ಕೊಲೆ ಆರೋಪಿಗಳಾದ ಪವಿತ್ರಾ ಗೌಡ, ದರ್ಶನ್ ಸೇರಿ 7 ಮಂದಿಗೆ ಜಾಮೀನು ಮಂಜೂರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ಪವಿತ್ರಾ ಗೌಡ
, ನಟ ದರ್ಶನ್‌ಹಾಗೂ ಇತರೆ 7 ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಕೊಲೆ ಕೇಸ್‌ನಲ್ಲಿ ಬಂಧನವಾಗಿ ಬರೋಬ್ಬರಿ 6 ತಿಂಗಳ ಬಳಿಕ ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರು ಆಗಿದೆ.

ದರ್ಶನ್ ಸೇರಿ ಮತ್ತಿತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಶುಕ್ರವಾರ ಜಾಮೀನು ಆದೇಶ ಪ್ರಕಟಿಸಿದರು.
ಕೊಲೆ ಪ್ರಕರಣದ 17 ಆರೋಪಿಗಳ ಪೈಕಿ ಈವರೆಗೂ 12 ಮಂದಿಗೆ ಜಾಮೀನು ಸಿಕ್ಕಂತಾಗಿದೆ.

ನಟ ದರ್ಶನ್‌ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ. ಜಾಮೀನಿನ ಮೇಲೆ ಬಿಡುಗಡೆ ಆಗಲಿರುವ  ಆರೋಪಿಗಳಿಗೆ ಹಲವು ಷರತ್ತುಗಳನ್ನು ಕೋರ್ಟ್ ವಿಧಿಸಿ ಆದೇಶಿದೆ.
ಕೊಲೆ ಆರೋಪಿ ದರ್ಶನ್ ಗೆ ಬೆನ್ನುನೋವು ಇದ್ದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಇತ್ತೀಚೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ಶಸ್ತ್ರಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದು ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ನಟ ದರ್ಶನ್ ಗೆ ಈಗ ಜಾಮೀನು ದೊರೆತಿರುವ ಹಿನ್ನೆಲೆಯಲ್ಲಿ, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಅನುಮಾನ, ಫಿಸಿಯೋಥೆರೆಪಿ ಚಿಕಿತ್ಸೆಯನ್ನೇ ಮುಂದುವರೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪರಪ್ಪನ ಅಗ್ರಹಾರ‌ಹಾಗೂ ವಿವಿಧ ಜೈಲುಗಳಲ್ಲಿರುವ ಆರೋಪಿಗಳಾದ ಪವಿತ್ರಾ ಗೌಡ, ಆರ್‌.ನಾಗರಾಜು, ಎಂ.ಲಕ್ಷ್ಮಣ್, ಅನು ಕುಮಾರ್‌ಅಲಿಯಾಸ್‌ಅನು, ಜಗದೀಶ್‌ಅಲಿಯಾಸ್‌ಜಗ್ಗ, ಪ್ರದೋಷ್‌ರಾವ್‌ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ.

 ವಕೀಲ ಸಿ.ವಿ.ನಾಗೇಶ್‌ ವಾದ-
ಕೊಲೆ ಆರೋಪಿ ದರ್ಶನ್‌ಪರವಾಗಿ ವಿಚಾರಣೆ ವೇಳೆ ವಾದಿಸಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್‌
, ಚಿತ್ರದುರ್ಗದ ರೇಣುಕಾಸ್ವಾಮಿ ನಟ ದರ್ಶನ್‌ಗೆಳತಿ ಪವಿತ್ರಾ ಗೌಡರನ್ನು ಮಂಚಕ್ಕೆ ಕರೆದಿದ್ದಾರೆ. ಸಮಾಜದಲ್ಲಿ ಮಹಿಳೆಯರನ್ನು ಗೌರವಿಸದ, ಸರಿಯಾದ ನಡತೆ ಹೊಂದಿರದ, ಕಾನೂನಿಗೆ ಎಳ್ಳಷ್ಟೂ ಗೌರವ ನೀಡದ ವ್ಯಕ್ತಿಯನ್ನು ಈ ಪ್ರಕರಣದಲ್ಲಿ ರಾಷ್ಟ್ರೀಯ ನಾಯಕ ಎಂದು ಬಿಂಬಿಸಲಾಗುತ್ತಿದೆ. ಬಣ್ಣದ ಬದುಕಿನಲ್ಲಿ ನಾಯಕನಾಗಿದ್ದರೂ ದರ್ಶನ್‌ರನ್ನು ವಿಲನ್‌ರೀತಿ ಕಾಣಲಾಗುತ್ತಿದೆ. ದರ್ಶನ್‌ಅವರಿಗೆ ರೇಣುಕಾಸ್ವಾಮಿ ಕೊಲೆ ಮಾಡುವ ಉದ್ದೇಶವಿದ್ದರೆ ನೀರು, ಊಟ ಕೊಡಿ ಎಂದು, ಆತನ ಚಿತ್ರ ವಿಡಿಯೋ ಸೆರೆ ಹಿಡಿದು ಪೊಲೀಸ್‌ಠಾಣೆಗೆ ಕರೆದುಕೊಂಡು ಹೋಗಿ ಬಿಡಿ ಎಂದು ಏಕೆ ಹೇಳಿದ್ದರು? ಎಂದು ವಿವರಿಸಿದ್ದರು.

