ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ” ಸ್ವಾಮಿ ವಿವೇಕಾನಂದ…ಭ್ರಷ್ಟ ಆಚಾರ ಎಂಬ ನಂಜು ದೇಹ – ಮನಸ್ಸು – ಸಮಾಜ – ಸರ್ಕಾರವನ್ನು ಸಂಪೂರ್ಣ ವ್ಯಾಪಿಸುವ ಮುನ್ನ…….
ವಿಶ್ವ ಭ್ರಷ್ಟಾಚಾರ ವಿರೋಧಿ ದಿನ ಡಿಸೆಂಬರ್ 9……
2024 ರ ಘೋಷಣೆ ” ಯುವಕರನ್ನು ಭ್ರಷ್ಟಾಚಾರದ ವಿರುದ್ಧ ಒಗ್ಗೂಡಿಸುವುದು ಮತ್ತು ನಾಳೆಯ ( ಭವಿಷ್ಯದ ) ಸಮಗ್ರತೆಯನ್ನು ರೂಪಿಸುವುದು ” ( Uniting with Youth Against Corruption: Shaping Tomorrow’s Integrity”…..)
ಇದರ ಆಚರಣೆ ಮತ್ತು ಆತ್ಮಾವಲೋಕನ ಈಗ ಅತ್ಯಂತ ಅವಶ್ಯಕವಾಗಿದೆ. ಕನಿಷ್ಠ ಭ್ರಷ್ಟಾಚಾರ ಮುಕ್ತ ದಿನವನ್ನಾದರೂ ಆಚರಿಸೋಣವೇ…..ಅಂದರೆ ಪ್ರಾರಂಭಿಕ ಹಂತದಲ್ಲಿ ಒಂದು ದಿನ ಯಾವುದೇ ರೀತಿಯ ಭ್ರಷ್ಟಾಚಾರ ಮಾಡದೇ ಕೆಲಸ ನಿರ್ವಹಿಸುವುದು……ಈ ವಿಷಯದಲ್ಲಿ ಸದ್ಯಕ್ಕೆ ವಿಶ್ವವನ್ನು ಮರೆತು ಭಾರತವನ್ನು ಮಾತ್ರ ನೋಡೋಣ.
ಭೂ ಪ್ರದೇಶದಲ್ಲಿ ಏಳನೆಯ ಸ್ಥಾನ, ಜನಸಂಖ್ಯೆಯಲ್ಲಿ ಮೊದಲನೆಯ ಸ್ಥಾನ, ಪ್ರಜಾಪ್ರಭುತ್ವ ದೇಶಗಳಲ್ಲಿ ಮೊದಲನೇ ಸ್ಥಾನ, ಅತ್ಯಂತ ದೊಡ್ಡ ಸಂವಿಧಾನ, ಬೃಹತ್ ಮತ್ತು ವೈವಿಧ್ಯಮಯ ಜನ, ಸಂಸ್ಕೃತಿ ಹೀಗೆ ಇಲ್ಲಿನ ಸಾಮಾಜಿಕ ರಚನೆಯೇ ಅತ್ಯಂತ ವರ್ಣಮಯ. ಜೊತೆಗೆ ಜಾತಿ ಧರ್ಮ ಭಾಷೆ ಆಹಾರ ಉಡುಪು ಮನೋಭಾವ ಎಲ್ಲದರಲ್ಲೂ ಭಿನ್ನತೆ ಇದೆ. ಆದರೆ ಭ್ರಷ್ಟಾಚಾರ ಮಾತ್ರ ಬಹುಶಃ ಇಡೀ ದೇಶದಲ್ಲಿ ಏಕ ಪ್ರಕಾರವಾಗಿ ಚಲಾವಣೆಯಲ್ಲಿದೆ.
ಬಹಳ ವರ್ಷಗಳ ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಎಚ್.ಎಲ್. ಕೇಶವ ಮೂರ್ತಿ ಅವರ ಒಂದು ಸಣ್ಣ ಕಥೆ ಭ್ರಷ್ಟಾಚಾರದ ನಂಜು ಎಷ್ಟು ಆಳವಾಗಿದೆ ಎಂಬುದನ್ನು ವಿಡಂಬನಾತ್ಮಕವಾಗಿ ಸೂಚಿಸುತ್ತದೆ.
