ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಈ ಹಿಂದೆ ಸಾಮಾಜಿಕ ಸಮಸ್ಯೆಯ ಮನನ, ಮನವರಿಕೆ ಮತ್ತು ಪರಿಹಾರ ಕಂಡುಕೊಡುವ, ತತ್ವ ಪ್ರಚಾರ, ಸಂಘಟನೆ ಹೀಗೆ ನಾನಾ ರೀತಿಯ ದೇಯೋದ್ದೇಶಗಳನ್ನು ಇಟ್ಟುಕೊಂಡು ಪಾದಯಾತ್ರೆ ನಡೆಯುತ್ತಿದ್ದವು. ಕಲ್ಯಾಣ ಕ್ರಾಂತಿಯ ನಂತರ ವಚನಕಾರರು ರಚಿಸಿದ ವಚನಗಳ ಸಂರಕ್ಷಣೆಗೋಸ್ಕರ ಕಲ್ಯಾಣ ನಾಡಿನಿಂದ ಶರಣರು ನಾನಾ ಕಡೆಗೆ ಚದುರಿದರು. ಅಂತಹ ವಚನ ಸಂರಕ್ಷಿತ ತಾಣವೇ ಈಗಿನ ಉತ್ತರ ಕನ್ನಡ ಜಿಲ್ಲೆಯ ಚನ್ನಬಸವಣ್ಣನವರ ಐಕ್ಯಸ್ಥಾನ ಉಳವಿ ಸುಕ್ಷೇತ್ರ.
ಆ ಕ್ಷೇತ್ರಕ್ಕೆ ಈಗ ವಚನ ಸಂದೇಶ ಮತ್ತು ಹಸಿರು ಜಾಗೃತಿಯ ಪಾದಯಾತ್ರೆಯ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಒಂಟಿ ಕಂಬದ ಮುರಘಾಮಠದ ತಿಪ್ಪೆರುದ್ರ ಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಒಂಟಿ ಕಂಬದ ಮುರುಘಾಮಠದ ಆವರಣದಲ್ಲಿ ಏರ್ಪಡಿಸಿದ್ದ ಪಾದಯಾತ್ರೆ ಪೂರ್ವಭಾವಿ ಸಭೆ ಸಮ್ಮುಖ ವಹಿಸಿ ಮಾಹಿತಿ ನೀಡುತ್ತಾ
ಈ ಪಾದಯಾತ್ರೆ ಬರುವ 2025 ರ ಜನವರಿ 20 ರಿಂದ ಆರಂಭವಾಗಿ ಫೆಬ್ರವರಿ ಮೊದಲ ವಾರದಲ್ಲಿ ಉಳವಿ ತಲುಪುವುದು. ಈ ಸಂದರ್ಭದಲ್ಲಿ ಪಾದಯಾತ್ರೆ ಮಾರ್ಗ ಮಧ್ಯದ ಗ್ರಾಮಗಳು, ನಗರ, ಪಟ್ಟಣ ಪ್ರದೇಶಗಳಲ್ಲಿ ನಾವು ನಮ್ಮ ದ್ಯೇಯೋದ್ದೇಶಗಳನ್ನು ಜನತೆಗೆ, ವಿದ್ಯಾರ್ಥಿಗಳಿಗೆ, ರೈತರಿಗೆ ,ಸಾರ್ವಜನಿಕರಿಗೆ, ಭಕ್ತರಿಗೆ ಮುಟ್ಟಿಸುವುದಾಗಿ ತಿಳಿಸಿದರು. ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರ ಆದೇಶದಂತೆ ಈ ಪಾದಯಾತ್ರೆಯನ್ನು ಸಂಘಟಿಸಲಾಗಿದೆ
ಪಾದಯಾತ್ರೆಯ ರೂಪುರೇಷೆಯ ಬಗ್ಗೆ, ಪಾದಯಾತ್ರೆ ಮಾಹಿತಿಯು ಹೇಗಿರಬೇಕೆಂಬ ವಿಚಾರಗಳ ಬಗ್ಗೆ ಸೇರಿದ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು.ಅದರಲ್ಲಿ ಈಚಗಟ್ಟದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್ .ತಿಪ್ಪೇಸ್ವಾಮಿ ಶ್ರೀ ಮಠ ಮಾಡುವ ಎಲ್ಲ ಕಾರ್ಯಕ್ರಮಗಳಿಗೆ ಗ್ರಾಮದ ಸಹಕಾರವಿದೆ ಎಂದು ಹೇಳಿದರು. ರೈತ ಮುಖಂಡ ಡಿ.ಎಸ್. ಮಲ್ಲಿಕಾರ್ಜುನಪ್ಪ ಮಾತನಾಡಿ ಈ ಪಾದಯಾತ್ರೆ ಯುವ ಸಮುದಾಯವನ್ನು ತಲುಪಿ ಅವರಲ್ಲಿ ಜಾಗೃತಿಯನ್ನು ಮೂಡಿಸುತ್ತಾ ಮತ್ತು ದುಶ್ಚಟಗಳನ್ನು ತ್ಯಜಿಸುವ ಬಗ್ಗೆ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.
ಪತ್ರಕರ್ತ ವೇದಮೂರ್ತಿ ಮಾತನಾಡಿ ಪಾದಯಾತ್ರೆ ಮಾಡುವುದು ಕಷ್ಟ ಸಾಧ್ಯವಾದರೂ ಅದನ್ನು ಮಾಡಿ ಜನರಲ್ಲಿ ಅರಿವನ್ನ ಬಿತ್ತುವ ಕಾರ್ಯ ಆಗಬೇಕಿದೆ. ಬಸವಾದ ಶಿವಶರಣರ ವಚನಗಳಲ್ಲಿ ಬದುಕಿಗೆ ಬೇಕಾದ ಆದರ್ಶ ಮೌಲ್ಯಗಳಿವೆ. ಅವುಗಳನ್ನು ಮತ್ತು ಅವುಗಳ ಆಶಯವನ್ನು ತಿಳಿಸುತ್ತಾ ನಡೆಯುವುದು ಈ ಪಾದಯಾತ್ರೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ರಂಗಸ್ವಾಮಿ, ಅಜಯ್ ಲೋಕೇಶ್ ಮತ್ತಿತರರು ಮಾತನಾಡಿದರು. ಸಮಾರಂಭದ ಆರಂಭಕ್ಕೆ ವಚನ ವೃಕ್ಷ ಸ್ವಾಮಿಗಳು ಪ್ರಾರ್ಥನೆ ಮಾಡಿದರು. ಕೆ.ಎನ್. ಬಸವರಾಜ್ ಅವರು ಸ್ವಾಗತಿಸಿದರು. ತಾಲೂಕಿನ ವಿವಿಧ ಗ್ರಾಮಗಳ ಮುಖಂಡರು ಹಾಗೂ ಹೊಳಲ್ಕೆರೆ ಪಟ್ಟಣದ ಕೆಲ ಮುಖಂಡರು ಭಾಗವಹಿಸಿದ್ದರು.