ರೇಣುಕಾಸ್ವಾಮಿಯ ವೃಷಣಕ್ಕೆ ತೀವ್ರವಾಗಿ ಏಟು ಬಿದ್ದಿದ್ದರಿಂದ ರಕ್ತ ಸೋರಿಕೆಯಾಗಿದೆ‌ಎನ್ನಲಾಗಿದೆ. ರೇಣುಕಾಸ್ವಾಮಿಯ ದೇಹದಲ್ಲಿ ಪತ್ತೆಯಾಗಿರುವುದು 2.5 ಸೆಂಟಿ ಮೀಟರ್‌ಗಾಯ ಮಾತ್ರ. ಉಳಿದವು ತರಚಿದ ಮಾದರಿಯ ಗಾಯಗಳು. ಇದನ್ನು ವೈದ್ಯರು ತಮ್ಮ ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಬೇಕಿತ್ತು. 10-15 ತರಚಿದ ಗಾಯಗಳಿಂದ ರಕ್ತ ಬಂದಿದೆ ಎಂದು ಹೇಳಬೇಕಿತ್ತು. ಆದರೆ, ತನಿಖಾಧಿಕಾರಿ ಪ್ರಶ್ನೆ ಎತ್ತಿದ ಮೇಲೆ ಆಗಸ್ಟ್‌23ರಂದು ರಕ್ತ ಸೋರಿಕೆಯಾಗಿದೆ ಎಂದು ವರದಿ ನೀಡಿದ್ದಾರೆ. ಇದಕ್ಕೆ ಆಧಾರವೇನು? ಇಲ್ಲಿ ಸಕಾರಣವಿರಬೇಕಿತ್ತು.

ಜೂನ್‌8ರಂದು ರೇಣುಕಾಸ್ವಾಮಿ ಸಾವನ್ನಪ್ಪುವುದಕ್ಕೂ ಮುನ್ನ ಎರಡು ತಾಸು ಮುಂಚಿತವಾಗಿ ಊಟ ಸೇವಿಸಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಹೇಳಿದ್ದಾರೆ. ಆದರೆ, ರೇಣುಕಾಸ್ವಾಮಿಗೆ ಊಟ ತಂದರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆಯೇ ವಿನಾ ಆತ ಅದನ್ನು ಸೇವಿಸಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಆದರೆ, ರೇಣುಕಾಸ್ವಾಮಿ ಕೊನೆಯ ಬಾರಿಗೆ ಊಟ ಮಾಡಿರುವುದು ಜೂನ್‌8ರ ಮಧ್ಯಾಹ್ನ 12ರ ಸುಮಾರಿಗೆ ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿನ ದುರ್ಗಾ ರೆಸ್ಟೋರೆಂಟ್‌ನಲ್ಲಿ ಎಂಬುದಕ್ಕೆ ಸಾಕ್ಷಿ ಇದೆ. ಇದಕ್ಕೆ ರೇಣುಕಾಸ್ವಾಮಿಯೇ ಹಣ ಪಾವತಿಸಿದ್ದಾರೆ ಎಂದು ವಾದಿಸಿದ್ದರು.

ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ.ಪ್ರಸನ್ನಕುಮಾರ್‌, ಪ್ರಕರಣದ ಎಲ್ಲಾ ಆರೋಪಿಗಳ ಡಿಜಿಟಲ್‌ಹೆಜ್ಜೆ ಗುರುತುಗಳು ಘಟನೆಯಲ್ಲಿ ಅವರ ಪಾತ್ರವನ್ನು ನಿರೂಪಿಸುತ್ತದೆ. ಆರೋಪಿಗಳೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ದರ್ಶನ್‌ಜೊತೆ ಕೆಲಸ ಮಾಡುತ್ತಿದ್ದವರೇ. ಇಡೀ ಪ್ರಕರಣ ಪಿತೂರಿಯ ಭಾಗವಾಗಿ ನಡೆದಿದೆ. ರೇಣುಕಾಸ್ವಾಮಿ ದೇಹದಲ್ಲಿ 17 ಮೂಳೆ ಮುರಿತ ಮತ್ತು 39 ಗಾಯಗಳು ಪತ್ತೆಯಾಗಿವೆ. ದರ್ಶನ್‌ಹಲ್ಲೆಯಿಂದ ರೇಣುಕಾಸ್ವಾಮಿ ವೃಷಣಕ್ಕೆ ತೀವ್ರ ಹಾನಿಯಾಗಿದೆ ಎಂದು ವಾದಿಸಿದ್ದರು.

