ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಾನವ ಜಾತಿ ತಾನೊಂದೆ ವಲಂ ಎಂಬ ಪಂಪಕವಿಯ ವಾಣಿಯಂತೆ ರಾಜ್ಯದಲ್ಲಿ ನೂರಾರು ಜಾತಿ ಉಪಜಾತಿಗಳು ಇದ್ದರೂ ಎಲ್ಲಾ ಸಮುದಾಯಗಳು ಒಂದೇ ನೆಲೆಯಲ್ಲಿ ವಾಸಿಸುವ ಮೂಲಕ ಹೊಂದಾಣಿಕೆ, ಭಾವಕ್ಯತೆ, ಸಮಗ್ರತೆಯಿಂದ ಒಂದೇ ಬಳ್ಳಿಯ ಹೂವುಗಳಂತೆ ಬದುಕುವ ದೇಶದ ಏಕೈಕರಾಜ್ಯ ಕರ್ನಾಟಕ ಆಗಿದೆ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾ ಸಂಘ ಸಕ್ಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಹಾಗೂ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟದಲ್ಲಿ ಅನ್ಯ ಭಾಷಿಕರನ್ನು ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಸಂಸ್ಕೃತಿ ಸಂಸ್ಕಾರದಿಂದ ವಿಶ್ವಕ್ಕೆ ಕರ್ನಾಟಕ ಮಾದರಿ ರಾಜ್ಯವಾಗಿದೆ, ಪ್ರಾದೇಶಿಕ ಭಾಷೆಯಿಂದ ಮಾತ್ರ ನಮ್ಮಲ್ಲಿರುವ ಕಷ್ಟ ಸುಖ, ಸಂತೋಷ, ದುಃಖ ದುಮ್ಮಾನ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ತಾಯಿಯ ಭಾಷೆ ಹಾಗೂ ಎದೆಯ ಭಾಷೆಯಾದ ಕನ್ನಡ ಉಳಿಯಬೇಕಾದರೆ ನಾಡಿನ ಜಲ, ನೆಲ ಸಂಪತ್ತು ರಕ್ಷಣೆಗೆ ನಾವೆಲ್ಲರೂ ಹೋರಾಟ ಮಾಡಬೇಕಿದೆ.
ಮಕ್ಕಳಲ್ಲಿ ಯುವಜನರಲ್ಲಿ ಕನ್ನಡದ ಪ್ರಜ್ಞೆ, ಕನ್ನಡದ ಜಾಗೃತಿ ಮೂಡಿಸಿ ಪ್ರಾದೇಶಿಕ ಭಾಷೆಯ ಉಳುವಿಗೆ ನೆರವಾಗಬೇಕು. ಕನ್ನಡ ಭಾಷೆಗೆ ೨ ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡ ಸಾಹಿತ್ಯ ಬೆಳವಣಿಗೆ ಆದಿ ಕವಿ ಪಂಪನಿಂದ ಹಿಡಿದು ಈಗಿನ ಹಂಪನಾ ವರೆಗೆ ಸಮೃದ್ಧಿಯಾಗಿ ಬೆಳೆದಿದೆ. ಕನ್ನಡ ಭಾಷೆ ಅಭಿವೃದ್ಧಿಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಹಾಗು ವಿವಿಧ ಅಕಾಡೆಮಿಗಳು ಕನ್ನಡ ಪರ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಸಂಗೀತ ಮನಸ್ಸಿಗೆ ಸಂತೋಷ ನೀಡಿ ದುಃಖ, ದುಮ್ಮಾನ, ಸಂಕಟ ವೇದನೆ ದೂರ ಮಾಡಿ ಮನಸ್ಸನ್ನು ಹಗುರಗೊಳಿಸುತ್ತದೆ. ಸಂಗೀತಕ್ಕೆ ರೋಗ ರುಜಿನಿ ದೂರ ಮಾಡುವ, ಮಳೆ ತರಿಸುವ ಶಕ್ತಿ ಇದೆ.
