ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ! ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ! ಎನ್ನುವ ಬಸವಣ್ಣನವರ ವಚನದ ಸಾಲಿನಂತೆ ದೀಪಾವಳಿಯಿಂದ ಆರಂಭವಾದ ಕಾರ್ತಿಕ ಮಾಸವಾದ ಪ್ರಸ್ತುತ ಸಂದರ್ಭದಲ್ಲಿ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಜ್ಞಾನ ದೀಪೋತ್ಸವ ಅರಿವಿನ ಕಾರ್ಯಕ್ರಮ ನಡೆದುಕೊಂಡು ಬಂದಿತ್ತು. ಅದರ ಸಮಾರೋಪ ಸಮಾರಂಭ ಶ್ರೀಮಠದ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾ ವಿಶ್ರಾಂತಿ ತಾಣದಲ್ಲಿ ಶಾಂತವೀರಶ್ರೀಗಳ ಐಕ್ಯ ಮಂಟಪದಲ್ಲಿ ಶ್ರೀಮಠದ ಹರಗುರುಚರಮೂರ್ತಿಗಳು,
ಭಕ್ತರು ಹಾಗೂ ಸಾರ್ವಜನಿಕರು ಶ್ರದ್ಧಾ ಭಕ್ತಿಯಿಂದ ಪುಷ್ಪಾರ್ಚನೆ ಹಾಗೂ ದೀಪಾರತಿ ಮಾಡುವುದರ ಮೂಲಕ ಭಕ್ತಿ ಸಮರ್ಪಿಸಿದರು. ಹಾಗೆ ನಂತರ ವಚನ ಚಿಂತನ ಕಾರ್ಯಕ್ರಮ ನಡೆಯಿತು.
ಶ್ರೀಮಠದ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಶಿರಸಂಗಿ ಮಠದ ಬಸವ ಮಹಾಂತ ಸ್ವಾಮೀಜಿ ಅವರು ಬಹುರೂಪಿ ಚೌಡಯ್ಯನವರ ವಚನ ಉದಾಹರಿಸುತ್ತಾ ಅನುದಿನಗಳೆಂಬವು ಪ್ರಣತೆಯಾಗಿ ,ವರುಷವೆಂಬವು ಭತ್ತಿಯಾಗಿ, ಜೀವ ಜಾತಿಯ ಬೆಳಗು ಬೆಳಗಿನಲರಿಯಬೇಕು,
ಬೆಳಗುಳ್ಳಲ್ಲಿ ಆತ ನಡೆಸಿದಂತೆ ನಡೆಯಬೇಕು, ಬೆಳಗುಳ್ಳಲ್ಲಿ ಆತ ನುಡಿಸಿದಂತೆ ನುಡಿಯಬೇಕು, ಎಣ್ಣೆಯೆಂಬ ಜವ್ವನ ಸವೆಯದ ಮುನ್ನ, ಬೆಳಗು ಕತ್ತಲೆಯಾದ ಮುನ್ನ ರೇಖಣ್ಣ ಪ್ರಿಯ ನಾಗಿನಾಥ ಬೆಳಗ ಬೆಳಗಿನಲರಿಯಬೇಕು ಎಂಬ ಅತ್ಯಂತ ಮಾರ್ಮಿಕ, ಅರ್ಥಪೂರ್ಣ ವಚನವನ್ನು ವಿಶ್ಲೇಷಣೆ ಮಾಡುತ್ತ ನಿಸರ್ಗದ ಸೂರ್ಯ ಯಾವತ್ತೂ ಯಾರ ಮೇಲೂ ಬೇಧ ಭಾವ ಎಣಿಸದೆ ತಾರತಮ್ಯ ತೋರದೆ ಬೆಳಕು ಕರುಣಿಸುವಾಗ, ಮನುಷ್ಯರಾದ ನಾವು ಮಾತೆತ್ತಿದರೆ ನುಡಿಯಲ್ಲಿ ಮಾನವೀಯತೆ, ಅಂತಃಕರಣದ ಮಾತುಗಳನ್ನಾಡುತ್ತಾ ನಡೆಯಲ್ಲಿಯೂ ಅವನ್ನ ಆಚರಣೆಗೆ ತರಬೇಕಿದೆ.
ನಮ್ಮ ಹಬ್ಬಗಳಲ್ಲಿ ಪೂರ್ವಿಕರು ಅಂತರಂಗ ಬಹಿರಂಗ ಶುದ್ದಿಗೆ ಬೇಕಾದ ಆದರ್ಶ ಮೌಲ್ಯಗಳನ್ನು ಕೊಟ್ಟು ಹೋಗಿದ್ದಾರೆ. ಈ ಕಾರ್ತಿಕ ಮಾಸವನ್ನು ನಮ್ಮ ಅಂಕು ಡೊಂಕುಗಳನ್ನ ತಿದ್ದಿಕೊಳ್ಳಲು, ಕತ್ತಲೆಯಿಂದ ಬೆಳಕಿನಡೆಗೆ ಬರಲು ನಮ್ಮನ್ನು ನಾವು ಒಗ್ಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಸಮಾರಂಭದ ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿಯವರು ಮಾತನಾಡುತ್ತಾ ಜಗತ್ತನ್ನ ಉದ್ದರಿಸಲು ಅನೇಕ ದಾರ್ಶನಿಕರು ಮಹನೀಯರು, ಮಹಾತ್ಮರು ಬಂದು ಹೋಗಿದ್ದಾರೆ.
