ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಮುಸ್ಲಿಮರ ಮತದಾನದ ಹಕ್ಕಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಅವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಡಿ.2ರಂದು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು.
ಈ ಸಂಬಂಧ ಚಂದ್ರಶೇಖರನಾಥ ಸ್ವಾಮೀಜಿ ಸೋಮವಾರ ಉಪ್ಪಾರಪೇಟೆ ಪೊಲೀಸ್ ಉಪನಿರೀಕ್ಷಕರಿಗೆ ಪತ್ರ ಬರೆದಿದ್ದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಸ್ವಾಮೀಜಿ ಬರದೆ ಪತ್ರದ ಸಾರ ಏನು?
ನಾನು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ವೈದ್ಯರು ಹತ್ತು ದಿನಗಳ ವಿಶ್ರಾಂತಿಗೆ ಸೂಚಿಸಿದ್ದಾರೆ. ಗುಣಮುಖರಾದಲ್ಲಿ ಡಿಸೆಂಬರ್ 18 ರಂದು ವಿಚಾರಣೆಗೆ ಹಾಜರಾಗುತ್ತೇವೆ. ಅಥವಾ ತನಿಖಾಧಿಕಾರಿಗಳೇ ಮಠಕ್ಕೆ ಬಂದು ಹೇಳಿಕೆ ಪಡೆಯಲು ಅಭ್ಯಂತರ ಇಲ್ಲ. ಈಗಾಗಲೇ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಲಾಗಿದೆ. ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಪ್ರಕರಣ ಬೆಳೆಸದೆ ಇಲ್ಲಿಗೆ ಮುಕ್ತಾಯಗೊಳಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಪತ್ರ ಬರೆದಿದ್ದಾರೆ.
ಚಂದ್ರಶೇಖರ್ ಸ್ವಾಮೀಜಿ ಮಾತನಾಡಿ, ಪ್ರಕರಣ ಸಂಬಂಧ ಈಗಾಗಲೇ ಕ್ಷಮೆ ಕೇಳಲಾಗಿದ್ದರೂ ನನ್ನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ನನಗೆ ಹುಷಾರಿಲ್ಲ, ಎಲ್ಲಿಗೂ ಹೋಗುವುದಕ್ಕೆ ಆಗುತ್ತಿಲ್ಲ. ಹೀಗಾಗಿ ನಾನು ವಿಚಾರಣೆಗೆ ಹೋಗುವುದಕ್ಕೆ ಆಗುತ್ತಿಲ್ಲ. ಮಠದವರೆಗೂ ಬಂದು ಪೊಲೀಸರು ನೋಟಿಸ್ ನೀಡಿದ್ದರು. ಪೊಲೀಸರು ಮಠಕ್ಕೆ ಬಂದರೆ ಹೇಳಿಕೆ ಕೋಡುತ್ತೇನೆ ಎಂದು ಸ್ವಾಮೀಜಿ ತಿಳಿಸಿದರು.
ಎಂತೆಂಥ ವಿಷಯಗಳಲ್ಲಿ ಏನೂ ಮಾಡಲ್ಲ, ನನ್ನ ವಿಚಾರಕ್ಕೆ ಕೇಸ್ ಮಾಡಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಅವರನ್ನು ಕರಿಯ ಎಂದವರ ವಿರುದ್ಧ ಕ್ರಮಕೈಗೊಳ್ಳಲಿಲ್ಲ. ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಎಂದವರನ್ನು ಏನೂ ಮಾಡಿಲ್ಲ. ನಾನು ಕ್ಷಮೆ ಕೇಳಿದರೂ ಕೂಡ ಈ ರೀತಿ ಕೇಸ್ ದಾಖಲಿಸಿದ್ದಾರೆ. ಈ ವಯಸ್ಸಿನಲ್ಲಿ ನನಗೆ ಕೇಸ್ ಅಂತಿದ್ದಾರೆ, ಮಠಕ್ಕೆ ಬಂದರೆ ಉತ್ತರ ಕೊಡುತ್ತೇನೆ ಎಂದು ಕೆಂಗೇರಿ ಮಠದಲ್ಲಿ ಸ್ವಾಮೀಜಿ ಅವರು ತಿಳಿಸಿದ್ದಾರೆ.
ದೂರು ಹಿಂಪಡೆಯಲಿ: ಡಿ.ಕೆ.ಸುರೇಶ್
ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಡಿಕೆ ಸುರೇಶ್ ಮಾತನಾಡಿ, ವಿಶ್ವ ಒಕ್ಕಲಿಗ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಈಗಾಗಲೇ ಸ್ವಾಮೀಜಿಗಳು ವಿಷಾದ ವ್ಯಕ್ತಪಡಿಸಿದ್ದಾರೆ. ಭಾರತದ ಸಂವಿಧಾನ ಎಲ್ಲರಿಗೂ ಒಂದೇ ಎಂಬುದನ್ನು ಪರಮ ಪೂಜ್ಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಸ್ವಾಮೀಜಿಗಳು ಸಾಂದರ್ಭಿಕವಾಗಿ ಆ ಮಾತು ಆಡಿದ್ದಾಗಿ ಒಪ್ಪಿಕೊಂಡು ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ಸರ್ಕಾರ ದೂರನ್ನು ದಾಖಲು ಮಾಡಿದೆ. ಸ್ವಾಮೀಜಿ ವಿರುದ್ಧದ ದೂರು ಹಿಂಪಡೆಯಲು ಅಧಿಕಾರಿಗಳಿಗೆ ಸೂಚಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.