ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ, ಮೂರು ಆರೋಪಿಗಳ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳನ್ನು ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹರಿಯಾಣದ ಗುರು ಗ್ರಾಮ್‌ನಲ್ಲಿ ಎ-
1 ಆರೋಪಿ ಪತ್ನಿ ನಿಖಿತಾಳನ್ನು ಪೊಲೀಸರು ಬಂಧಿಸಿದ್ದರೆ, ಅತ್ತ ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಅತ್ತೆ ಎ2 ಆರೋಪಿ ನಿಶಾ ಸಿಂಘಾನಿಯಾ ಹಾಗೂ ಎ-3 ಬಾಮೈದ ಅನುರಾಗ್‌ಸಿಂಘಾನಿಯಾರನ್ನ ಪೊಲೀಸರು ಬಂಧಿಸಿದ್ದಾರೆ.

ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್​​ ಬರೆದಿದ್ದು, ಪ್ರಮುಖವಾಗಿ ಪತ್ನಿ, ಅತ್ತೆ ಮತ್ತು ಬಾಮೈದನ ಹೆಸರು ಉಲ್ಲೇಖ ಮಾಡಿದ್ದನ್ನು ಸ್ಮರಿಸಬಹುದಾಗಿದೆ. ಇತ್ತೀಚೆಗೆ ಬೆಂಗಳೂರು ಪೊಲೀಸರು ಬಾಮೈದ ಮತ್ತು ಅತ್ತೆಯನ್ನು ಬಂಧಿಸಿದ್ದರು.

ಅತುಲ್ ಪತ್ನಿ ನಿಖಿತಾಳ ಬಂಧನಕ್ಕಾಗಿ ಪೊಲೀಸರು 2 ದಿನ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ತಲೆಮರೆಸಿಕೊಂಡಿದ್ದ ನಿಖಿತಾ ಸೇರಿ ಎಲ್ಲ ಆರೋಪಿಗಳು ಅಲಹಾಬಾದ್ ಹೈಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಯುಪಿ ಬಿಟ್ಟು ಬೇರೆಡೆ ತಲೆಮರೆಸಿಕೊಂಡಿದ್ದ ಶಂಕೆ ಇತ್ತು. ಮೊಬೈಲ್​ಗಳನ್ನ ಸ್ವಿಚ್ ಆಪ್ ಮಾಡಿಕೊಂಡು ಸ್ನೇಹಿತರ ಸಹಾಯ ಪಡೆದು ಒಂದು ಕಡೆ ಇರದೆ, ವಾಸಸ್ಥಳ ಬದಲಿಸುತ್ತಿದ್ದರು. ಆದರೆ ಒಂದು ಬಾರಿ ಕರೆ ಮಾಡಿ ನೆರವು ಕೇಳಿದ್ದರಿಂದ ಮೊಬೈಲ್ ಟವರ್ ಮೂಲಕ ಲಾಕ್ ಆಗಿದ್ದಾರೆ.

ವೈಟ್ ಫೀಲ್ಡ್​​ ವಿಭಾಗದ ಡಿಸಿಪಿ ಡಾ.ಶಿವಕುಮಾರ್ ಗುಣಾರೆ ಮಾಧ್ಯಮದವರೊಂದಿಗೆ ಮಾತನಾಡಿ, ನಿಖಿತಾಳನ್ನು ಗುರುಗ್ರಾಮದ ಪಿಜಿಯೊಂದರಲ್ಲಿ ಬಂಧಿಸಲಾಗಿದೆ. ಇನ್ನಿಬ್ಬರನ್ನು ಪ್ರಯಾಗ್ ರಾಜ್​ನ ಹೋಟೆಲ್ ಬಳಿ ಬಂಧಿಸಲಾಗಿದೆ. ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್​ ಆದೇಶ ಮಾಡಿದೆ.

ನಿಷ್ಪಕ್ಷಪಾತವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಈಗಾಗಲೇ ಟೆಕ್ನಿಕಲ್ ಟೀಂನವರು ಅತುಲ್ ಸೂಸೈಡ್‌ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸರಿಗೆ ಅತುಲ್‌ನ ಲ್ಯಾಪ್‌ಟಾಪ್, ಮೊಬೈಲ್ ಪಾಸ್‌ವರ್ಡ್ ಪತ್ತೆಯಾಗಿದ್ದರಿಂದ ತನಿಖೆ ಚುಕುಗೊಳಿಸಲು ನೆರವಾಗಿದೆ ಎಂದು ಅವರು ತಿಳಿಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";