ನಿರುದ್ಯೋಗಿ ಯುವಕರಿಗೆ ತರಬೇತಿ ಜೊತೆಗೆ ಉದ್ಯೋಗಾವಕಾಶ: ಶಾಸಕ ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರತಿನಿತ್ಯವೂ ರಾಜ್ಯದಲ್ಲಿ ನಿರುದ್ಯೋಗಿ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಪದವಿ
, ಸ್ನಾತಕೋತ್ತರ ಪದವಿ ಹಾಗೂ ಕೆಲವೊಂದು ತಾಂತ್ರಿಕ ವಿಷಯದಲ್ಲಿ ಪರಿಣಿತಿ ಹೊಂದಿದ್ದರೂ ಉದ್ಯೋಗ ಪಡೆಯಲು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೌಶಲ್ಯ ತರಬೇತಿ ಕೇಂದ್ರಗಳ ಮೂಲಕ ತರಬೇತಿ ನೀಡಿ,

ತರಬೇತಿ ಪಡೆದವರಿಗೆ ವಿದ್ಯಾರ್ಥಿಗಳ ವೇತನ ಜೊತೆಗೆ ಉದ್ಯೋಗಾವಕಾಶವನ್ನು ಸಹ ಒದಗಿಸುವ ವ್ಯವಸ್ಥೆಯನ್ನು ಬೆಳಗಾವಿಯ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯ ಮಾಡುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ರಾಜ್ಯ ಸಣ್ಣಕೈಗಾರಿಕೆ ಅಭಿವೃದ್ದಿ ನಿಗಮ ಅಧ್ಯಕ್ಷ, ಶಾಸಕ  ಟಿ.ರಘುಮೂರ್ತಿ ತಿಳಿಸಿದರು.

ಅವರು, ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ತಾಂತ್ರಿಕ ಶಿಕ್ಷಣ ಇಲಾಖೆಯ ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಣ್ಣಕೈಗಾರಿಕೆ ಅಭಿವೃದ್ದಿ ನಿಗಮ ನನ್ನ ವ್ಯಾಪ್ತಿಗೆ ಬರುತ್ತಿದ್ದು, ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯ ಮೂಲಕ ಕ್ಷೇತ್ರದ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶವನ್ನು ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ. ತಾಂತ್ರಿಕ ಅಧಿಕಾರಿಗಳು ಈಗಾಗಲೇ ನಿರುದ್ಯೋಗಿ ಯುವಕರ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ಧಾರೆ ಎಂದರು.

ತಾಂತ್ರಿಕ ವಿಶ್ವವಿದ್ಯಾಲಯದ ಕೌಶಲ್ಯ ತರಬೇತಿ ಕೇಂದ್ರದ ನಿರ್ದೇಶಕಿ ಡಾ.ಸಂಧ್ಯಾ ಆರ್.ಅನ್ವೇಕರ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ವಿವಿಧ ಹಂತದಲ್ಲಿ ತಾಂತ್ರಿಕ ನೈಪುಣ್ಯ ತರಬೇತಿ ನೀಡಲಾಗುತ್ತದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ (ಪಾಸ್ ಅಥವಾ ಪೇಲ್), ಪದವಿ, ಸ್ನಾತಕೋತ್ತರ, ಡಿಪ್ಲೊಮೊ, ಇಂಜಿನಿಯರಿಂಗ್ ತರಬೇತಿ ಪಡೆದ ವಿದ್ಯಾರ್ಥಿಗಳು ಇದರ ಸದುಯೋಗ ಪಡೆದುಕೊಳ್ಳಬಹುದಾಗಿದೆ.

ತರಬೇತಿ ನಂತರ ಅವರಿಗೆ ವಿಶ್ವವಿದ್ಯಾಲಯದಿಂದ ತರಬೇತಿ ಪತ್ರ ನೀಡಲಾಗುವುದು. ಪತ್ರದ ಆಧಾರದ ಮೇಲೆ ವಿವಿಧ ಬ್ಯಾಂಕ್‌ಗಳಮೂಲಕ ಸಾಲ ಪಡೆದು ಸ್ವಯಂ ಉದ್ಯೋಗವನ್ನು ಪಡೆಯುವ ಅವಕಾಶವಿದೆ.  ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಗುಡಿಕೈಗಾರಿಕೆ, ಕುಲಕಸುಬುಗಳ ಬಗ್ಗೆ ಗಮನ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಿಎಂ ವಿಶ್ವಕರ್ಮ, ಸಿಎಂಕೆವಿವೈ(ಮುಖ್ಯಮಂತ್ರಿ ಕರ್ನಾಟಕ ಕೌಶಲ್ಯ ಯೋಜನೆ) ಹೀಗೆ ಹಲವಾರು ರೀತಿಯಲ್ಲಿ ತರಬೇತಿ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಆದ್ದರಿಂದ ಗ್ರಾಮೀಣ ಭಾಗದ ನಿರುದ್ಯೋಗ ಯುವಕರೂ ಸೇರಿದಂತೆ ಎಲ್ಲರೂ ಇದರ ಸದುಪಯೋಗ ಪಡೆಯುವಲ್ಲಿ ಮುಂದಾಗಬೇಕೆಂದು ಮನವಿ ಮಾಡಿದರು.

ಹಣಕಾಸು ಅಧಿಕಾರಿ ಪ್ರಶಾಂತ್‌ ನಾಯಕ, ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ಎಂ.ಎಂ.ಬೆನಾಲ್, ಜಿಟಿಟಿಸಿ ಕಾಲೇಜು ಪ್ರಾಂಶುಪಾಲ ಜಿ.ಆರ್.ತಿಪ್ಫೇಸ್ವಾಮಿ, ಜಿ.ಟಿ.ಶಶಿಧರ, ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಪ್ರಭು ಮುಂತಾದವರು ಉಪಸ್ಥಿತರಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";