ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಾಸನದಲ್ಲಿ ನಡೆಸಲುದ್ದೇಶಿಸಿರುವ ಕಾಂಗ್ರೆಸ್ ಪಕ್ಷದ ಸಮಾವೇಶದ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿ, ಚರ್ಚಿಸಲಾಯಿತು.
ಕಾಂಗ್ರೆಸ್ ಪಕ್ಷಕ್ಕೆ ಒಂದು ದೊಡ್ಡ ಇತಿಹಾಸವಿದ್ದು, ನಮ್ಮ ಜನಪರ ಕಾರ್ಯಕ್ರಮಗಳನ್ನು ಜನರು ಮೆಚ್ಚಿದ್ದಾರೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜನರು ನಮ್ಮ ಪಕ್ಷವನ್ನು ಗೆಲ್ಲಿಸಿದ್ದಾರೆ. ನಮ್ಮ ಕಾರ್ಯಕ್ರಮಗಳನ್ನು ಬೆಂಬಲಿಸಿ ಜನರು ಅಭಿನಂದನೆ ಸಲ್ಲಿಸಲು ಮುಂದೆ ಬಂದಿದ್ದಾರೆ. ಹಾಗಾಗಿ ಈ ಸಮಾವೇಶ ಮುಖ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಎಲ್ಲಾ ಕಡೆ ಈ ಸಮಾವೇಶ ನಡೆಸಿ ನಮ್ಮ ಗ್ಯಾರಂಟಿಗಳ ಕುರಿತು ಮಾಹಿತಿ ನೀಡಬೇಕಿದೆ. ಇದಲ್ಲದೆ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಣೆ ಕೂಡ ಹಮ್ಮಿಕೊಂಡಿದ್ದೇವೆ. ಹಾಗಾಗಿ ಸೋಮವಾರ ನಡೆಯುವ ಮತ್ತೊಂದು ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಸಿದ್ದು-ಡಿಕೆಶಿ ಬಣಗಳಲ್ಲಿ ಗೊಂದಲ ಗುದ್ದಾಟ-
ಕಾಂಗ್ರೆಸ್ನಲ್ಲೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣದ ನಡುವಿನ ಮುಸುಕಿನ ಗುದ್ದಾಟ ಶುರುವಾದಂತಿದೆ.
ಹಾಸನ ಸಮಾವೇಶದ ವಿಚಾರವಾಗಿ ಸಿಎಂ -ಡಿಸಿಎಂ ಬಣಗಳ ನಡುವೆ ಜಂಗೀಕುಸ್ತಿ ಶುರುವಾಗಿದೆ. ಶೋಷಿತ ವರ್ಗಗಳು ಒಕ್ಕೂಟ ಇದೇ ಡಿಸೆಂಬರ್ 5ರಂದು ಹಾಸನದಲ್ಲಿ ಸಮಾವೇಶ ಮಾಡಲು ಮಾಡಲು ತೀರ್ಮಾನಿಸಿತ್ತು. ಆದ್ರೆ, ಇದಕ್ಕೆ ಡಿಕೆ ಶಿವಕುಮಾರ್ ಬಣ ಆಕ್ಷೇಪ ವ್ಯಕ್ತಪಡಿಸಿದ್ದು, ಪಕ್ಷದ ವೇದಿಯಲ್ಲೇ ನಡೆಯಬೇಕೆಂದು ಹೈಕಮಾಂಡ್ಗೆ ಪತ್ರ ಬರೆಯಲಾಗಿದೆ.
ಇದರ ಬೆನ್ನಲ್ಲೇ ಇದೀಗ ಹೈಕಮಾಂಡ್, ಶೋಷಿತ ವರ್ಗಗಳು ಒಕ್ಕೂಟ ಹಾಗೂ ಪಕ್ಷದ ಜಂಟಿ ಆಶ್ರಯದಲ್ಲಿ ಸಮಾವೇಶ ಮಾಡುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ಅಲರ್ಟ್ ಆದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮಾವೇಶವನ್ನು ಟೇಕ್ ಓವರ್ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸಿಎಂ, ಕಾಂಗ್ರೆಸ್ ಗ್ಯಾರಂಟಿ ಎಂದು ಬದಲಿಸಿದ್ದಾರೆ.
