ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವುಗಳ ಬೆನ್ನಲ್ಲೇ ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲೇ 29 ಬಾಣಂತಿಯರು ಹಾಗೂ 1 ವರ್ಷದಲ್ಲಿ 322 ನವಜಾತ ಶಿಶುಗಳು ಮೃತಪಟ್ಟಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿರುವುದು ದುಃಖ ತರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿಷಾದಿಸಿದ್ದಾರೆ.
ಈ ಹಿಂದಿನ ಕರ್ನಾಟಕ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ದೇಶಕ್ಕೆ ಮಾದರಿಯಾಗಿದ್ದ ಆರೋಗ್ಯ ಇಲಾಖೆಯನ್ನು ಸಂಪೂರ್ಣ ಕಡೆಗಣಿಸಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ ದುರಾಡಳಿತದಲ್ಲಿ ಇಲಾಖೆಯ ಅಕ್ರಮ, ಭ್ರಷ್ಟಾಚಾರಗಳು ಲೋಕಾಯುಕ್ತ ದಾಳಿಯಿಂದ ಬಯಲಾಗುತ್ತಿವೆ.
ನಿರಂತರವಾಗಿ ಬಡಕುಟುಂಬಗಳ ತಾಯಂದಿರು ಹಾಗೂ ಹಸುಗೂಸುಗಳ ಸಾವು ನೋವುಗಳಾಗುತ್ತಿದ್ದರೂ, ಸಾರ್ವಜನಿಕರು ಬಿದಿಗಿಳಿದು ಪ್ರತಿಭಟನೆ ನಡೆಸಿದರೂ ಎಚ್ಚೆತ್ತುಕೊಂಡು ಘಟನೆಯ ಕುರಿತು ಕಠಿಣ ಕ್ರಮ ಕೈಗೊಳ್ಳಲು ತಾತ್ಸಾರ ಧೋರಣೆ ತಾಳಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನಸಾಮಾನ್ಯರು, ಬಡವರು ತಕ್ಕಪಾಠ ಕಲಿಸಲೇ ಬೇಕಿದೆ ಎಂದು ತಿಳಿಸಿದರು.
ಆಸ್ಪತ್ರೆಗಳು ಶವಾಗಾರವಾಗಿವೆ-
ಬಾಣಂತಿಯರ, ಹಸುಗೂಸುಗಳ ಸಾವು ಪ್ರಕರಣದಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಶವಾಗಾರವಾಗುತ್ತಿವೆ. ಇದಕ್ಕೆ ನೇರ ಕಾರಣ ರಾಜ್ಯ ಕಾಂಗ್ರೆಸ್‌ಸರ್ಕಾರ. ಕಾಂಗ್ರೆಸ್‌ಇದರ ಬಗ್ಗೆ ಗಮನವೇ ಹರಿಸುತ್ತಿಲ್ಲ. ಸರ್ಕಾರಕ್ಕೆ ಆಸ್ಪತ್ರೆಗಳ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ ಎಂದು ವಿಧಾನ ಪರಿಷತ್ ವಿರೋಧ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.