ಅದರಲ್ಲಿ 12ನೇ ಶತಮಾನದ ಬಸವಾದಿ ಶರಣರು ಮುರುಘಾ ಪರಂಪರೆಯ ಪೂಜ್ಯರುಗಳು ಸಮಾಜ ಸುಧಾರಣೆಗಾಗಿ ಈ ನಾಡಿಗೆ ಬೆಳಕನ್ನು ಪಸರಿಸಲು ತಮ್ಮ ಬದುಕನ್ನ ಮೀಸಲಿಟ್ಟು ಶ್ರಮಿಸಿದವರು. ಹಾಗೆ ಪ್ರಸ್ತುತ ಸಂದರ್ಭದಲ್ಲಿ ಹೇಳುವುದಾದರೆ ದೇಹ ಎನ್ನುವ ಪ್ರಣತೆಯಲ್ಲಿ ಜೀವ ಜ್ಯೋತಿ ಎನ್ನುವ ಪ್ರಣತೆ ಇದೆ. ದೀಪದಲ್ಲಿ ಎಣ್ಣೆ ಇರುವ ತನಕ ಅದು ಉರಿಯುತ್ತದೆ. ಹಾಗೆ ದೇಹ ಎನ್ನುವ ಪ್ರಣತಿಯಲ್ಲಿ ಜೀವವಿದೆ ಆ ಪ್ರಣತೆಯಲ್ಲಿನ ಪ್ರಾಣ ವಾಯು ಹಾರುವ ಮುನ್ನ ಸತ್ಕಾರ್ಯಗಳನ್ನು ಮಾಡಬೇಕಿದೆ.
ಪುಣ್ಯ – ಪಾಪಗಳು ಬೇರೆ ಇಲ್ಲ. ಒಳ್ಳೆಯ ಕಾರ್ಯಗಳನ್ನು ಮಾಡುವುದೇ ಪುಣ್ಯ ಕೆಟ್ಟ ಕಾರ್ಯಗಳನ್ನು ಮಾಡುವುದೇ ಪಾಪ ಎಂದು ನುಡಿದ ಅವರು ಸದಾ ಒಳ್ಳೆಯದನ್ನ ಮಾಡುವ ಮುಖಾಂತರ ಬಾಳನ್ನ ಹಸನು ಮಾಡಿಕೊಳ್ಳುವತ್ತ ನಮ್ಮ ಚಿತ್ತ ಇರಬೇಕೆಂದರು.
ಶ್ರೀ ಮಠದ ಮುರುಗೇಂದ್ರ ಸ್ವಾಮಿಗಳವರು ಮಾತನಾಡುತ್ತಾ 12ನೇ ಶತಮಾನದ ಬಸವಾದಿ ಶಿವಶರಣರ ವಚನಗಳೇ ನಮಗೆ ದಾರಿದೀಪ. ಅವುಗಳನ್ನು ಅನುಸರಿಸದರೆ ನಾವು ಸದಾ ಸುಖಿಗಳಾಗಿರಬಹುದು ಎಂದು ನುಡಿದರು.
ಇಂದಿನ ದಾಸೋಹ ಸೇವಾರ್ಥಿಗಳಾದ ಹೋಟೆಲ್ ಉದ್ಯಮೆದಾರರಾದ ಕಿರಣ್ ಕುಮಾರ್ ,ರಶ್ಮಿ ಕಿರಣ್ ಕುಮಾರ ದಂಪತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಎಸ್. ಷಣ್ಮುಖಪ್ಪ ,ಶರಣಯ್ಯ, ಮುರುಗೇಶ್ ವಕೀಲರಾದ ಉಮೇಶ್, ಗುತ್ತಿನಾಡು ಪ್ರಕಾಶ್ ನಾಗರಾಜ್ ಸಂಗಮ್ ಸೇರಿದಂತೆ ವಿವಿಧ ಸಮಾಜದವರು,ಶ್ರೀಮಠದ ಭಕ್ತರು,ವಿದ್ಯಾಪೀಠದ ನೌಕರರು ಭಾಗವಹಿಸಿದ್ದರು.
ಶ್ರೀಮಠದ ವಿದ್ಯಾರ್ಥಿಗಳು ಸಾಮೂಹಿಕ ವಚನ ಪ್ರಾರ್ಥನೆ ನಡೆಸಿಕೊಟ್ಟರು ಲಂಕೇಶ್ ದೇವರು ಸ್ವಾಗತಿಸಿದರು. ಟಿ.ಏನ್ .ಲಿಂಗರಾಜು ಕಾರ್ಯಕ್ರಮ ನಿರ್ವಹಿಸಿದರು.