ಚಂದ್ರವಳ್ಳಿ ನ್ಯೂಸ್, ಹೆಬ್ಬೂರು:
ಕನ್ನಡಕ್ಕೂ ಮತ್ತು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಒಂದು ನಂಟಿದೆ ಎಂದು ಮುಖಂಡರು ಹಾಗೂ ತುಮಕೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯರಾದ ಮಂಜುನಾಥ್ ಹೆತ್ತೇನಹಳ್ಳಿ ತಿಳಿಸಿದರು.
ಹೋಬಳಿಯ ಅಂಬೇಡ್ಕರ್ ಆಟೋ ಚಾಲಕರ ಸಂಘದಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾಷಾವಾರು ಪ್ರಾಂತ್ಯಗಳ ಸ್ವಾಯತ್ತತೆ ಬಗ್ಗೆ ಅಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಸಭೆಯಲ್ಲಿ ಮಾತನಾಡಿದ್ದರು. ಇಲ್ಲದಿದ್ದರೆ ಇಂತಹ ಹೆಮ್ಮೆಯ ಕರುನಾಡನ್ನು ಕಟ್ಟಿಕೊಳ್ಳಲು ನಮಗೆ ಸಾಧ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಭಾರತ ಆಚಾರ, ವಿಚಾರ ಹಾಗೂ ಭಾಷೆಗಳಲ್ಲಿ ವೈವಿಧ್ಯತೆಯನ್ನು ಹೊಂದಿರುವ ದೇಶವೆಂದು ಅಂಬೇಡ್ಕರ್ ಅವರಿಗೆ ತಿಳಿದಿತ್ತು. ಇಂತಹ ವೈವಿಧ್ಯಮಯ ದೇಶ ಸಂವಿಧಾನದ ಮೂಲಕ ಮಾತ್ರವೇ ಏಕತೆ ಸಾಧಿಸಲು ಸಾಧ್ಯ ಎಂದು ಅವರಿಗೆ ತಿಳಿದಿತ್ತು ಎಂದು ಹೇಳಿದರು.
ನಮ್ಮ ದೇಶವನ್ನು ಹೊರತು ಪಡಿಸಿ ಇಡೀ ಪ್ರಪಂಚ ಬಾಬಾ ಸಾಹೇಬರನ್ನು ನೋಡಿದ್ದು ಜ್ಞಾನದ ದೃಷ್ಟಿಯಿಂದ ಮಾತ್ರ. ಬಾಬಾ ಸಾಹೇಬರ ವಿವೇಚನೆಗೆ ಬರದಂತಹ ಯಾವ ವಿಷಯಗಳೂ ಈ ಪ್ರಪಂಚದಲ್ಲಿ ಇಲ್ಲ. ವರ್ಷದ 365 ದಿನಗಳು ಹಾಗೂ ದಿನದ 24 ಗಂಟೆಯೂ ಒಬ್ಬ ವ್ಯಕ್ತಿ ಬಗ್ಗೆ ನಿರಂತರ ಸಂಶೋಧನೆಗಳು ನಡೆಯುತ್ತಿದ್ದರೆ ಅದು ಡಾ.ಬಾಬಾ ಸಾಹೇಬ್ ಅವರ ಬಗ್ಗೆ ಮಾತ್ರ. ಇತಿಹಾಸ, ಅರ್ಥಶಾಸ್ತ್ರ, ಕಾನೂನುಶಾಸ್ತ್ರ ಹೀಗೆ ಎಲ್ಲ ವಿಷಯಗಳನ್ನು ಅಧ್ಯಯನ ಮಾಡಬೇಕೆಂದರೆ ಅಂಬೇಡ್ಕರ್ ಅವರನ್ನು ಓದಬೇಕು ಎಂದು ಸಲಹೆ ನೀಡಿದರು.
ಕನ್ನಡ ಎಂಬ ಭಾಷೆಯೇ ಸುಂದರ. ನಮ್ಮ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಈಗ ಕನ್ನಡದ ಕುರಿತಾಗಿ ದೊರೆತಿರುವ ತಾಳುಗುಂದ ಶಾಸನವು ಹಲ್ಮಿಡಿ ಶಾಸನಕ್ಕೂ ಹಿಂದಿನ ಇನ್ನೂರು ವರ್ಷದ ಇತಿಹಾಸವನ್ನು ಹೇಳಲಿದೆ ಎಂದು ಭಾವಿಸುತ್ತೇನೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ ಎಂಬುದು ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಸಾರುತ್ತದೆ. ಮೂರನೇ ಶಾಸ್ತ್ರೀಯ ಸ್ಥಾನಮಾನವನ್ನೂ ಪಡೆದಿರುವ ಭಾಷೆ ಎಂದರೆ ಅದು ಕನ್ನಡ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕನ್ನಡ ಎಂದರೆ ರೋಮಾಂಚನ, ಕವಿ ಪುಂಗವರ ಪ್ರಕಾರ ಬಹುತೇಕ ದಕ್ಷಿಣ ಭಾರತನ್ನು ಕನ್ನಡ ನಾಡು ಎಂದು ಕರೆಯಲಾಗುತ್ತಿತ್ತು. ಆಲೂರು ವೆಂಕಟರಾಯರ ನೇತೃತ್ವದಲ್ಲಿ ಕನ್ನಡದ ಏಕೀಕರಣ ಶುರುವಾಯಿತು. ಅವರೊಂದಿಗೆ ಹಲವಾರು ಮಹನೀಯರು ತಮ್ಮ ತನು, ಮನ, ಧನ ಅರ್ಪಿಸಿ ನಮಗೆ ಸುಂದರವಾದ ಕನ್ನಡ ದೇಶವನ್ನು ಕಟ್ಟಿಕೊಟ್ಟಿದ್ದಾರೆ ಎಂದು ಇತಿಹಾಸ ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ಕರ್ನಾಟಕ ಕೃಷಿಕ್ ಸಮಾಜ ಕಾರ್ಯಾಧ್ಯಕ್ಷರು, ಚಿಕ್ಕಣ್ಣ ಸ್ವಾಮಿ ಧರ್ಮದರ್ಶಿಗಳು ಪೂಜ್ಯ ಪಾಪಣ್ಣ, ಕೆಂಪಮ್ಮ ದೇವಿಯ ಪ್ರಧಾನ ಅರ್ಚಕ ಹಾಗೂ ತಾಪಂ ಮಜಿ ಸದಸ್ಯರಾದ, ಕೆಂಪ ಹನುಮಣ್ಣ, ಮುಖಂಡರಾದ ಕೆ.ಬಿ.ರಾಜಣ್ಣ, ರಂಗಣ್ಣ, ಕೃಷ್ಣ, ದೇವರಾಜ್, ಶಂಕರ್, ಚಿಕ್ಕಣ್ಣ, ನರಸಪ್ಪ ಹಾಗೂ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಗಿರೀಶ್ ಹಾಗೂ ಮಲ್ಲೇಶ್, ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.