ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಗುವಿನ ಕಲಿಕೆಯ ಸವಾಲುಗಳನ್ನು ಗುರುತಿಸಿ ಮಾರ್ಗದರ್ಶನ ಮಾಡಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್‌ನಲ್ಲಿ ಶಾಲಾ ಭೇಟಿ ಮತ್ತು ಬೆಂಬಲ ವ್ಯವಸ್ಥೆ ಕುರಿತು ಜಿಲ್ಲೆಯ ಶಿಕ್ಷಣ ಸಂಯೋಜಕರು,
ಬಿ.ಆರ್.ಪಿ ಮತ್ತು ಸಿ.ಆರ್.ಪಿ ಗಳಿಗೆ ಗುರುವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಶೈಕ್ಷಣಿಕ ಅನುಷ್ಠಾನಾಧಿಕಾರಿಗಳು ಶಾಲಾ ಭೇಟಿ ನೀಡಿದ ಸಂದರ್ಭದಲ್ಲಿ ಶಿಕ್ಷಕರ ಬೋಧನೆ ಮತ್ತು ಮಕ್ಕಳ ಕಲಿಕೆ ಪರಿಶೀಲಿಸಿ ಧನಾತ್ಮಕ ಅಂಶಗಳನ್ನು ಗುರುತಿಸಬೇಕು.
ಮಕ್ಕಳ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಸಾಮರ್ಥ್ಯ ಗುರುತಿಸಿ ಕಲಿಕಾ ಸಾಮರ್ಥ್ಯದಲ್ಲಿ ಹಿಂದುಳಿದಿರುವ ಮಕ್ಕಳಿಗೆ ನಾವಿನ್ಯಯುತ ಚಟುವಟಿಕೆಗಳನ್ನು ಅಳವಡಿಸಿಕೊಂಡು ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಶಿಕ್ಷಕರಿಗೆ ಸಲಹೆ ನೀಡಬೇಕು ಎಂದರು.
ಉಪನ್ಯಾಸಕ ಯು. ಸಿದ್ದೇಶಿ ಮಾತನಾಡಿ, ಮಕ್ಕಳಲ್ಲಿ ಕಲಿಕಾ ಭಿನ್ನತೆಯಿರುತ್ತದೆ. ಶಿಕ್ಷಕರು ತರಗತಿ ನಿರ್ವಹಣೆಯಲ್ಲಿ ಮಕ್ಕಳ ಮನಸ್ಥಿತಿ ಅರ್ಥೈಸಿಕೊಳ್ಳಬೇಕು. ಮಕ್ಕಳ ಕಲಿಕೆಗೆ ಪೂರಕವಾದ ಚಟುವಟಿಕೆಗಳು, ಕಲಿಕಾ ಸಂಪನ್ಮೂಲಗಳನ್ನು ಬಳಸಿಕೊಂಡು ಬೋಧಿಸುವುದರಿಂದ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ತಿಳಿಸಿದರು.
ಉಪನ್ಯಾಸಕರಾದ ಎಸ್.ಬಸವರಾಜು, ಎಲ್. ರೇವಣ್ಣ, ಪದ್ಮ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ್, ಸಂತೋಷ್ ಕುಮಾರ್, ಜಾವಿದ್ ಭಾಷಾ, ಶಿಕ್ಷಣ ಸಂಯೋಜಕರಾದ ವಿನುತಾ, ಸಮೀರ ಮತ್ತು ಜಿಲ್ಲೆಯ ಎಲ್ಲಾ ತಾಲೂಕಿನ ಇ.ಸಿ.ಓ, ಬಿ.ಆರ್.ಪಿ ಹಾಗೂ ಸಿ.ಆರ್.ಪಿಯವರು ಇದ್ದರು.