ಇತ್ತ ಸಿಎಂ ಮುಡಾ ಹಗರಣ ಪ್ರಕರಣದ ಆರೋಪಕ್ಕೆ ವಿರೋಧಿಗಳಿಗೆ ತಿರುಗೇಟು ನೀಡಲು ಮುಂದಾಗಿದ್ದಾರೆ. ಹಾಸನದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು.
ಸಿಎಂ ಸಿದ್ದರಾಮಯ್ಯ ಆಪ್ತರು ಸಮಾವೇಶ ನಡೆಸಲು ನಿರ್ಧರಿಸಿದ್ದರು. ಆದರೆ, ಸ್ವಪಕ್ಷದಲ್ಲೇ ಆಕ್ಷೇಪಗಳು ವ್ಯಕ್ತವಾಗಿದ್ದು, ಪಕ್ಷದ ವೇದಿಕೆಯಲ್ಲೇ ಸಮಾವೇಶ ನಡೆಯಬೇಕೆಂಬ ಕೂಗುಗಳು ಕೇಳಿಬಂದಿದ್ದು, ಈ ಕೂಗು ಹೈಕಮಾಂಡ್ಗೂ ಕೇಳಿಸಿದೆ. ಹೀಗಾಗಿ ಹೈಕಮಾಂಡ್ ಪಕ್ಷವನ್ನೂ ಸಹ ಸೇರಿಸಿಕೊಕೊಂಡು ಈ ಸಮಾವೇಶ ಮಾಡಬೇಕೆಂದು ಸೂಚನೆ ನೀಡಿದೆ. ಹೀಗಾಗಿ ಸಮಾವೇಶದ ಹೊಣೆಗಾರಿಕೆ ಹೊತ್ತುಕೊಂಡಿರುವ ಡಿಕೆ ಶಿವಕುಮಾರ್, ಹಳೇ ಮೈಸೂರು ಭಾಗದ ಶಾಸಕರ ಸಭೆ ನಡೆಸಿ ಸಮಾವೇಶದ ರೂಪುರೇಷೆಗಳನ್ನೇ ಬದಲಿಸಿದ್ದಾರೆ. ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸಿಎಂ, ಕಾಂಗ್ರೆಸ್ ಗ್ಯಾರಂಟಿ ಎಂದು ಬದಲಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಬಣಕ್ಕೆ ನಿರಾಸೆಯಾಗಿದೆ.
ಕಾಂಗ್ರೆಸ್ ನೇತೃತ್ವದಲ್ಲಿ ಸಮಾವೇಶ ಆಯೋಜನೆಗೆ ಹೈಕಮಾಂಡ್ ಸೂಚನೆ ನೀಡಿದ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ನೇತೃತ್ವದಲ್ಲಿ ಭಾನುವಾರ ಪೂರ್ವ ಸಿದ್ಧತಾ ಸಭೆ ನಡೆಸಿದ್ದಾರೆ. ಆದರೆ, ಹಾಸನ ಸಮಾವೇಶದ ನೇತೃತ್ವವಹಿಸಿದ ಯಾವೊಬ್ಬ ಸಚಿವರು ಸಹ ಇದರಲ್ಲಿ ಪಾಲ್ಗೊಳ್ಳದಿರುವುದು ನಾನಾ ಅರ್ಥಗಳಿಗೆ ಕಾರಣವಾಗಿದೆ.