ಒಂದು ಊರಿನಲ್ಲಿ ವಿಪರೀತ ಭ್ರಷ್ಟಾಚಾರ ನಡೆಯುತ್ತಿರುತ್ತದೆ. ಪ್ರತಿಯೊಂದಕ್ಕೂ ಲಂಚ ಕೊಡಲೇ ಬೇಕಾಗಿರುತ್ತದೆ. ಇದರಿಂದ ರೋಸಿ ಹೋದ ಊರಿನ ಜನರೆಲ್ಲಾ ಸೇರಿ ಒಂದು ಸಭೆಯನ್ನು ಮಾಡಿ ತೀರ್ಮಾನಕ್ಕೆ ಬರುತ್ತಾರೆ. ಅದರ ಪ್ರಕಾರ ಹೇಗಿದ್ದರೂ ಲಂಚ ಎಂಬುದು ಬಹಿರಂಗ ಸತ್ಯ. ಅದನ್ನು ಒಪ್ಪಿಕೊಳ್ಳಲು ಸಂಕೋಚ ಏಕೆ. ಆದ್ದರಿಂದ ಇನ್ನು ಮುಂದೆ ಈ ಊರಿನಲ್ಲಿ ಯಾವುದೇ ಸರ್ಕಾರಿ ಕೆಲಸ ಆಗಬೇಕಾದರೆ ಸರ್ಕಾರ ನಿಗದಿಪಡಿಸಿದ ಅಧೀಕೃತ ಶುಲ್ಕದ ಜೊತೆಗೆ ಅನಧಿಕೃತ ಲಂಚದ ಹಣವನ್ನು ಇಂತಿಷ್ಟು ಎಂದು ನಿಗದಿ ಮಾಡಿ ಎಲ್ಲಾ ಕಚೇರಿಗಳಲ್ಲು ಒಂದು ದರ ಪಟ್ಟಿಯನ್ನು ಅಧೀಕೃತವಾಗಿಯೇ ತೂಗು ಹಾಕಲಾಗುತ್ತದೆ. ಆಗ ಎಲ್ಲರೂ ಸರ್ಕಾರ ನಿಗದಿ ಮಾಡಿದ ಹಣ ಮತ್ತು ಲಂಚ ಎರಡನ್ನೂ ಕೊಟ್ಟು ಕೆಲಸ ಮಾಡಿಸಿಕೊಂಡು ಹೋಗುತ್ತಿರುತ್ತಾರೆ. ಉದಾಹರಣೆಗೆ ಖಾತಾ ಮಾಡಿಸಲು 1000 ಹಣ ಅಧೀಕೃತವಾದರೆ ಲಂಚ 5000 ಅಂದರೆ ಒಟ್ಟು 6000 ಹಣ ಕೊಡುವುದು. ಇಲ್ಲಿ ಯಾವುದೇ ಚೌಕಾಸಿ ಇರುವುದಿಲ್ಲ.
