ಬಸ್ ಪಲ್ಟಿ ಪತ್ರಕರ್ತೆ ಸೇರಿ ಮೂವರು ಮಹಿಳೆಯರ ಸಾವು

News Desk

ಚಂದ್ರವಳ್ಳಿ ನ್ಯೂಸ್, ಶಿರಾ:
ಚಲಿಸುತ್ತಿದ್ದ ಖಾಸಗಿ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ದೆಹಲಿ ಮೂಲದ ಪತ್ರಕರ್ತೆ ಸೇರಿ ಮೂವರು ಮಹಿಳೆಯರು ಸಾವನ್ನಪ್ಪಿದ್ದು, ಸುಮಾರು ೨೦ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶಿರಾ ತಾಲ್ಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣೆ ಸರಹದ್ದಿನ ರಾಷ್ಟ್ರೀಯ ಹೆದ್ದಾರಿ-೪೮ರಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಮೃತಪಟ್ಟಿರುವವರನ್ನು ದೆಹಲಿ ಮೂಲದ ಪತ್ರಕರ್ತೆ ಊರ್ವಿ ನಯನ್ (೨೫), ಪ್ರಿಯಾಂಕ (೨೫) ಹಾಗೂ ಶುಬಾಳಿ ಸಿಂಗ್ (೨೮) ಎಂದು ಗುರುತಿಸಲಾಗಿದೆ.

ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಮಾರ್ಗಮಧ್ಯೆ ಸೋಮವಾರ ಮುಂಜಾನೆ ೪.೧೫ ರಲ್ಲಿ ಸಿರಾ ತಾಲ್ಲೂಕು ಕಳ್ಳಂಬೆಳ್ಳ ಸಮೀಪದ ಚಿಕ್ಕನಹಳ್ಳಿ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ-೪೮ ರಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಪಲ್ಟಿ ಹೊಡೆದಿದೆ. ಈ ಪರಿಣಾಮ ಬಸ್‌ನಲ್ಲಿದ್ದ ಸುಮಾರು ೨೯ ಪ್ರಯಾಣಿಕರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದ್ದಾರೆ.

ಗಾಯಗೊಂಡಿರುವ ಗಾಯಾಳುಗಳನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ, ಖಾಸಗಿ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಕೊಂಡೊಯ್ದು ದಾಖಲಿಸಲಾಗಿದೆ.

ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಡಿವೈಡರ್ ಗುದ್ದಿ ಉರುಳಿದ ರಭಸಕ್ಕೆ ಪಕ್ಕದ ತುಮಕೂರು ಕಡೆಗೆ ಹೋಗುವ ರಸ್ತೆಗೆ ಬಿದ್ದಿದೆ. ಈ ಅಪಘಾತಕ್ಕೆ ಅತಿ ವೇಗ ಹಾಗೂ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಹೇಳಲಾಗಿದೆ.

ಈ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ-೪೮ರಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಸುದ್ದಿ ತಿಳಿದ ಕೂಡಲೇ ಶಿರಾ ಡಿವೈಎಸ್ಪಿ ಬಿ.ಕೆ. ಶೇಖರ್ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಶ್ರಮಿಸಿದರು.

ನಂತರ ರಸ್ತೆಗೆ ಉರುಳಿ ಬಿದ್ದಿದ್ದ ಬಸ್‌ನ್ನು ಕ್ರೇನ್ ಮೂಲಕ ಮೇಲಕ್ಕೆತ್ತಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

- Advertisement -  - Advertisement -  - Advertisement - 
Share This Article
error: Content is protected !!
";