗಳು ನೂರಾರು ಕನಸುಗಳನ್ನು ಇಟ್ಟುಕೊಂಡಿರುತ್ತೀರ.
ಆತ್ಮಸ್ಥೈರ್ಯ ಹೆಚ್ಚಿಸುವಂತಹ ಮಾಧ್ಯಮ. ನೀವು ಜ್ಞಾನಸಂಪಾದನೆ ಮಾಡಬೇಕು. ನಿಮ್ಮದೇ ಆದಂತಹ ಕ್ರಿಯಾಶೀಲತೆ, ಕೌಶಲ್ಯ ಬಳಸಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು. ಕಲಿತಿರುವ ವಿದ್ಯೆಯಿಂದಲೇ ಅಲ್ಲದೇ ನಿಮ್ಮ ವ್ಯಕ್ತಿತ್ವ, ಪರಿಶ್ರಮದಿಂದ ನಿಮ್ಮ ಬದುಕು ರೂಪಿಸಿಕೊಳ್ಳಬಹುದು. ಶ್ರೀಮಠದ ಆಶ್ರಯದಲ್ಲಿ ಬಿ.ಡಿ.ಜತ್ತಿರವರು, ಜಿ.ಎಸ್.ಶಿವರುದ್ರಪ್ಪನವರು, ನಿಜಲಿಂಗಪ್ಪನಂತಹ ಮಹನೀಯರು ಜಯದೇವ ಹಾಸ್ಟೆಲ್‌ನಲ್ಲಿ ವಿದ್ಯಾಬ್ಯಾಸ ಮಾಡಿದ್ದಾರೆ. ಯಾವ ಸಂಸ್ಥೆ ಜನಸಾಮಾನ್ಯರ, ಬಡವರ ಪರವಾಗಿ ನಿಲ್ಲುತ್ತದೋ ಅದು ನಿಜವಾದ ಸಂಸ್ಥೆ, ಜನಪರವಾದ ಸಂಸ್ಥೆ ಎಂದು ತಿಳಿಸಿದರು.
ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ರಾಷ್ಟ್ರೀಯ ಮೌಲ್ಯಮಾಪನಮಂಡಳಿ ಮಾಜಿ ಸದಸ್ಯ ಡಾ.ವಿಷ್ಣುಕಾಂತ ಎಸ್ ಚಟಪಲ್ಲಿ ಮಾತನಾಡಿ, ನಾನು ಇದೇ ಕಾಲೇಜಿನಲ್ಲಿ ೧೨ ವರ್ಷಗಳ ಕಾಲ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದು, ನಾನು ಬದುಕು ಕಟ್ಟಿಕೊಳ್ಳಲು ವೃತ್ತಿ ಜೀವನ ಪ್ರಾರಂಭಿಸಿದ ಕಾಲೇಜಿಗೆ ಈಗ ಪದವಿ ಪ್ರಮಾಣ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿರುವುದು ಸಂತಸದ ವಿಷಯ. ಇಂಜಿನಿಯರಿಂಗ್‌ನ ಮೂಲ ವಿಭಾಗಗಳೆಂದರೆ ಸಿವಿಲ್, ಎಲೆಕ್ಟ್ರಿಕಲ್ ಹಾಗೂ ಮೆಕ್ಯಾನಿಕಲ್ ವಿಭಾಗಗಳು.
ಒಂದು ಸಂಸ್ಥೆಯ ಗುಣಮಟ್ಟವನ್ನು ತಿಳಿಯಲು ರಾಷ್ಟ್ರೀಯ ಮೌಲ್ಯಮಾಪನ ಮಂಡಳಿ ಮೌಲ್ಯಮಾಪನ ಮಾಡುತ್ತದೆ. ಪ್ರತಿ ೫ ವರ್ಷದ ಕಾಲಾವಧಿಗೆ ಮೌಲ್ಯಮಾಪನ ಮಾಡಿ ಶ್ರೇಣಿ ನಿರ್ಧರಿಸಲಾಗುತ್ತದೆ. ೨೦೧೯ರಲ್ಲಿ ಎಸ್.ಜೆ.ಎಂ.ಐ.ಟಿ ನ್ಯಾಕ್ ಮಾನ್ಯತೆ ಪಡೆದುಕೊಂಡಿತ್ತು. ಈಗ ೨೦೨೪ರಲ್ಲಿ ಮಾನ್ಯತೆ ಮುಂದಿನ ಐದು ವರ್ಷದವರೆಗೆ ವಿಸ್ತರಿಸಲಾಗಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ ಕಾಲೇಜಿನ ಗುಣಮಟ್ಟ ವೃದ್ಧಿಯಾಗಿದೆ. ಉತ್ತಮ ಮೂಲಭೂತ ಸೌಕರ್ಯ ಹೊಂದಿದೆ. ನೀವು ಉದ್ಯೋಗಕ್ಕೆ ಕಾಯದೇ ಅಪ್ರೆಂಟಿಸ್‌ಶಿಪ್ ಮಾಡಿಕೊಂಡಲ್ಲಿ ಉತ್ತಮ.
