ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷದೊಳಗಿನ ಕುರ್ಚಿ ಹೋರಾಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನವನ್ನೇ ಆಪೋಶನ ತೆಗೆದುಕೊಳ್ಳಲು ಸಜ್ಜಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಸಿದ್ದರಾಮಯ್ಯ ಅವರಿಗೂ ತಮ್ಮರಾಜಕೀಯ ಸಂಧ್ಯಾ ಕಾಲದಲ್ಲಿದೆ ಎನ್ನುವುದು ಅರಿವಾಗತೊಡಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಸುಳ್ಳು ಗ್ಯಾರಂಟಿಗಳಿಂದ ಕರ್ನಾಟಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಬೇಕಿತ್ತು. ಆದರೆ ಅಹಿಂದ ಹೆಸರಿನಲ್ಲಿ ಕಾಂಗ್ರೆಸ್ ಹೈಕಮಾಂಡನ್ನು ಬೆದರಿಸಿದ್ದ ಸಿದ್ದರಾಮಯ್ಯ ಕೊನೆಗೂ ಒಪ್ಪಂದದ ಮೇರೆಗೆ ಷರತ್ತಿನನ್ವಯ ಸಿಎಂ ಆಗಿದ್ದಾರೆಂದು ಬಿಜೆಪಿ ಲೇವಡಿ ಮಾಡಿದೆ.
ಕಾಂಗ್ರೆಸ್ ಹೈಕಮಾಂಡ್‌ಮಾಡಿದ್ದ ಒಪ್ಪಂದವನ್ನು ಡಿಸಿಎಂ ಡಿಕೆಶಿ ಅವರು ಬಹಿರಂಗಗೊಳಿಸುತ್ತಲೇ, ಸಿದ್ದರಾಮಯ್ಯ ಅವರಿಗೆ ರಾಜಕೀಯ ಅಸ್ಥಿರತೆ ಕಾಡತೊಡಗಿದೆ.ಡಿಕೆಶಿ ಅವರಿಗೂ ಈಗಿಲ್ಲವಾದರೆ ಮುಂದೆಂದು ಎನ್ನುವ ಜಿಜ್ಞಾಸೆ ಕಾಡತೊಡಗಿದ್ದು, ಅದಕ್ಕಾಗಿ ಸಿದ್ದರಾಮಯ್ಯ ಅವರು ಕೆಳಗಿಳಿಯುವುದು ನಿಶ್ಚಿತ ಎಂಬರ್ಥದ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಬಣದ ಕೈ ಮೇಲಾಗಬಾರದೆಂದು ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶವನ್ನೇ ಡಿಕೆಶಿ ಹೈಜಾಕ್ ಮಾಡಿದ್ದರು.
ಇದೆಲ್ಲವೂ ಸಿದ್ದರಾಮಯ್ಯ ಅವರಿಗೆ ತಮ್ಮ ರಾಜಕಾರಣ ಕೊನೆಗಾಲದಲ್ಲಿದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸುತ್ತಿತ್ತು.ಹೀಗಾಗಿಯೇ ಚಾಮರಾಜನಗರದಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ. ಒಪ್ಪಂದದ ಮೇರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಪೇಲವ ಮುಖಹೊತ್ತುಕೊಂಡು ರಾಜೀನಾಮೆ ನೀಡುವುದು ನಿಶ್ಚಿತವಾಗಿದೆ ಎಂದು ಬಿಜೆಪಿ ಭವಿಷ್ಯ ನುಡಿದಿದೆ.