ಆದುದರಿಂದ ಸಂಗೀತವನ್ನು ದಿವ್ಯೌಷಧಿ ಎಂದು ಕರೆಯುತ್ತಾರೆ. ಸಂಗೀತ ಕ್ಷೇತ್ರಕ್ಕೆ ಸಂಗೀತ ಜನಕ ಮಹರ್ಷಿ ಮಾತಂಗ ಮುನಿ, ಭಾರತರತ್ನ ಡಾ. ಭೀಮಸೇನಜೋಷಿ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರು, ಗದುಗಿನ ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜು ಗವಾಯಿಗಳು, ಪುರಂದರ ದಾಸರು, ಕನಕದಾಸರು, ತ್ಯಾಗರಾಜ ಮಹಾಸ್ವಾಮಿಗಳು, ಶರಣರು, ವಚನಕಾರರು ಹಾಗು ತತ್ವಪದಕಾರರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಮಹಮ್ಮದ್ ಜಬೀವುಲ್ಲಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾಗತೀಕರಣ ಆಧುನೀಕರಣ ದಿಂದ ದೇಸೀಯ ಕಲೆಗಳಿಗೆ ಪೆಟ್ಟು ಬಿದ್ದಿದ್ದು, ಈ ನಿಟ್ಟಿನಲ್ಲಿ ಸಂಗೀತ ಗಾನ ಸಂಭ್ರಮದಂತಹ ಕಾರ್ಯಕ್ರಮಗಳು ಜನರಿಗೆ ಬೇಕಾಗಿದೆ.
ಸಂಗೀತ, ಸಾಹಿತ್ಯ, ರಂಗಕಲೆ, ಮಾನವನ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದು, ದೇಶದ ಕಲೆ ಸಂಸ್ಕೃತಿಯ ಅನಾವರಣಕ್ಕೆ ಕಾರಣವಾಗಿದೆ. ಇವುಗಳು ಮನುಕುಲಕ್ಕೆ ಬೇಕಾದ ನೆಮ್ಮದಿ, ಸಾಂತ್ವನ, ಸೌಹಾರ್ಧತೆ, ಸಹಬಾಳ್ವೆ, ಬಾಂಧವ್ಯ ಮತ್ತು ಮಮತೆಯನ್ನು ತಂದುಕೊಡುತ್ತವೆ.
ನಮ್ಮ ಭಾಗದ ಗ್ರಾಮೀಣ ಕಲೆ ಸಾಹಿತ್ಯ ಸಂಗೀತ ರಂಗಭೂಮಿ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಇಂತಹ ಸಂಘ ಸಂಸ್ಥೆಗಳು ಮಾಡುತ್ತಿದ್ದು, ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಸಂಗೀತಗಾನ ಸಂಭ್ರಮದಲ್ಲಿ: ಮದಕರಿಪುರದ ಟಿ.ಶ್ರೀನಿವಾಸಮೂರ್ತಿ ಮತ್ತು ತಂಡದಿಂದ ’ಕನ್ನಡ ಗೀತ ಗಾಯನ’, ಚಿತ್ರದುರ್ಗದ ಬಹುಮುಖಿ ಕಲಾಕೇಂದ್ರದ ಕಲಾವಿದರಾದ ನನ್ನಿವಾಳದ ಹನುಮಂತಪ್ಪ ಪೂಜಾರ್ ಮತ್ತು ತಂಡದಿಂದ ತತ್ವಪದ ಗಾಯನ, ಕಸಪ್ಪನಹಳ್ಳಿಯ ಕೆ.ಜಯಣ್ಣ ಮತ್ತು ತಂಡದಿಂದ ರಂಗ ಗೀತೆ ಗಾಯನವನ್ನು ಕಲಾವಿದರು ಪ್ರಸ್ತುತ ಪಡಿಸಿದರು.
ಮೇಟಿಕುರ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಮ್ಮ ಅಂಜನಾಮೂರ್ತಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ತಾಲ್ಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಜೆ.ನಿಜಲಿಂಗಪ್ಪ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಕ್ಯಾಸಿಯೋ ವಾದಕ ಓ.ಮೂರ್ತಿ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಹನುಮಂತಪ್ಪ ಪೂಜಾರ್, ಹಿರಿಯ ತಬಲ ವಾದಕರಾದ ಆಯಿತೋಳು ಚಂದ್ರಪ್ಪ,
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆಡಳಿತ ಅಧಿಕಾರಿ ಈರಗೋಪಯ್ಯ, ತರಬೇತಿ ಅಧಿಕಾರಿ ಕೆ.ನವೀನ್, ಜಿ.ಟಿ.ಲೋಕೇಶ್, ಅಬ್ದುಲ್ ಸಮದ್, ಬಸವರಾಜ್, ಟಿ.ಮಧು, ಪರ್‍ಹ ತಂಕೀನ್, ಸೈಯದ್ ರಿಯಾಜುದ್ದೀನ್, ಹರೀಶ್, ಮಧುಸೂದನ್, ಚರಣ್, ಅರುಣ್‌ಕುಮಾರ್, ಮಧು, ಶ್ರೀನಿವಾಸ್, ಮಹೇಶ್, ಸಂಜನಾ ಹಾಗೂ ಇತರರು ಉಪಸ್ಥಿತರಿದ್ದರು.