ಹೀಗೆ ಕೆಲವು ವರ್ಷ ಎಲ್ಲಾ ಕೆಲಸ ಕಾರ್ಯಗಳು ಸುಗಮವಾಗಿ ನಡೆದುಕೊಂಡು ಹೋಗುತ್ತದೆ. ಕೆಲವು ವರ್ಷಗಳ ನಂತರ ಒಬ್ಬ ವ್ಯಕ್ತಿ ಅಧೀಕೃತ ಮತ್ತು ಅನಧಿಕೃತ ಎರಡೂ ಹಣ ಪಾವತಿಸಿದ ಅನಂತರವೂ ಕೆಲಸ ಆಗುವುದಿಲ್ಲ. ಮತ್ತೆ ಎಂದಿನಂತೆ ಬಹಳ ದಿನ ಅಲೆದಾಡಿಸುತ್ತಾರೆ. ಆಗ ಆ ವ್ಯಕ್ತಿ ಅಧಿಕಾರಿಯನ್ನು ನೇರವಾಗಿ ಕೇಳುತ್ತಾರೆ ” ಸ್ವಾಮಿ ಸರ್ಕಾರದ ಫೀಜು ಮತ್ತು ಲಂಚ ಎರಡೂ ಕೊಟ್ಟ ನಂತರವೂ ನೀವು ಏಕೆ ನಮ್ಮ ಕೆಲಸ ಮಾಡಿಕೊಡುತ್ತಿಲ್ಲ ” ಅದಕ್ಕೆ ಅಧಿಕಾರಿಯ ಉತ್ತರ ” ಅಷ್ಟು ಮಾತ್ರ ಕೊಟ್ಟರೆ ಸಾಕೆ. ಅದರ ಮೇಲೆ ಇನ್ನೊಂದಿಷ್ಟು ಲಂಚ ಕೊಡಬೇಕು ” ಅಂದರೆ ಲಂಚವೂ ಸಹಜವಾಗಿ, ಸಾಮಾನ್ಯವಾಗಿ ಮತ್ತಷ್ಟು ಬೇಡಿಕೆ ಇಡಲಾಗುತ್ತದೆ. ಭ್ರಷ್ಟಾಚಾರ ಎಂಬುದು ಒಂದು ನಂಜು ಇದ್ದಂತೆ. ಅದು ನಿಧಾನವಾಗಿ ಹೆಚ್ಚಾಗುತ್ತಾ ಇಡೀ ದೇಹ ಆಕ್ರಮಿಸಿ ಕೊಳೆಯುವಂತೆ ಮಾಡುತ್ತದೆ. ಈಗ ಇದೇ ಭ್ರಷ್ಟಾಚಾರ ಇಡೀ ಭಾರತೀಯ ಸಮಾಜವೇ ಕೊಳೆಯುವಂತೆ ಮಾಡಿದೆ.
ಕೆಲವು ವರ್ಷಗಳ ಹಿಂದೆ ಸರ್ಕಾರಿ ಉದ್ಯೋಗ ಪಡೆಯಲು ಲಂಚ ನೀಡಬೇಕಾಗಿತ್ತು. ಆದರೆ ಇಂದು ಡೆತ್ ಸರ್ಟಿಫಿಕೇಟ್ ಗೂ, ಬರ್ತ್ ಸರ್ಟಿಫಿಕೇಟ್ ಗೂ ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಲಂಚವನ್ನು ಪರ್ಸೆಂಟೇಜ್ ಲೆಕ್ಕದಲ್ಲಿ ಪಡೆಯಲಾಗುತ್ತದೆ. ಕಡತ ವಿಲೇವಾರಿ ಮಾಡಲು ಲಂಚ ನೀಡಬೇಕಾಗಿದೆ.
ಇದರ ಪರಿಣಾಮ ಭಾರತದ ನಿಜವಾದ ಆತ್ಮಕ್ಕೆ ಧಕ್ಕೆಯಾಗಿದೆ. ಜನರ ದಕ್ಷತೆ ಪ್ರಾಮಾಣಿಕತೆಯೇ ಕುಸಿದಿದೆ. ಸಮಾಜ ಮತ್ತು ಸರ್ಕಾರದ ಮೇಲಿನ ನಂಬಿಕೆಯೇ ಇಲ್ಲವಾಗಿದೆ. ಭ್ರಷ್ಟಾಚಾರ ಮತ್ತು ಜಾತಿ ವ್ಯವಸ್ಥೆ ಭಾರತಕ್ಕೆ ಶಾಪವಾಗಿ ಪರಿಣಮಿಸಿದೆ.
