ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2012ರಲ್ಲಿ ಅಂದಿನ ಬಿಜೆಪಿ ಸರ್ಕಾರ ವಕ್ಫ್ ಆಸ್ತಿ ದುರ್ಬಳಕೆ, ದುರುಪಯೋಗ, ಅತಿಕ್ರಮಣದ ಬಗ್ಗೆ ತನಿಖೆ ನಡೆಸಲು ಅಂದಿನ ಉಪಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಆನಂದ್ ಅವರ ನೇತೃತ್ವದ ತನಿಖಾ ತಂಡ ರಚನೆ ಮಾಡಿ ಆದೇಶ ಹೊರಡಿಸಿತ್ತು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಉಪಲೋಕಾಯುಕ್ತ ಆನಂದ್ ಅವರ ನೇತೃತ್ವದ ತಂಡ ಪ್ರತಿ ಜಿಲ್ಲೆಗೆ ಸಂಬಂಧಿಸಿದಂತೆ ಪ್ರತ್ಯೇಕ ವರದಿ ನೀಡಿ ಪ್ರತಿ ಪ್ರಕರಣದಲ್ಲಿ ವಿವಿಧ ರೀತಿಯ ಕ್ರಮ ಜರುಗಿಸಲು ಶಿಫಾರಸ್ಸು ಮಾಡಿ 10 ಸಂಪುಟಗಳಿಗೂ ಹೆಚ್ಚಿನ ವಿಸ್ತೃತ ವರದಿಯನ್ನ 2016ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಿಸಿತ್ತು ಎಂದು ಅವರು ತಿಳಿಸಿದ್ದಾರೆ.
ಆದರೆ ಅಂದಿನ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಆ ವರದಿಯ ಅನುಸಾರ ಕ್ರಮ ಕೈಗೊಳ್ಳುವುದಿರಲಿ, 2012ರಲ್ಲಿ ಈ ತನಿಖೆಗೆ ಆದೇಶ ಮಾಡಿದ್ದ ಕರ್ನಾಟಕ ಬಿಜೆಪಿ ಸರ್ಕಾರದ ಆದೇಶವನ್ನೇ ರದ್ದುಗೊಳಿಸಿ, ಆ ವರದಿ ದಾಖಲೆ ಆಗುವುದನ್ನ ತಪ್ಪಿಸಿತ್ತು ಎಂದು ಅವರು ದೂರಿದ್ದಾರೆ.
ಉಪಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಆನಂದ್ ಅವರು ನೀಡಿರುವ ವರದಿ ಅಂಗೀಕರಿಸಿ ಸದನದಲ್ಲಿ ಮಂಡಿಸಲು ರಾಜ್ಯಪಾಲರಿಗೆ ಬಿಜೆಪಿ ಪಕ್ಷದ ವತಿಯಿಂದ ಮನವಿ ಸಲ್ಲಿಸಲ್ಲಿದ್ದೇವೆ. ಈ ಲೋಕಾಯುಕ್ತ ವರದಿಯನ್ನ ಮುಚ್ಚಿಡುವ ಕಾಂಗ್ರೆಸ್ ಸರ್ಕಾರದ ಹುನ್ನಾರವನ್ನು ಬಯಲು ಮಾಡಿ ಸತ್ಯಾಂಶವನ್ನ ಜನರ ಮುಂದಿಡುತ್ತೇವೆ ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.