ಕಾಂಗ್ರೆಸ್​ ಶಾಸಕರ ವಿರುದ್ಧ ಸುಳ್ಳು ಜಾತಿ ಪ್ರಕರಣದ ತನಿಖೆಗೆ ಹೈಕೋರ್ಟ್​ ಅಸ್ತು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್​ ಶಾಸಕ ಕೊತ್ತೂರು ಮಂಜುನಾಥ್‌ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಪ್ರಕರಣದ ತನಿಖೆ ಮಾಡಲು ಹೈಕೋರ್ಟ್​ ಅನುಮತಿ ನೀಡಿದ್ದು ಇದರಿಂದ ಕಾಂಗ್ರೆಸ್ ಶಾಸಕರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣ ರದ್ದುಕೋರಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಎಫ್ಐಆರ್ ರದ್ದುಪಡಿಸಲು ನಿರಾಕರಿಸಿದೆ. ಅಲ್ಲದೇ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಪ್ರಕರಣದ ತನಿಖೆಗೆ ಆದೇಶಿಸಿದೆ. ಇದರಿಂದ ಕೋಲಾರ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್‌ಗೆ ಸಂಕಷ್ಟ ಎದುರಾಗಿದೆ.

ಇದೇ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಪ್ರಕರಣ ಸಂಬಂಧ ಫೋರ್ಜರಿ, ವಂಚನೆ, ಅಟ್ರಾಸಿಟಿ ಕಾಯ್ದೆಯಡಿ 2018ರಲ್ಲಿ ಮುಳಬಾಗಿಲು ನಗರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಅಲ್ಲದೇ ಹೈಕೋರ್ಟ್, 2018ರಲ್ಲಿ ಮಂಜುನಾಥ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿತ್ತು.

ಇದೀಗ ಈ ಪ್ರಕರಣವನ್ನು ರದ್ದುಕೋರಿ ಶಾಸಕ ಕೊತ್ತೂರು ಮಂಜುನಾಥ್‌ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಡಿಸೆಂಬರ್ 12ರಂದು ಗುರುವಾರ ವಿಚಾರಣೆ ನಡೆಸಿದ ಹೈಕೋರ್ಟ್, ಎಫ್ಐಆರ್ ರದ್ದುಪಡಿಸಲು ನಿರಾಕರಿಸಿ ಅರ್ಜಿಯನ್ನು ತಿರಸ್ಕರಿಸಿದೆ. ಅಲ್ಲದೇ ಪ್ರಕರಣದ ತನಿಖೆ ಶೀಘ್ರ ಪೂರ್ಣಗೊಳಿಸಲು ಹೈಕೋರ್ಟ್ ಸೂಚನೆ ನೀಡಿ ಆದೇಶಿಸಿದೆ.

ಏನಿದು ಪ್ರಕರಣ-
ಪರಿಶಿಷ್ಟ ಜಾತಿಗಳ ಪಟ್ಟಿಗೆ ಬರುವ ಬುಡುಗ ಜಂಗಮ ಜಾತಿಗೆ ಸೇರಿದವರೆಂದು ಘೋಷಿಸಿಕೊಂಡು ಜಿ.ಮಂಜುನಾಥ್ ಅವರು 2013ರಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಜೆಡಿಎಸ್ ಪರಾಜಿತ ಅಭ್ಯರ್ಥಿ ಮುನಿನಂಜಪ್ಪ ಜಾತಿ ಪ್ರಮಾಣದ ಸಿಂಧುತ್ವ ಪ್ರಶ್ನಿಸಿದ್ದರು.

ಪರಿಶಿಷ್ಟ ಜಾತಿಗೆ ಸೇರಿರುವುದನ್ನು ಸಾಬೀತುಪಡಿಸಲು ವಿಫಲರಾದ ಹಿನ್ನೆಲೆಯಲ್ಲಿ ಅವರ ಆಯ್ಕೆಯನ್ನು ಹೈಕೋರ್ಟ್‌2018ರ ಏಪ್ರಿಲ್‌ನಲ್ಲಿ ಅಸಿಂಧುಗೊಳಿಸಿತ್ತು. ಆ ತೀರ್ಪಿನ ವಿರುದ್ಧ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆ ಅರ್ಜಿ ವಜಾಗೊಳಿಸಿದ್ದ ಸುಪ್ರೀಂಕೋರ್ಟ್, ಜಿಲ್ಲಾಧಿಕಾರಿಗಳ ನೇತೃತ್ವದ ಜಾತಿ ಪರಿಶೀಲನೆ ಸಮಿತಿ ಜಿ.ಮಂಜುನಾಥ್‌ಅವರ ಜಾತಿಯನ್ನು ಪರಿಶೀಲಿಸಬೇಕು. ಸಮಿತಿಯ ನಿರ್ಣಯದ ಬಗ್ಗೆ ಆಕ್ಷೇಪವಿದ್ದರೆ ಪುನಃ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು ಎಂದು ಆದೇಶಿಸಿತ್ತು.

ಜಿ.ಮಂಜುನಾಥ್ ಅವರು ಬುಡುಗ ಜಂಗಮ ಜಾತಿಗೆ ಸೇರಿಲ್ಲ. ಅವರು ಬೈರಾಗಿ ಜಾತಿಗೆ ಸೇರಿದವರು ಎಂದು ಜಿಲ್ಲಾಧಿಕಾರಿಗಳ ನೇತೃತ್ವದ ಜಾತಿ ಪರಿಶೀಲನಾ ಸಮಿತಿ ನಿರ್ಣಯ ಕೈಗೊಂಡಿತ್ತು. ಬುಡುಗ ಜಂಗಮ ಪರಿಶಿಷ್ಟ ಜಾತಿಯಾದರೆ, ಬೈರಾಗಿ ಒಬಿಸಿ ಪ್ರವರ್ಗ-1ಕ್ಕೆ ಸೇರುತ್ತದೆ. ಸಮಿತಿಯ ನಿರ್ಣಯವನ್ನು ಮಂಜುನಾಥ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

- Advertisement -  - Advertisement - 
Share This Article
error: Content is protected !!
";