ವಿಶ್ವ ಭ್ರಷ್ಟಾಚಾರದ ದಿನದಂದು ಅದರ ಮೂಲ ಸ್ವರೂಪವನ್ನು ಹುಡುಕುವ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನು ಪಕ್ಷಾತೀತವಾಗಿ ಅವಲೋಕನ ಮಾಡಬೇಕು. ಇಲ್ಲದಿದ್ದರೆ ತಪ್ಪುಗಳ ಪ್ರಮಾಣದ ಮೇಲೆ ಭ್ರಷ್ಟಾಚಾರಿಗಳು ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಂಡು ನಿರಂತರ ವಂಚಕರಾಗುತ್ತಾರೆ. ಮಾಧ್ಯಮಗಳು ಅವರಿಗೆ ಅನುಕೂಲಕರ ವೇದಿಕೆಯನ್ನು ಸೃಷ್ಟಿಸುತ್ತಾರೆ………
ಮೊದಲನೆಯದಾಗಿ, ಕಾನೂನುಗಳ ಸಂಕೀರ್ಣತೆ ಭ್ರಷ್ಟಾಚಾರ ಹೆಚ್ಚಾಗಲು ಒಂದು ಪ್ರಮುಖ ಕಾರಣ. ಜನರನ್ನು ನಂಬದ ಅಧಿಕಾರಿಗಳು, ಅಧಿಕಾರಿಗಳನ್ನು ನಂಬದ ಜನರು ಒಟ್ಟು ಅನುಮಾನ ಪ್ರವೃತ್ತಿಯ ಸ್ವಾರ್ಥ ವ್ಯವಸ್ಥೆಯೇ ಕೆಟ್ಟ ಹಣದ ಹರಿವು ಹೆಚ್ಚಾಗಲು ಒಂದು ಸಾಧನವಾಗಿದೆ. ಅಧಿಕಾರಿಗಳ ಮತ್ತು ರಾಜಕಾರಣಿಗಳ ಶ್ರೇಣೀಕೃತ ಅಧಿಕಾರದ ಹಂಚಿಕೆ, ನಿಯಮಗಳ ಒಳಮರ್ಮವನ್ನು ತಮ್ಮ ಹಣದಾಹಕ್ಕೆ ಬಳಸಿಕೊಳ್ಳುವ ತಂತ್ರಗಾರಿಕೆ ಭ್ರಷ್ಟಾಚಾರ ಸಾರ್ವತ್ರಿಕವಾಗಲು ಕಾರಣವಾಗಿದೆ…
ಎರಡನೆಯದಾಗಿ,ದುಡಿದ ಹಣಕ್ಕಿಂತ ಭ್ರಷ್ಟ ಹಣ ಹೆಚ್ಚು ಸುಲಭವಾಗಿ ಸಿಗುತ್ತದೆ ಮತ್ತು ಆ ಹಣದಿಂದ ನಮ್ಮ ಐಹಿಕ ಸುಖ ಭೋಗಗಳನ್ನು ಸಂತೃಪ್ತಿ ಗೊಳಿಸಿಕೊಳ್ಳಬಹುದು ಎಂಬ ಅಭಿಪ್ರಾಯ ಈ ಆಧುನಿಕ ಕಾಲದಲ್ಲಿ ಬಲವಾಗಿ ಬೇರೂರಿದೆ. ಹಣದಿಂದಲೇ ಚುನಾವಣೆ ಗೆದ್ದು ಅಧಿಕಾರ ಹಿಡಿಯಬಹುದು ಮತ್ತು ಅದರಿಂದ ಮತ್ತಷ್ಟು ಹಣ ಮಾಡಿ ಅದೇ ಅಧಿಕಾರವನ್ನು ಉಳಿಸಿಕೊಳ್ಳಬಹುದು, ಸರ್ಕಾರಿ ಅಧಿಕಾರಿಗಳು ಸಂಬಳದಿಂದ ಸಾಧಿಸಲು