ಚನೈನ ಬೋರ್ಡ್ ಆಫ್ ಅಪ್ರೆಂಟಿಸ್‌ಶಿಪ್ ಟ್ರೈನಿಂಗ್ ನೋಂದಾಯಿಸಿಕೊಂಡು ಅಪ್ರೆಂಟಿಸ್‌ಶಿಪ್ ಮಾಡಿಕೊಂಡಲ್ಲಿ ತರಬೇತಿ, ಅನುಭವದ ಜೊತೆಗೆ ತರಬೇತಿ ಭತ್ಯೆ ಪಡೆದುಕೊಳ್ಳುತ್ತೀರಿ. ಪ್ರಧಾನಮಂತ್ರಿ ಇಂರ್ಟನ್‌ಶಿಪ್ ಯೋಜನೆ, ಇಂರ್ಟನ್‌ಶಿಪ್ ಪಾoಶಾಲಾಗಳಲ್ಲಿ ಇಂರ್ಟನ್‌ಶಿಪ್ ಮಾಡಿಕೊಂಡಲ್ಲಿ ಉತ್ತಮ ತರಬೇತಿ ದೊರೆಯುತ್ತದೆ. ನೀವು ಒಂದು ಸ್ಥಳಕ್ಕೆ ಸೀಮಿತರಾಗದೇ ಯಾವುದೇ ಸ್ಥಳದಲ್ಲಿ ಉದ್ಯೋಗ ಸಿಕ್ಕರೂ ಕೆಲಸ ಮಾಡಲು ಸಿದ್ಧರಾಗಿರಬೇಕು. ಸರ್ಕಾರಿ, ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಕೆಲಸ ಪಡೆದುಕೊಳ್ಳಬಹುದು. ಸ್ವ ಉದ್ಯೋಗಿಗಳಾಗಲು ಸರ್ಕಾರದ ಅನೇಕ ಯೋಜನೆಗಳು ಸಬ್ಸಿಡಿಯೊಂದಿಗೆ ಹಣಕಾಸು ಸಹಾಯ ನೀಡುತ್ತವೆ. ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಮುದ್ರಾ ಯೋಜನೆಗಳಲ್ಲಿ ಧನ ಸಹಾಯ ಪಡೆದುಕೊಂಡಲ್ಲಿ ನಿಮಗೆ ಉತ್ತಮ ಉದ್ಯಮ ಮಾಡಲು ಸಹಾಯಕವಾಗುತ್ತದೆ. ಸೂಕ್ತ ಉದ್ಯೋಗ ಪಡೆದು ಬದುಕು ಪ್ರಾರಂಭಿಸಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ.ಭರತ್ ಪಿ ಬಿ ಮಾತನಾಡಿ, ನಾಲ್ಕು ವರ್ಷಗಳ ಕಾಲ ನಿಮ್ಮ ಪರಿಶ್ರಮ ಹಾಗೂ ಸಮರ್ಪಣಾ ಮನೋಭಾವದಿಂದ ಈ ಇಂಜಿನಿಯರಿಂಗ್ ಪದವಿ ಗಳಿಸಿದ್ದೀರಿ. ಹೊಸ ಬದುಕಿನೆಡೆಗೆ ಕಾಲಿಡುತ್ತಿದ್ದೀರಿ. ನೀವು ೪ ವರ್ಷಗಳ ಕಾಲಮಾನದಲ್ಲಿ ಪಡೆದ ಶಿಕ್ಷಣ, ಕೌಶಲ್ಯ ಪರಿಣಿತಿ, ನಿಮ್ಮ ಮುಂದಿನ ಉದ್ಯೋಗ ಬದುಕಿಗೆ ಸಹಕಾರಿಯಾಗಲಿ ಎಂದರು.
ಡಾ.ಸತೀಶ್ ಜೆ ಪ್ರತಿಜ್ಞಾವಿಧಿ ಬೋಧಿಸಿದರು. ಸಮಾರಂಭದಲ್ಲಿ ೨೦೦ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.
ಸಮಾರಂಭದಲ್ಲಿ ವಿವಿಧ ಇಲಾಖೆ ಮುಖ್ಯಸ್ಥರುಗಳಾದ ಡಾ.ಕುಮಾರಸ್ವಾಮಿ ಬಿ ಜಿ, ಡಾ.ಕೃಷ್ಣಾರೆಡ್ಡಿ ಕೆ ಆರ್, ಡಾ.ಸಿದ್ಧೇಶ್ ಕೆ ಬಿ, ಡಾ.ಶ್ರೀಶೈಲ ಜೆ ಎಂ, ಡಾ.ಶಿವಕುಮಾರ್ ಎಸ್ ಪಿ, ಡಾ.ಲೋಕೇಶ್ ಹೆಚ್ ಜೆ, ಪ್ರೊ. ಶಶಿಧರ್ ಎ ಪಿ, ಡಾ.ನಿರಂಜನ್ ಈ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಣತಿ ಪ್ರಾರ್ಥಿಸಿ, ಡಾ.ದೇವಿಕ ಬಿ ಜಿ, ಸ್ವಾಗತಿಸಿ, ಪ್ರೊ.ಸುಷ್ಮಿತಾದೇಬ್ ನಿರೂಪಿಸಿ, ಪ್ರೊ.ಅನುಷಾ ವಿ ವಂದಿಸಿದರು.