ರೇಣುಕಾಸ್ವಾಮಿಯನ್ನು ದರ್ಶನ್‌ಬೆಂಗಳೂರಿಗೆ ಕರೆಸಿರುವ ವಿಚಾರವನ್ನು ತನ್ನ ಗೆಳತಿ ಪವಿತ್ರಾ ಗೌಡಗೆ ವಾಟ್ಸ್‌ಆ್ಯಪ್‌ಕರೆ ಮಾಡಿ ತಿಳಿಸಿದ್ದಾರೆ. ರೇಣುಕಾಸ್ವಾಮಿಯ ಕೊಲೆ ಮುಚ್ಚಿಹಾಕುವುದಕ್ಕೆ ದರ್ಶನ್‌37.40 ಲಕ್ಷ ರೂಪಾಯಿ ಹಣ ನೀಡಿರುವುದು ಮತ್ತು ಆ ನಂತರ ಬೇರೆ ಬೇರೆ ಆರೋಪಿಗಳಿಂದ ನಿರ್ದಿಷ್ಟ ಮೊತ್ತವನ್ನು ತನಿಖಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ದರ್ಶನ್‌, ಪವಿತ್ರಾ ಗೌಡ ಮತ್ತಿತರರು ಕಾರಿನಲ್ಲಿ ಬಂದಿರುವುದಕ್ಕೆ ಸಿಸಿಟಿವಿ ದೃಶ್ಯಾವಳಿ, ಕರೆ ದಾಖಲೆಗಳಿವೆ. ರೇಣುಕಾಸ್ವಾಮಿ ಹತ್ಯೆಯು ಐಪಿಸಿ ಸೆಕ್ಷನ್‌302 ಅಡಿ ವ್ಯವಸ್ಥಿತ ಕೊಲೆಯೇ ವಿನಾ ಐಪಿಸಿ ಸೆಕ್ಷನ್‌304ರ ಅಡಿಯ ನರಹತ್ಯೆ ಅಪರಾಧವಾಗುವುದಿಲ್ಲ ಎಂದು ವಾದಿಸಿದ್ದರು.

ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್‌, ದರ್ಶನ್‌ಕಾರು ಚಾಲಕ ಎಂ.ಲಕ್ಷ್ಮಣ್‌ಪರವಾಗಿ ಹಿರಿಯ ವಕೀಲ ಅರುಣ್‌ಶ್ಯಾಮ್‌, ಪ್ರದೋಷ್ ಪರವಾಗಿ ವಕೀಲ ಕೆ.ದಿವಾಕರ್‌, 11ನೇ ಆರೋಪಿಯಾಗಿರುವ ದರ್ಶನ್‌ವ್ಯವಸ್ಥಾಪಕ ಆರ್‌.ನಾಗರಾಜು ಪರವಾಗಿ ಹಿರಿಯ ವಕೀಲ ಸಂದೇಶ್‌ಚೌಟ ವಾದ ಮಂಡಿಸಿದ್ದರು.

ಮಗನನ್ನು ಕೊಂದವರ ಭೇಟಿ ಮಾಡಲ್ಲ-
ಮಗನನ್ನು ಕೊಲೆಗೈದ ಆರೋಪಿಗಳಿಗೆ ಜಾಮೀನು ಸಿಕ್ಕಿರೋದು ಸಹಜವಾಗೇ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯರನ್ನು ಖಿನ್ನರಾಗಿಸಿದೆ. ಆರೋಪಿ ದರ್ಶನ್ ತಮ್ಮನ್ನು ಕಾಣಲು ಬಂದರೆ ಅವರೊಂದಿಗೆ ಮಾತಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ತಾನು ಯೋಚನೆ ಮಾಡಿಲ್ಲ, ತಮಗೆ ಮಗ ಬೇಕು, ಅವನಿಗಾಗಿ ಪರಿತಪಿಸುತ್ತಿದ್ದೇವೆ. ಬೇರೆಯವರ ಅವಶ್ಯಕತೆ ನಮಗಿಲ್ಲ, ನಾಡಿನ ಕಾನೂನು ವ್ಯವಸ್ಥೆ ಮೇಲೆ ತನಗೆ ಅಪಾರ ವಿಶ್ವಾಸವಿದೆ ಎಂದು ಹೇಳಿದರು.

 

 

- Advertisement -  - Advertisement - 
Share This Article
error: Content is protected !!
";