ಸಾಧ್ಯವಾಗದ ಭವ್ಯ ಬಂಗಲೆ, ಕಾರು, ವಿದೇಶ ಪ್ರವಾಸ, ತೋಟದ ಮನೆ, ಅನುಕೂಲಕರ ವರ್ಗಾವಣೆ ಎಲ್ಲವೂ ಭ್ರಷ್ಟ ಹಣದಿಂದ ಪಡೆಯಬಹುದು ಎಂಬುದು ಹೆಚ್ಚು ವಾಸ್ತವವಾಗಿದೆ. ಅದಕ್ಕಾಗಿಯೇ ಹೆಚ್ಚು ಹೆಚ್ಚು ಹಣ ಮಾಡಲು ಯಾವುದೇ ದಾರಿಯನ್ನು ಕಂಡುಕೊಳ್ಳುತ್ತಾರೆ……
ಮೂರನೆಯದಾಗಿ, ಸಮಾಜದಲ್ಲಿ ಕುಸಿಯುತ್ತಿರುವ ಮಾನವೀಯ ಮೌಲ್ಯಗಳು, ಹೆಚ್ಚುತ್ತಿರುವ ಕೊಳ್ಳುಬಾಕ ಸಂಸ್ಕೃತಿ, ಹಣದಿಂದಲೇ ನಿರ್ಧಾರವಾಗುವ ನಮ್ಮ ಗೌರವ ಸ್ಥಾನಮಾನ, ಸಂಬಂಧಗಳು, ಆರೋಗ್ಯ, ಶಿಕ್ಷಣ ಮುಂತಾದ ಸೇವೆಗಳು, ಕೊನೆಗೆ ದೇವರ, ದೇವಸ್ಥಾನದ ದರ್ಶನವನ್ನು ಸಹ ಹಣದಿಂದಲೇ ಮಾಡಬಹುದು ( ಪೂಜೆ ಪ್ರಾರ್ಥನೆ ಹೋಮ ಹವನ ) ಎಂಬ ಕಾರಣದಿಂದ ಜನರು ಹಣ ಮಾಡಲು ಭ್ರಷ್ಟ ಮಾರ್ಗಗಳನ್ನು ಹುಡುಕತೊಗಿದರು. ಅದು ಊಹೆಗೂ ನಿಲುಕದ ಹೊಸ ಹೊಸ ಆಯಾಮಗಳನ್ನು ಪಡೆಯಿತು. ಅದು ಎಷ್ಟೆಂದರೆ ಈಗ ಭ್ರಷ್ಟಾಚಾರದ ಮೂಲ ಹುಡುಕುವುದೇ ಸಾಧ್ಯವಿಲ್ಲ ಎನ್ನುವಂತಾಗಿದೆ……
ನಾಲ್ಕನೆಯದಾಗಿ ಮತ್ತು ಬಹುಮುಖ್ಯವಾಗಿ ಭಾರತೀಯ ಸಮಾಜದ ಜಾತಿ ವ್ಯವಸ್ಥೆ ಭ್ರಷ್ಟಾಚಾರದ ಮೂಲವಾಗಿ ಬೇರು ಬಿಟ್ಟಿದೆ. ಹೇಳಿಕೇಳಿ ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಬಹುಮತವೇ ಅತ್ಯಂತ ಪ್ರಮುಖವಾದುದು. ಜಾತಿಯ ಅಭಿಮಾನ ಅಂಧಕಾರ ಮತದಾರರನ್ನು ಕುರುಡಾಗಿಸಿದೆ. ಈ ಜಾತಿ ಪದ್ದತಿ ಭ್ರಷ್ಟಾಚಾರವನ್ನು ಸಮೃದ್ಧವಾಗಿ ಪೋಷಿಸುತ್ತಿದೆ. ಸಂಖ್ಯೆಯ ಪ್ರಬಲ ಜಾತಿಗಳು, ಅದಕ್ಕೆ ಪೂರಕ ಭ್ರಷ್ಟ ಹಣ ಒಟ್ಟು ವ್ಯವಸ್ಥೆಯನ್ನೇ ನಿಯಂತ್ರಿಸುತ್ತಿದೆ…..