ಡಿಕೆ ಶಿವಕುಮಾರ್ ಸಭೆ ನಡೆಸಿದ್ದರೆ, ಅತ್ತ ಸಿಎಂ ಆಪ್ತ ಸಚಿವರು ಮತ್ತು ಹಾಸನ ಸಮಾವೇಶದ ಜವಾಬ್ದಾರಿ ಹೊತ್ತ ಸಚಿವರೆಲ್ಲ ಮೈಸೂರಿನಲ್ಲಿ ಸಮಾವೇಶದ ಪೂರ್ವ ಸಿದ್ಧತಾ ಸಭೆ ನಡೆಸಿದ್ದಾರೆ. ಆದರೆ, ಡಿಕೆ ಮಾತ್ರ ತನ್ನ ನೇತೃತ್ವದಲ್ಲೇ ಹಾಸನ ಸಮಾವೇಶ ನಡೆಯುತ್ತೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಯಾವುದೇ ಗೊಂದಲವಿಲ್ಲ, ಪಕ್ಷದ ಅಡಿಯಲ್ಲಿ ಹಾಸನ ಸಮಾವೇಶ ನಡೆಯಲಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಸಿಎಂ, ಸಮ್ಮಿಶ್ರ ಸರ್ಕಾರದ ಸಿಎಂ ಅಲ್ಲ. ಕೆಲವರು ವೈಯಕ್ತಿಕವಾಗಿ ಮಾತಾಡಬಹುದು, ಒಂದೇ ಪಕ್ಷ, ಒಂದೇ ಚಿಹ್ನೆ ಸಮಾವೇಶದ ಬಗ್ಗೆ ಎಐಸಿಸಿ ನಾಯಕರ ಜೊತೆಗೂ ಸಹ ಮಾತನಾಡಿದ್ದೇವೆ. ಜನರ ಹಿತಕ್ಕಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ.
ಸರ್ಕಾರದ ಬಗ್ಗೆ ಸುಳ್ಳು ಆರೋಪ ಮಾಡಿದ್ದಕ್ಕೆ ಜನ ಉತ್ತರ ಕೊಟ್ಟಿದ್ದಾರೆ. ನನ್ನ ನೇತೃತ್ವದಲ್ಲೇ ಹಾಸನ ಸಮಾವೇಶ ಮಾಜುತ್ತಿದ್ದೇನೆ. ಎಲ್ಲಾ ಜಿಲ್ಲೆಗಳಲ್ಲೂ ಇದೇ ರೀತಿಯ ಕಾರ್ಯಕ್ರಮ ಮಾಡಲಿದ್ದೇನೆ. ಇದಕ್ಕೆ ಎಐಸಿಸಿ ನಾಯಕರು ಸೂಚನೆ ಕೊಟ್ಟಿದ್ದಾರೆ. ಕಾಂಗ್ರೆಸ್ ಯಾವಾಗಲೂ ಒಂದೇ ಪಾರ್ಟಿ, ಸಿಎಂ ಜತೆ ಮಾತಾಡಿದ್ದೇನೆ ಎಂದು ಕಡ್ಡಿ ಮುರಿದಂತೆ ಹೇಳಿದರು.
ಸಿಎಂ, ಡಿಸಿಎಂ ಬಣ ರಾಜಕೀಯ?
ಸಿಎಂ ಸ್ಥಾನ ಹಂಚಿಕೆ ವಿಚಾರದಲ್ಲಿ ಈ ಹಿಂದೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಬಣ ರಾಜಕೀಯ ಶುರುವಾಗಿತ್ತು. ಈ ಎರಡೂ ಬಣಗಳಿಂದ ಬಹಿರಂವಾಗಿಯೇ ಆರೋಪ ಪ್ರತ್ಯಾರೋಪಗಳು ನಡೆದಿದ್ದು ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು.
ಕೊನೆಗೆ ಇದು ತಾರಕಕ್ಕೇರುತ್ತಿದ್ದಂತೆಯೇ ಹೈಕಮಾಂಡ್ ಮಧ್ಯಪ್ರವೇಶಿಸಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆ ಸಭೆ ನಡೆಸಿತ್ತು. ಅಲ್ಲದೇ ಯಾವುದೇ ಕಾರಣಕ್ಕೂ ಬಹಿರಂಗ ಹೇಳಿಕೆ ನೀಡದಂತೆ ಎರಡೂ ಬಣಕ್ಕೂ ಎಚ್ಚರಿಕೆ ಸಂದೇಶ ರವಾನಿಸಿತ್ತು. ಆದರೆ, ಇದೀಗ ಹಾಸನ ಸಮಾವೇಶದ ಮೂಲಕ ಮತ್ತೆ ಬಣ ರಾಜಕೀಯ ಶುರುವಾಗುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು ಮುಂದೆನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.