ಭ್ರಷ್ಟಾಚಾರ ಕೇವಲ ಹಣ ಆಸ್ತಿ ಅಧಿಕಾರ ಎಂಬ ವಸ್ತು ರೂಪದಲ್ಲಿ ಮಾತ್ರ ಚಲಾವಣೆಯಲ್ಲಿಲ್ಲ. ಅದು ಮಾನಸಿಕವಾಗಿ ಕೂಡ ಕಾರ್ಯಾಚರಣೆಯಲ್ಲಿದೆ. ನಮ್ಮ ರಕ್ತ, ಮೂಳೆ, ಮಾಂಸ, ಉಸಿರು, ಹೃದಯ ಎಲ್ಲವನ್ನೂ ನಿಯಂತ್ರಿಸುವ ಮೆದುಳಿನಲ್ಲಿ ಭ್ರಷ್ಟಾಚಾರ ಅವಿತು ಕುಳಿತಿದೆ. ಅವಕಾಶ ಇಲ್ಲದಿದ್ದಾಗ ಅದು ಪ್ರಾಮಾಣಿಕ ಮುಖವಾಡ ತೊಡುತ್ತದೆ. ಒಮ್ಮೆ ಅವಕಾಶ ಸಿಕ್ಕರೆ ಎಲ್ಲಾ ಮೌಲ್ಯಗಳನ್ನು ಗಾಳಿಗೆ ತೂರಿ ರಾಕ್ಷಸ ರೂಪ ಪಡೆಯುತ್ತದೆ. ಎಲ್ಲಾ ಸಂಸ್ಕಾರ ಸಂಸ್ಕೃತಿಗಳನ್ನು ಆಪೋಶನ ತೆಗೆದುಕೊಳ್ಳುತ್ತದೆ. ಎಲ್ಲವನ್ನೂ ಸಮರ್ಥನೆ ಮಾಡಿಕೊಳ್ಳುವ ಭಂಡತನಕ್ಕೆ ಇಳಿಯುತ್ತದೆ……
ನಮ್ಮ ಸಹಜ ಸುಖ ಸಂತೋಷ ನೆಮ್ಮದಿಯ ಜೀವನಮಟ್ಟವನ್ನೇ ಈ ಭ್ರಷ್ಟಾಚಾರ ನಾಶ ಮಾಡುತ್ತಿದೆ. ಕೆಟ್ಟವರನ್ನು ಬಿಡಿ, ಕನಿಷ್ಟ ಒಳ್ಳೆಯವರು ಒಳ್ಳೆಯವರಾಗಿ ಬದುಕಲು ಸಹ ಈ ಭ್ರಷ್ಟಾಚಾರ ಅವಕಾಶ ನೀಡುತ್ತಿಲ್ಲ. ಇದು ಅತ್ಯಂತ ಅಪಾಯಕಾರಿ ಮತ್ತು ದುರಂತ…….
ಮನುಷ್ಯನ ಆತ್ಮ ಮತ್ತು ಮನಸ್ಸುಗಳನ್ನು ಶುದ್ಧೀಕರಿಸಿ ಅದರ ಮೂಲಕ ಸಮಾಜದ ಮೂಲ ಆಶಯವನ್ನು ಸಾಮೂಹಿಕವಾಗಿ ಪರಿವರ್ತಿಸಿದರೆ, ಭ್ರಷ್ಟಾಚಾರ ಕಡಿಮೆ ಮಾಡುವ ಸಾಧ್ಯತೆ ಇದೆ. ಕೇವಲ ಕಠಿಣ ಕಾನೂನುಗಳಿಂದ ಭಾರತದಂತಹ ಬೃಹತ್ ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಿಸುವುದು ಸಾಧ್ಯವಿಲ್ಲ. ನೀರಿನಂತೆ ಭ್ರಷ್ಟಾಚಾರ ಕೂಡ ಸ್ಥಿತಿಸ್ಥಾಪಕತ್ವ ಗುಣವನ್ನು ಹೊಂದಿದೆ. ಅದು ಸಹಜವಾಗಿಯೇ ತನ್ನ ಸ್ಥಾನ ಸಂಬಂಧಗಳನ್ನು ಅವಶ್ಯಕತೆಗೆ ಅನುಗುಣವಾಗಿ ತಾನೇ ಹುಡುಕಿಕೊಳ್ಳುತ್ತದೆ…..
ಮಂತ್ರಿಗಳ ರಾಜೀನಾಮೆ, ಅಧಿಕಾರಿಗಳ ಮೇಲೆ ದಾಳಿ,
ಮತ್ತಷ್ಟು ಕಠಿಣ ಕಾನೂನು ಮುಂತಾದ ಯಾವುದೂ ಉಪಯೋಗವಿಲ್ಲ. ನೈತಿಕತೆ ಮತ್ತು ಮಾನವೀಯತೆಯ ಆಧಾರದ ಮೇಲೆ ಈ ಸಮಾಜವನ್ನು ಪುನರ್ ರೂಪಿಸಬೇಕಿದೆ. ಧಾರ್ಮಿಕ, ಆಧ್ಯಾತ್ಮಿಕ ಗುರು ಪರಂಪರೆ, ಆರೋಗ್ಯ, ಸಮಾಜ ಸೇವೆ, ಪತ್ರಿಕೋದ್ಯಮ ಸೇರಿ ಎಲ್ಲವೂ ಬಹುತೇಕ ಭ್ರಷ್ಟಗೊಂಡಿರುವಾಗ ಇದರ ನಿರ್ಮೂಲನೆ ತುಂಬಾ ಕಷ್ಟ. ಆದರೆ ಅಸಾಧ್ಯವಲ್ಲ. ಖಂಡಿತ ಕೆಟ್ಟ ಹಣದ ಮಹತ್ವ ಕಡಿಮೆಯಾಗಿ ಶ್ರಮದ ಪ್ರಾಮುಖ್ಯತೆ ಹೆಚ್ಚು ಮಾಡುವ ಮಾನವೀಯ ಮೌಲ್ಯಗಳನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಿದರೆ, ಸಾಮಾನ್ಯ ಜನರಾದ ನಾವುಗಳು ಹಣ ಅಧಿಕಾರಕ್ಕಿಂತ ಮನುಷ್ಯನ ನಿಜವಾದ ಮತ್ತು ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಗೌರವ ಕೊಡುವ ಸರಳ ಮನೋಭಾವ ಪ್ರದರ್ಶಿಸಿದರೆ ಭ್ರಷ್ಟಾಚಾರ ಸಾಕಷ್ಟು ಕಡಿಮೆಯಾಗುತ್ತದೆ…..
ಅದಕ್ಕಾಗಿ ಒಂದು ಸರಳ ಸೂತ್ರ ದಯವಿಟ್ಟು ಅಳವಡಿಸಿಕೊಳ್ಳೋಣ…..
” ಒಳ್ಳೆಯವರ ಪ್ರೋತ್ಸಾಹದ ಮತ್ತು ಜೊತೆ ಜೊತೆಗೆ ಕೆಟ್ಟವರ ತಿರಸ್ಕಾರ ಅಥವಾ ಅದು ಸಾಧ್ಯವಾಗದಿದ್ದರೆ ಕೆಟ್ಟವರ ನಿರ್ಲಕ್ಷ್ಯ ” ಇದು ನಮ್ಮಿಂದ ಸಾಧ್ಯವಾದರೆ ಈ ಸಮಾಜದಲ್ಲಿ ಭ್ರಷ್ಟಾಚಾರ ಕಡಿಮೆ ಆಗುವ ಸಾಧ್ಯತೆ ಇದೆ. ನಮ್ಮ ಜಾತಿಯವನು, ನಮ್ಮ ಪಕ್ಷದವನು, ನಮ್ಮ ಧರ್ಮದವನು, ನಮ್ಮ ಊರಿನವನು ಎಂದು ಕಳ್ಳ ಸುಳ್ಳ ಜೈಲಿಗೆ ಹೋಗಿ ಬಂದವನನ್ನು, ರಾಜಿನಾಮೆ ಕೊಡುವವನನ್ನು ಅತ್ತು ಕರೆದು ಹೆಗಲ ಮೇಲೆ ಹೊತ್ತು ತಿರುಗಿದರೆ ಈ ಸಮಾಜದ ಅಧೋಗತಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ…..
ದಯವಿಟ್ಟು ಸ್ವಾಭಿಮಾನವನ್ನು ಮಾರಿಕೊಳ್ಳಬೇಡಿ. ಅವನು ಯಾರೇ ಆಗಿರಲಿ. ಒಳ್ಳೆಯವನು ಮಾತ್ರ ನಮ್ಮವನು. ಅವನಿಗೆ ಮಾತ್ರ ನಮ್ಮ ಪ್ರೀತಿ ಪ್ರೋತ್ಸಾಹ ಬೆಂಬಲ ಮತ್ತು ನಮ್ಮ ಮತ……..ಆ ಬದಲಾವಣೆಯ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ…..
ಲೇಖನ:ವಿವೇಕಾನಂದ. ಎಚ್. ಕೆ. 9844013068